Site icon Vistara News

Electricution | ಅಡಕೆ ಕೀಳಲು ಹೋಗಿದ್ದ ಕೃಷಿಕ ವಿದ್ಯುತ್‌ ತಂತಿ ತುಳಿದು ತೋಟದಲ್ಲೇ ಮೃತ್ಯು

power bill

ಬೆಂಗಳೂರು: ತೋಟಕ್ಕೆ ಅಡಕೆ ಕೀಳಲು ಹೋದಾಗ ತುಂಡಾದ ವಿದ್ಯುತ್‌ ತಂತಿ (Current Shock) ತುಳಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬೆಸ್ಕಾಂನ ಮಧುಗಿರಿ ವಿಭಾಗದ ಬ್ರಹ್ಮಸಂದ್ರ ಗ್ರಾಮದ ಎಲ್. ಎಚ್. ಪಾಳ್ಯದಲ್ಲಿ ಭಾನುವಾರ ಸಂಭವಿಸಿದೆ.

ಮೃತ ವ್ಯಕ್ತಿಯನ್ನು ನಾಗರಾಜು (26) ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಬೆಸ್ಕಾಂನ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. F7 ಅಮಲಗುಂಡಿ ನೀರಾವರಿ ಪಂಪ್‌ ಸೆಟ್‌ ಫೀಡರ್‌ಗೆ ಸಂಪರ್ಕ ಕಲ್ಪಿಸುವ ವಿದ್ಯುತ್‌ ತಂತಿ ತುಳಿದು ನಾಗರಾಜು ಮೃತ ಪಟ್ಟಿದ್ದು, ಸ್ಥಳಕ್ಕೆ ಇಲೆಕ್ಟ್ರಿಕಲ್‌ ಇನ್ಸ್‌ಪೆಕ್ಟರೇಟ್‌ ಭೇಟಿ ನೀಡಿ ತನಿಖೆ ಕೈಗೆತ್ತಿಕೊಂಡಿದ್ದಾರೆ.

ನಾಗರಾಜು ಅಡಕೆ ಕೀಳಲು ಹೋದ ಸಂದರ್ಭದಲ್ಲಿ ವಿದ್ಯುತ್‌ ತಂತಿ ತುಳಿದು ರೈತ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ. ಇಲೆಕ್ಟ್ರಿಕಲ್‌ ಇನ್ಸ್‌ ಪೆಕ್ಟರೇಟ್‌ ಅವರು ವರದಿ ನೀಡಿದ ನಂತರ ಪರಿಹಾರ ಮೊತ್ತವನ್ನು ಮೃತ ಕುಟುಂಬಕ್ಕೆ ನೀಡಲಾಗುವುದು ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್‌ ಬೀಳಗಿ ತಿಳಿಸಿದ್ದಾರೆ. ಶಿರಾ ಗ್ರಾಮಾಂತರ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕರ್ತವ್ಯ ನಿರತ ಬೆಸ್ಕಾಂ ಲೈನ್‌ ಮೆನ್‌ ಸಾವು- ಪರಿಹಾರ ಮೊತ್ತ ಬಿಡುಗಡೆ

ಇತ್ತೀಚೆಗೆ ಸುರಿದ ಭಾರಿ ಮಳೆಗೆ ವಿದ್ಯುತ್‌ ಸಂಪರ್ಕ ಕಡಿತಗೊಂಡ ಕಂಬದ ಸಂಪರ್ಕ ಮರುಜೋಡಣೆ ಮಾಡಲು ಹೋಗಿ ಬೆಸ್ಕಾಂನ ಲೈನ್‌ ಮನ್‌ ಮಹೇಶ್‌ ಗೌಡರ (38) ಅವರು ಗುಬ್ಬಿ ತಾಲೂಕಿನ ತಿಪ್ಪೂರು ಕೆರೆಯಲ್ಲಿ ಮುಳುಗಿ ಮೃತ ಪಟ್ಟಿರುವ ಘಟನೆ ಸೆಪ್ಟೆಂಬರ್‌ 10 ರಂದು ಸಂಭವಿಸಿತ್ತು.

