ಬೆಂಗಳೂರು: ಹಿಂದಿ ದಿವಸ್ ಆಚರಣೆಯ ಕುರಿತು ಜೆಡಿಎಸ್ ವತಿಯಿಂದ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದು, ಟ್ವಿಟರ್‌ನಲ್ಲಿ ಹಿಂದಿ ದಿವಸ್ ಶುಭಾಶಯವನ್ನೂ ಕೋರಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಸಿ.ಟಿ. ರವಿ, 1949ರಲ್ಲಿ ಕೇಂದ್ರದಲ್ಲಿ ಅಮಿತ್ ಶಾ ಅಧಿಕಾರದಲ್ಲಿ ಇರಲಿಲ್ಲ. ಅವತ್ತು ನೆಹರು, ಪಟೇಲರು ಅಧಿಕಾರದಲ್ಲಿದ್ದರು. ಸಂಪರ್ಕ ಭಾಷೆ ಹಿಂದಿ ಮಾಡಿದ್ದು ಅಮಿತ್ ಶಾ ಅಲ್ಲ. 1996ರಲ್ಲಿ ದೇವೆಗೌಡರು ಪ್ರಧಾನಿಯಾಗಿದ್ದಾಗ ಹಿಂದಿ ದಿವಸ್ ಆಚರಣೆ ಮಾಡಿದ್ದರು. ಜನತಾಸಮೂಹದ ನಾಯಕರು ಬೆಂಗಳೂರಿಗೆ ಬಂದಾಗ ಬೃಹತ್ ಸಮಾವೇಶ ನಡೆಸಿ ಹಿಂದಿಯಲ್ಲೇ ಭಾಷಣ ಮಾಡಿದ್ದರು.
1990ರಲ್ಲಿ ಇದ್ದ ರಾಜಕಾರಣ ಯಾಕೆ ಈಗ ಇಲ್ಲ. ನಾವು ಎಲ್ಲ ಭಾಷೆಗಳಿಗೂ ಸಮಾನ ಗೌರವ, ಸಮಾನ ಅವಕಾಶ ಕೊಡುತ್ತಿದ್ದೇವೆ. NEP ಮೂಲಕ ಎಲ್ಲ ಭಾಷೆ ಕಲಿಯಲು ಅವಕಾಶ ಮಾಡಿಕೊಡಲಾಗಿದೆ. ಭಾರತೀಯತೆ ಎಂದರೆ ಕೇವಲ ಹಿಂದಿ ಅಲ್ಲ. ಎಲ್ಲ ಭಾಷೆಗಳನ್ನೂ ಒಳಗೊಳ್ಳುವುದು ಭಾರತೀಯತೆ. ಜೆಡಿಎಸ್‌ನವರಿಗೆ ಮೋದಿ, ಅಮಿತ್ ಶಾ ವಿಚಾರ ಬಂದಾಗ ಮಾತ್ರ ಹಿಂದಿ ವಿರೋಧ ನೆನೆಪಾಗುತ್ತದೆ. ಕೇಂದ್ರ ಸರ್ಕಾರ ಯಾರ ಮೇಲಾದರೂ ಹಿಂದಿ ಹೇರಿದ್ದಾರಾ? ಎಲ್ಲರೂ ಕನ್ನಡ ಮಾತನಾಡುತ್ತಿದ್ದಾರೆ. ಪಾರ್ಲಿಮೆಂಟ್‌ನಲ್ಲಿ ಕನ್ನಡ ಮಾತನಾಡಲು ಅವಕಾಶ ಇದೆ ಎಂದರು.
