ಬೆಂಗಳೂರು: ವಂಚನೆ ಪ್ರಕರಣವೊಂದರಲ್ಲಿ ತನಿಖೆ ನಡೆಸಲು ಹೋಗಿದ್ದ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು (Cyber Crime Police) ಕೇರಳದಲ್ಲಿ ಬಂಧಿತರಾಗಿದ್ದರು. ಸದ್ಯ ಜಾಮೀನು ಪಡೆದು ಹೊರ ಬಂದಿರುವ ನಾಲ್ವರನ್ನು ಎಸಿಪಿ ವರದಿ ಆಧರಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ (Bengaluru City Police Commissioner Dayanand) ಎಲ್ಲರನ್ನೂ ಅಮಾನತು ಮಾಡಿದ್ದಾರೆ.
ಸೈಬರ್ ವಂಚನೆ (fraud case) ಪ್ರಕರಣ ಸಂಬಂಧ ಕೇರಳಕ್ಕೆ ತೆರಳಿದ್ದ ಸೈಬರ್ ಕ್ರೈಂ ಪೊಲೀಸರು (Whitefield Cyber Crime Police) ಆರೋಪಿಗಳಿಂದ 3 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಡಿ ಕೇರಳದಲ್ಲಿ ಬಂಧಿತರಾಗಿದ್ದರು. ಸಿಇಎನ್ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಸೇರಿ ನಾಲ್ವರು ಬಂಧಿತರಾಗಿದ್ದರು. ಎಸಿಪಿ ವರದಿ ಆಧರಿಸಿ ಇನ್‌ಸ್ಪೆಕ್ಟರ್ ಶಿವಪ್ರಕಾಶ್, ಹೆಡ್‌ಕಾನ್ಸ್‌ಟೇಬಲ್ ವಿಜಯ್ ಕುಮಾರ್, ಶಿವಣ್ಣ ಹಾಗೂ ಕಾನ್ಸ್‌ಟೇಬಲ್ ಸಂದೇಶ್ ಅವರನ್ನು ಅಮಾನತು ಮಾಡಲಾಗಿದೆ.
ಏನಿದು ಪ್ರಕರಣ?
ಕಳೆದ ಜೂನ್ 2ರಂದು ಚಂದಕ್ ಶ್ರೀಕಾಂತ್‌ಗೆ ಅಪರಿಚಿತ ವ್ಯಕ್ತಿ ನೀತಾ ಸಂಪತ್ ಎಂಬುವವರು ಟೆಲಿಗ್ರಾಮ್ ಮೂಲಕ ಸಂಪರ್ಕ ಮಾಡಿದ್ದರು. ಪಾರ್ಟ್ ಟೈಂ ಜಾಬ್ (Part time job) ಬಗ್ಗೆ ತಿಳಿಸಿ, ತಾವು ಕಳಿಸಿದ ಯುಆರ್‌ಎಲ್ ಲಿಂಕ್ ಮೂಲಕ ಸೈಟ್‌ನಲ್ಲಿ ಜಾಯಿನ್ ಆಗಿ. ಬಳಿಕ ಅದರಲ್ಲಿ ಪ್ರಾಡಕ್ಟ್ಸ್ ರಿವಿವ್ಯೂ ಬಗ್ಗೆ ಹೇಳಿದರೆ ಕಮೀಷನ್ ಪಡೆಯಬಹುದು ಎಂದು ಆಮಿಷವನ್ನು ತೋರಿದ್ದರು. ಇದನ್ನು ನಂಬಿ ಚಂದಕ್ ಶ್ರೀಕಾಂತ್ ಹಂತ ಹಂತವಾಗಿ ಬರೋಬ್ಬರಿ 26 ಲಕ್ಷ ಹಣವನ್ನು ವರ್ಗಾವಣೆ ಮಾಡಿದ್ದರು.
ಹಣ ವರ್ಗಾವಣೆ ಆಗುತ್ತಿದ್ದಂತೆ ನೀತಾ ಸಂಪತ್ ಸಂಪರ್ಕಕ್ಕೆ ಸಿಗದೆ ಇದ್ದಾಗ ಚಂದಕ್ ತಾವು ಮೋಸ ಹೋಗಿರುವುದು ಗೊತ್ತಾಗಿದೆ. ಕೂಡಲೇ ಈ ಸಂಬಂಧ ವೈಟ್‌ಫೀಲ್ಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೆಲಸದ ಬಗ್ಗೆ ಹೇಳಿ ಹಣ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿರುವ ಅಪರಿಚಿತ ವ್ಯಕ್ತಿ ನೀತಾ ಸಂಪತ್‌ರನ್ನು ಪತ್ತೆ ಮಾಡಿ, ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರು ದಾಖಲಿಸಿದ್ದರು.
ಇದನ್ನೂ ಓದಿ: Muslim couple : ಕಾರ್ಗಿಲ್‌ನಲ್ಲಿ ರಾಷ್ಟ್ರಧ್ವಜ ಹಾರಿಸಲು ಬೈಕ್‌ನಲ್ಲಿ ಹೊರಟಿದ್ದಾರೆ ಮಂಗಳೂರಿನ ಮುಸ್ಲಿಂ ದಂಪತಿ!