ಮೃತಪಟ್ಟ ಸಿಬ್ಬಂದಿ ಮಹೇಶ್‌ ಗೌಡರ ಕುಟುಂಬಕ್ಕೆ ಜೀವ ರಕ್ಷಣೆ ಯೋಜನೆಯಡಿಯಲ್ಲಿ ರೂ.17,000 ರೂಪಾಯಿಗಳನ್ನು ಪಾವತಿಸಲಾಗಿದ್ದು, ಮರಣ ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿಯನ್ನು ತಕ್ಷಣವೇ ಬಿಡುಗಡೆ ಮಾಡಲಾಗುವುದು ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಅಪಾಯದ ಅರಿವಿದ್ದರೂ ಕೂಡ ಜೀವವನ್ನು ಲೆಕ್ಕಸಿದೆ, ಸಿಬ್ಬಂದಿ ವಿದ್ಯುತ್‌ ಸಂಪರ್ಕ ಮರು ಜೋಡಿಸಲು ಹೋಗಿ ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವುದು ದುರ್ದೈವದ ಸಂಗತಿ. ಮಹೇಶ್‌ ಗೌಡರ ಅವರ ಕುಟುಂಬಕ್ಕೆ ಮರಣ ಪರಿಹಾರ ನಿಧಿ ಚೆಕ್‌ ಹಸ್ತಾಂತರಿಸಲಾಗುವುದು ಎಂದು ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಕಾರ್ಮಿಕ ಪರಿಹಾರ ನಿಧಿಯಿಂದ ಮೃತ ಮಹೇಶ್‌ ಗೌಡರ ಕುಟುಂಬಕ್ಕೆ ಅವರ ಸೇವಾವಧಿ ಆಧಾರದ ಮೇಲೆ 10 ಲಕ್ಷ ರೂಪಾಯಿ ಪರಿಹಾರವನ್ನು ಬೆಸ್ಕಾಂ ನೀಡಲಿದ್ದು, ಈ ಸಂಬಂಧ ಪೂರಕ ದಾಖಲೆಗಳನ್ನು ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜತೆಗೆ ಅನುಕಂಪದ ಆಧಾರದ ಅಡಿಯಲ್ಲಿ ಅವರ ಪತ್ನಿಗೆ ಬೆಸ್ಕಾಂನಲ್ಲಿ ʼಡಿʼ ಗ್ರೂಪ್‌ ನೌಕರಿ ನೀಡಲಾಗುದು ಎಂದು ಬೆಸ್ಕಾಂ ಎಂಡಿ ತಿಳಿಸಿದ್ದಾರೆ. ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್‌ ಕಂಪನಿ ಲಿಮಿಟೆಡ್‌ ನಿಂದ ವಯಕ್ತಿಕ ಅಪಘಾತ ಗುಂಪು ವಿಮಾ ಯೋಜನೆಯಡಿಯಲ್ಲಿ 10 ಲಕ್ಷ ರೂಪಾಯಿ ಪರಿಹಾರ ಸಿಗಲಿದೆ ಎಂದರು.

ಘಟನೆ ವಿವರ

ಕೆರೆಯ ಮಧ್ಯದಲ್ಲಿ ಅಳವಡಿಸಿದ್ದ ವಿದ್ಯುತ್‌ ಕಂಬದ ವಿದ್ಯುತ್‌ ಸಂಪರ್ಕ ಮರು ಜೋಡಿಸಲು ಮಹೇಶ್‌ ಗೌಡರ ಅವರು ಕೆರೆಯಲ್ಲಿ ಈಜಿಕೊಂಡು ಹೋಗಿದ್ದರು, ಜತೆಯಲ್ಲಿದ್ದ ಸಿಬ್ಬಂದಿ ಎಚ್ಚರಿಸಿದ್ದರೂ ಕೂಡ ಈಜಲು ಮುಂದಾದರು. ವಿದ್ಯುತ್‌ ಕಂಬದಿಂದ ಸುಮಾರು 15 ಅಡಿ ದೂರದಲ್ಲಿ ಕೆರೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ತಕ್ಷಣವೇ ಅಗ್ನಿ ಶಾಮಕ ಸಿಬ್ಬಂದಿ ಸಹಾಯದಿಂದ ಮೃತದೇಹವನ್ನು ಹೊರ ತೆಗೆಯಲು ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಮರುದಿನ ಮೃತ ದೇಹವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಸೋಮವಾರ ಬಾಗಲಕೋಟೆಯಲ್ಲಿ ಮಹೇಶ್‌ ಗೌಡರ ಅಂತ್ಯ ಸಂಸ್ಕಾರ ನೆರವೇರಿತು ಎಂದು ಬೆಸ್ಕಾಂ ಎಂಡಿ ತಿಳಿಸಿದ್ದಾರೆ.

ಇದನ್ನೂ ಓದಿ | ವಿದ್ಯುತ್‌ ಬಿಲ್ ಪಾವತಿಗೆ 6 ತಿಂಗಳ ಕಾಲಾವಕಾಶ ಇಲ್ಲ: ಬೆಸ್ಕಾಂ ಸ್ಪಷ್ಟನೆ

Exit mobile version