ಚಿಕ್ಕಮಗಳೂರು: ಉರಿ ಗೌಡ, ನಂಜೇಗೌಡರ (Urigowda and Nanjegowda) ಪ್ರಕರಣದ ಬಗ್ಗೆ ಈಗ ಹೆಚ್ಚು ಚರ್ಚೆ ಬೇಡ ಎಂದು ಆದಿಚುಂಚನಗಿರಿ ಸಂಸ್ಥಾನ ಮಠದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ ಅವರು ಸ್ಪಷ್ಟವಾಗಿ ಹೇಳಿದ ನಂತರವೂ ವಿವಾದ, ಮಾತು, ಚರ್ಚೆಗಳು ಮುಂದುವರಿದಿವೆ.
ಉರಿ ಗೌಡ ಮತ್ತು ನಂಜೇಗೌಡ ಪ್ರಕರಣಕ್ಕೆ ಸಂಬಂಧಿಸಿ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಅವರು ಕೂಡಾ ನಮ್ಮ ಜತೆ ಮಾತನಾಡಿದ್ದಾರೆ. ನಾನು ಕೂಡ ಸ್ವಾಮೀಜಿಯವರ ಜೊತೆ ವಿಷಯ ಚರ್ಚೆ ಮಾಡಿದ್ದೇನೆ. ನಾವು ದಾಖಲೆಗಳನ್ನು ಸಂಗ್ರಹ ಮಾಡುತ್ತಿದ್ದೇವೆ. ದಾಖಲೆ ಸಂಗ್ರಹಿಸಿದ ಬಳಿ ಅವರ ಜೊತೆ ನಾವು ಚರ್ಚೆ ಮಾಡುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು. ದಾಖಲೆಗಳನ್ನು ಸಂಗ್ರಹಿಸುವುದಕ್ಕೇ ತಂಡಗಳನ್ನು ರಚನೆ ಮಾಡಲಾಗಿದೆ ಎಂದೂ ರವಿ ಅವರು ಹೇಳಿದ್ದರು.
ಕಾಂಗ್ರೆಸ್ ಮತ್ತು ಜೆಡಿಎಸ್‌ನವರು ಟಿಪ್ಪು ಸುಲ್ತಾನ್‌ನ್ನು ಆರಾಧಿಸುವುದನ್ನು ಬಿಡಬೇಕು ಎಂದು ಚಿಕ್ಕಮಗಳೂರಿನಲ್ಲಿ ಮಾತನಾಡುತ್ತಾ ಹೇಳಿದರು ಸಿ.ಟಿ. ರವಿ.
ʻʻʻಟಿಪ್ಪು ಮಾಡಿದ ಅನ್ಯಾಯ, ಅವನ ಮತಾಂಧತೆ, ಕನ್ನಡ ವಿರೋಧಿ ವರ್ತನೆಗಳು ಸೇರಿದಂತೆ ಅವರ ವಿರುದ್ಧ ಸಾವಿರಾರು ದಾಖಲೆಗಳಿವೆ. ಟಿಪ್ಪು ಊರಿನ ಹೆಸರು ಬದಲಿಸಿರೋದಕ್ಕೆ ಸಾವಿರ ದಾಖಲೆಗಳಿವೆ/ ಮೈಸೂರು ಅರಸರಿಗೆ ಮೋಸ ಮಾಡಿದ್ದಕ್ಕೆ ನೂರಾರು ದಾಖಲೆಗಳು ಇವೆʼʼ ಎಂದು ಹೇಳಿದರು ಸಿ.ಟಿ. ರವಿ.
ʻʻಇತಿಹಾಸದಲ್ಲಿ ನಮಗೆ ಹೈದರಾಲಿ ನಂಬಿಕೆ ದ್ರೋಹಿ ಅಂತ ನಮಗೆ ಕಲಿಸಬೇಕಾಗಿತ್ತು. ಆದರೆ, ಅದರ ಬದಲಿಗೆ ಕಾಂಗ್ರೆಸ್ ಟಿಪ್ಪುವನ್ನು ವೈಭವಿಕರಿಸಿದೆʼʼ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಸಿ.ಟಿ. ರವಿ ಹೇಳಿದರು.
ನಿರ್ಮಲಾನಂದ ನಾಥ ಸ್ವಾಮೀಜಿ ಏನು ಹೇಳಿದ್ದರು?
ಇತ್ತೀಚೆಗೆ ವಿವಾದ ತೀವ್ರ ಸ್ವರೂಪ ಪಡೆದಾಗ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಯಾರೂ ಕೂಡಾ ಇದರ ಬಗ್ಗೆ ಹೆಚ್ಚು ಚರ್ಚೆ ಮಾಡಬಾರದು ಎಂದು ಹೇಳಿದ್ದರು.
