ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಎಂದು ಹೇಳಿಕೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ತಿರುಗಿಬಿದ್ದಿದ್ದು, ಭಾರಿ ಪ್ರತಿಭಟನೆ ನಡೆಸಿದ್ದಾರೆ. ಸಿ.ಟಿ. ರವಿ (CT Ravi) ಮನೆಗೆ ಮುತ್ತಿಗೆ ಹಾಕಲು ಯತ್ನಿಸಿರುವ ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿ ಕಾರ್ಯಕರ್ತರು ಅಡ್ಡಗಟ್ಟಿದ್ದು, ಎರಡೂ ಕಡೆಯವರನ್ನು ನಿಯಂತ್ರಿಸುವಲ್ಲಿ ಪೊಲೀಸರು ಹೈರಾಣಾಗಿದ್ದರು.
ತಾಲೂಕು ಕಚೇರಿಯಿಂದ ಮೆರವಣಿಗೆ ಹೊರಟಿದ್ದ ಕಾಂಗ್ರೆಸ್‌ನ ನೂರಾರು ಕಾರ್ಯಕರ್ತರು ಸಿ.ಟಿ. ರವಿ ಮನೆಗೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ನಗರದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಅವರ ಮನೆಯತ್ತ ನುಗ್ಗಿದ್ದಾರೆ. ಈ ವೇಳೆ ಪ್ರತಿಭಟನಾಕಾರರನ್ನು ರಸ್ತೆ ಮಧ್ಯೆಯೇ ಪೊಲೀಸರು ತಡೆದಿದ್ದಾರೆ. ಇನ್ನು ಇದೇ ಹೊತ್ತಿಗೆ ಸಿ.ಟಿ.ರವಿ ಮನೆ ಸಮೀಪದ ರಸ್ತೆ ಮಧ್ಯೆಯೇ ನಿಂತ ಬಿಜೆಪಿ ಕಾರ್ಯಕರ್ತರು, “ತಾಕತ್ತಿದ್ದರೆ ಬನ್ನಿ ನೋಡೋಣ” ಸವಾಲು ಹಾಕಿದ್ದಾರೆ. ಇದು ಭಾರಿ ಘರ್ಷಣೆಗೆ ಕಾರಣವಾಗಿತ್ತು.
ಮುಲ್ಲಾ ಸಿದ್ದರಾಮಯ್ಯ ಎಂದು ಬಿಜೆಪಿ ಘೋಷಣೆ
ಮುಲ್ಲಾ ಸಿದ್ದರಾಮಯ್ಯ ಎಂದು ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದಂತೆ, ಪೊಲೀಸರು ಅವರನ್ನು ವಶಕ್ಕೆ ಪಡೆಯಲು ಮುಂದಾದರು. ಆಗ “ನಮ್ಮನ್ನು ಏಕೆ ಬಂಧನ ಮಾಡುತ್ತೀರಾ? ಪ್ರತಿಭಟನೆ ಮಾಡುತ್ತಿರುವ ಕಾಂಗ್ರೆಸ್‌ನವರನ್ನು ಬಂಧಿಸಿ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ನೂಕಾಟವಾಯಿತು.
ಇದನ್ನೂ ಓದಿ | CT Ravi v/s Siddaramaiah | ಸಿದ್ರಾಮುಲ್ಲಾ ಖಾನ್ ಹೇಳಿಕೆ ಸರಿ: ಸಿ.ಟಿ. ರವಿ ಬೆಂಬಲಕ್ಕೆ ನಿಂತ ಅಶ್ವತ್ಥನಾರಾಯಣ
ಪೊಲೀಸರು ಹೈರಾಣ
ಸಿ.ಟಿ. ರವಿ ಮನೆ ಸಮೀಪದ ರಸ್ತೆಯ ಒಂದು ಕಡೆ ಕಾಂಗ್ರೆಸ್ ಭಾಷಣ, ಮತ್ತೊಂದೆಡೆ ಬಿಜೆಪಿ ಪ್ರತಿಭಟನೆಯ ಕೂಗು ಕೇಳಿಬರುತ್ತಿತ್ತು. ಈ ಹಿನ್ನೆಲೆಯಲ್ಲಿ ರಸ್ತೆಯ ಒಂದೊಂದು ಬದಿಗೆ ಒಂದೊಂದು ಪಕ್ಷದ ಕಾರ್ಯಕರ್ತರನ್ನು ಬಿಟ್ಟು ಪೊಲೀಸರು ರಸ್ತೆ ಮಧ್ಯೆ ನಿಂತಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. 100ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಕಾಂಗ್ರೆಸ್ ಮುಖಂಡರ ವಶ
ಸಿ.ಟಿ. ರವಿ ಮನೆಗೆ ಮುತ್ತಿಗೆ ಹಾಕಲು ಯತ್ನ ಮಾಡಿದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸೇರಿದಂತೆ ಹಲವು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಜಯ ಘೋಷ ಕೂಗಿದರು. ಶಿಳ್ಳೆ, ಕೇಕೆ ಹಾಕಿ ಸಂತಸ ವ್ಯಕ್ತಪಡಿಸಿದರು. ಇದು ಕಾಂಗ್ರೆಸ್ ಕಾರ್ಯಕರ್ತರನ್ನು ಮತ್ತಷ್ಟು ರೊಚ್ಚಿಗೆಬ್ಬಿಸಿತು.
ಕಾಂಗ್ರೆಸ್ಸಿಗರ ಮೇಲೆ ಹಲ್ಲೆ?
ಕೇಸರಿ ಶಲ್ಯ ಹಾಕಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರು ಸಿ.ಟಿ.ರವಿ ಮನೆಗೆ ಮುತ್ತಿಗೆ ಹಾಕಲು ಯತ್ನ ಮಾಡಿದ್ದಾರೆ. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರಿಗೆ ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಗರಸಭೆ ಮಾಜಿ ಸದಸ್ಯ ಪುಷ್ಪರಾಜ್ ಅವರಿಂದ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ | CT Ravi | ದೇಶದ್ರೋಹಿಗಳ ಪಾಲಿಗೆ ನರೇಂದ್ರ ಮೋದಿ ಭಸ್ಮಾಸುರ, ಉಳಿದವರಿಗೆ ಕಲ್ಪವೃಕ್ಷ, ಕಾಮಧೇನು ಎಂದ ಸಿಟಿ ರವಿ