ದೆಹಲಿಯಲ್ಲೂ ಕನ್ನಡ ರಾಜ್ಯೋತ್ಸವ ಮಾಡುತ್ತೇವೆ ಎಂದ ಸಿ.ಟಿ. ರವಿ, ಬೇರೆ ರಾಜ್ಯದ ಉತ್ಸವಗಳನ್ನೂ ಮಾಡುತ್ತೇವೆ. ಭಾರತ್ ತೇರೆ ತುಕ್ಡೆ ಹೋಂಗೆ ಎನ್ನುವ ರೀತಿ ನಾವು ವಿಭಜನೆ ಮಾಡುವುದಿಲ್ಲ ಎಂದರು. ಸಿ.ಎಂ. ಇಬ್ರಾಹಿಂ ವಾಗ್ದಾಳಿ ಕುರಿತು ಪ್ರತಿಕ್ರಿಯಿಸಿ, ಟಿಪ್ಪುವನ್ನು ಆರಾಧಿಸುವವರು ಕನ್ನಡದ ವಿರೋಧಿಗಳು. ಅಂಥವರಿಂದ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ. ನಮ್ಮ ತಾಯಿ, ಅಜ್ಜಿ ಎಲ್ಲರೂ ಕನ್ನಡಿಗರೇ. ನಾನು ಕನ್ನಡವನ್ನೇ ಮಾತನಾಡುತ್ತೇನೆ, ಕನ್ನಡದಲ್ಲೇ ಬೈಯುತ್ತೇನೆ ಎಂದರು.
ದೇವೇಗೌಡರ ಆಡಿಯೊ ಟ್ವೀಟ್
ಹಿಂದಿ ದಿವಸವನ್ನು ಸಮರ್ಥನೆ ಮಾಡಿಕೊಂಡ ಹಿನ್ನೆಲೆಯಲ್ಲೇ, ಟ್ವಿಟ್ಟರ್‌ನಲ್ಲಿ ಶುಭಾಶಯವನ್ನೂ ಸಿ.ಟಿ. ರವಿ ಕೋರಿದ್ದಾರೆ. ಹಿಂದಿಯಲ್ಲೇ ಶುಭಾಶಯ ಕೋರಿರುವ ಸಿ.ಟಿ. ರವಿ, ಅದರ ಜತೆಗೆ ಆಕಾಶವಾಣಿಯ ಆಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ 1996ರ ಅಕ್ಟೋಬರ್ 5ರಂದು ಲಖನೌನಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿರುವ ಆಡಿಯೊ ಇದು. ʼಹಿಂದಿ ನನ್ನ ರಾಷ್ಟ್ರ ಭಾಷೆ, ಅದು ನನ್ನದೇ ಭಾಷೆʼ ಎಂದಿರುವ ದೇವೇಗೌಡರು, ಸ್ವಲ್ಪ ಸಮಯದಲ್ಲೇ ಹಿಂದಿಯಲ್ಲಿ ಮಾತನಾಡುವುದನ್ನು ಕಲಿಯುತ್ತೇನೆ ಎಂದು ಭರವಸೆ ನೀಡಿದ್ದಾರೆ. ಇದೆಲ್ಲದರ ಜತೆಗೆ, ದೇವೇಗೌಡರು ನಂತರದಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡಿದ್ದನ್ನು, ಈಗ ರಾಜ್ಯ ಜೆಡಿಎಸ್ ಅಧ್ಯಕ್ಷರಾಗಿರುವ ಸಿ.ಎಂ. ಇಬ್ರಾಹಿಂ ಅವರೇ ಹಿಂದಿಗೆ ಅನುವಾದ ಮಾಡಿದ್ದಾರೆ.
ಈ ಟ್ವೀಟ್ ಮೂಲಕ, ಜೆಡಿಎಸ್ ಪ್ರತಿಭಟನೆಗೆ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ | ಹಿಂದಿಯನ್ನು ಏಕೆ ವಿರೋಧ ಮಾಡ್ಬೇಕೊ ಗೊತ್ತಿಲ್ಲ: ಹಿಂದಿ ದಿವಸ್ ಕುರಿತು ಯು.ಟಿ. ಖಾದರ್ ಪ್ರತಿಕ್ರಿಯೆ