ಅವರ ಹೇಳಿಕೆಯ ಪೂರ್ಣಪಾಠ ಇಲ್ಲಿದೆ
ಸಿ.ಟಿ ರವಿ ಇರಬಹುದು, ಅಶ್ವತ್ಥ ನಾರಾಯಣ ಅವರಿರಬಹುದು, ಗೋಪಾಲಯ್ಯ ಅವರಿರಬಹುದು, ಈ ವಿಷಯದಲ್ಲಿ ಯಾರೆಲ್ಲ ಮಾತನಾಡುತ್ತಿದ್ದಾರೋ ಅವರೆಲ್ಲರಿಗೂ ಇತಿಹಾಸದ ಹಿನ್ನೆಲೆಯನ್ನು ಮನದಟ್ಟು ಮಾಡಿಕೊಟ್ಟಿದ್ದರಿಂದ ಅವರೆಲ್ಲರೂ ಸುಮ್ಮನಾಗಬೇಕು, ಸುಮ್ಮನಾಗಿದ್ದಾರೆ ಎಂದು ಭಾವಿಸಿದ್ದೇನೆ.
ಕಲ್ಪನೆ ಮಾಡಿಕೊಂಡು ಬರೆಯುವುದು ಕಾದಂಬರಿ ಆಗುತ್ತದೆ, ಶಾಸನಗಳು ಮತ್ತು ಇತಿಹಾಸದ ಹಿನ್ನೆಲೆಯನ್ನು ಇಟ್ಟುಕೊಂಡು ಬರೆದಿರುವುದು ಮುಂದಿನ ಪೀಳಿಗೆಗೆ ಒಂದಿಷ್ಟು ಶಕ್ತಿಯಾಗುತ್ತದೆ. ಅಂತಹುದ್ಯಾವುದೂ ಇದುವರೆಗೆ ಕಂಡುಬಾರದೆ ಇರುವುದರಿಂದ ಹೇಳಿಕೆಗಳ ಮೂಲಕ ಯುವಕರಲ್ಲಿ ಮತ್ತು ಸಮಕಾಲೀನ ಜಗತ್ತಿನಲ್ಲಿ ಗೊಂದಲವನ್ನು ಸೃಷ್ಟಿ ಮಾಡಿ ವ್ಯಕ್ತಿಗಳ ಶಕ್ತಿಯನ್ನು ಹಾಳು ಮಾಡಬಹುದು, ಸಮುದಾಯಕ್ಕೆ ಧಕ್ಕೆಯನ್ನು ಕೂಡಾ ತರಬಾರದು.
ಇನ್ನು ಮುಂದುವರಿದು, ಯಾವ ವಿಚಾರ ಪ್ರಸ್ತಾಪ ಆಗುತ್ತಿದೆಯೋ ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಉರಿಗೌಡರು ಮತ್ತು ನಂಜೇಗೌಡರ ಬಗೆಗೆ ಇತಿಹಾಸವನ್ನು ಸಾರುವಂತಹ, ನಮೂದು ಆಗಿರುವಂಥ ಅಥವಾ ಶಾಸನಗಳು ಸಿಕ್ಕದ್ದೇ ಆದರೆ ಶ್ರೀಕ್ಷೇತ್ರ ಆದಿಚುಂಚನಗಿರಿ ಸಂಸ್ಥಾನ ಮಠಕ್ಕೆ ಸರಿಯಾದ ರೀತಿಯಲ್ಲಿ ತಂದೊಪ್ಪಿಸಿದ್ದೇ ಆದಲ್ಲಿ ಎಲ್ಲವನ್ನೂ ಕೂಡಾ ಕ್ರೋಡೀಕರಿಸಿ, ಯಾಕೆಂದರೆ ಶಾಸನ ತಜ್ಞರು ಇರುತ್ತಾರೆ, ಕಾರ್ಬನ್ ಡೇಟಿಂಗ್ ಟೆಕ್ನಾಲಜಿ ನಮ್ಮಲ್ಲಿದೆ, ಇತಿಹಾಸವನ್ನು ವಿಮರ್ಶೆ ಮಾಡುವ ಐತಿಹಾಸಿಕ ಶ್ರೇಷ್ಠ ವಿಮರ್ಶಕರು ಇದ್ದಾರೆ, ಇವರೆಲ್ಲರನ್ನೂ ಇಟ್ಟುಕೊಂಡು ತಂದುಕೊಟ್ಟ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ಒರೆಗೆ ಹಚ್ಚಿ ನಂತರದಲ್ಲಿ ಒಂದು ನಿರ್ಧಾರಕ್ಕೆ ಬರಲಾಗುತ್ತದೆ.
ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳು ಒಂದು ಗೊಂದಲಕ್ಕೆ ಮತ್ತು ಸಮುದಾಯದ ಭಾವನೆಗಳಿಗೆ ಧಕ್ಕೆ ತರುವಂಥ ಕೆಲಸ ಆಗುತ್ತಿದೆ. ಇದನ್ನು ತಕ್ಷಣ ನಿಲ್ಲಿಸಬೇಕು ಎನ್ನುವುದು ಕೂಡಾ ನಮ್ಮ ಆಗ್ರಹ.
ಇದನ್ನೂ ಓದಿ : Tippu sultan : ಬಿಜೆಪಿಗೆ ನಾಯಕರೇ ಇಲ್ಲ, ಅದಕ್ಕಾಗಿ ಉರಿ ಗೌಡ, ನಂಜೇಗೌಡರನ್ನು ಕರೆತಂದಿದ್ದಾರೆ ಎಂದ ಚೆಲುವರಾಯಸ್ವಾಮಿ