ದೂರು ದಾಖಲಿಸಿಕೊಂಡ ವೈಟ್‌ಫೀಲ್ಡ್ ಸಿಇಎನ್ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದರು. ಮೊದಲಿಗೆ ಮಡಿಕೇರಿಯ ಐಸಾಕ್ ಎಂಬಾತನ ಬಗ್ಗೆ ಸುಳಿವು ಸಿಕ್ಕಿತ್ತು. ಅಲ್ಲಿ ಹೋಗಿ ಪರಿಶೀಲನೆ ನಡೆಸಿದಾಗ ಐಸಾಕ್ ಅಕೌಂಟ್‌ನಲ್ಲಿ 2 ಕೋಟಿ ಹಣ ವರ್ಗಾವಣೆ ಆಗಿರುವುದು ಪತ್ತೆ ಆಗಿತ್ತು. ವೈಟ್ ಫೀಲ್ಡ್ ಸಿಇಎನ್ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಇದರ ಜಾಡನ್ನು ಹಿಡಿದಾಗ ಐಸಾಕ್ ಎಂಬಾತನ ಜತೆ ಆನ್‌ಲೈನ್ ವ್ಯವಹಾರ ನಡೆಸುತ್ತಿದ್ದ ನೌಶಾದ್ ಎಂಬಾತ ಕೇರಳದಲ್ಲಿ ವಾಸವಾಗಿರುವ ಸುಳಿವು ಸಿಕ್ಕಿತ್ತು.
ಹೀಗಾಗಿ ಕೇರಳದ ಕೊಚ್ಚಿಗೆ ತೆರಳಲು ಸಿದ್ಧತೆ ನಡೆಸಿ ಕೊನೆಗೆ ಕೇರಳ ಕಲ್ಲೆಂಚೇರಿಗೆ ನಗರದ ಪೊಲೀಸ್ ಟೀಂ ತಲುಪಿತ್ತು. ಅಲ್ಲಿ ನೆಟ್ವರ್ಕ್ ಬೇಸಸ್ ಮೇಲೆ ನೌಶಾದ್‌ನನ್ನ ವಶಕ್ಕೆ ಪಡೆದ ಶಿವಪ್ರಕಾಶ್ ಟೀಂ ಒಂದಷ್ಟು ವಿಚಾರಣೆ ನಡೆಸಿತ್ತು. ಬಳಿಕ ನೌಶಾದ್ ಅಲ್ಲಿದ್ದ ಸ್ಥಳೀಯ ಕಲ್ಲೇಂಚೇರಿ ಠಾಣೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಶಿವಪ್ರಕಾಶ್ ಮತ್ತು ತಂಡ 3 ಲಕ್ಷ ರೂಪಾಯಿಗೂ ಅಧಿಕ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಕಲ್ಲಂಚೇರಿ ಪೊಲೀಸರಿಗೆ ದೂರು ನೀಡಿದ್ದ.
ಈ ದೂರಿನನ್ವಯ ಕಲ್ಲಂಚೇರಿ ಪೊಲೀಸರು ವೈಟ್‌ಫೀಲ್ಡ್‌ನ ಸಿಇಎನ್‌ನ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದರು. ಈಗಾಗಲೇ ಆಗಸ್ಟ್ 2ರಂದು ಕಲ್ಲಂಚೇರಿ ಪೊಲೀಸರು ನಾಲ್ವರ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದಾರೆ. ಹಣ ನೀಡದೆ ಇದ್ದರೆ ಕ್ರಿಪ್ಟೋ ಕರೆನ್ಸಿ ಪ್ರಕರಣದಲ್ಲಿ ನಿಖಿಲ್, ನೌಶಾದ್ ಹಾಗು ಅಖಿಲ್‌ನನ್ನು ಆರೋಪಿಗಳಾಗಿ ಮಾಡುವುದಾಗಿ ವೈಟ್‌ಫೀಲ್ಡ್ ಪೊಲೀಸರು ಬೆದರಿಕೆ ಹಾಕಿದ್ದಾರೆ ಎಂದು ಎಫ್‌ಐಆರ್‌ನಲ್ಲಿಉಲ್ಲೇಖಿಸಲಾಗಿದೆ.
ಇತ್ತ ವಿಚಾರ ತಿಳಿಯುತ್ತಿದ್ದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು, ವೈಟ್‌ಫೀಲ್ಡ್ ಎಸಿಪಿ ನೇತೃತ್ವದ ತಂಡವನ್ನು ಕೇರಳಕ್ಕೆ ಕಳಿಸಿ ಘಟನೆಯ ನಿಖರ ಮಾಹಿತಿಯನ್ನು ಪಡೆಯಲು ಸೂಚನೆ ನೀಡಿದ್ದಾರೆ. ಸದ್ಯ ಜಾಮೀನಿನ ಮೇಲೆ ವೈಟ್‌ಫೀಲ್ಡ್ ಪೊಲೀಸರನ್ನು ಬಿಟ್ಟು ಕಳಿಸಿದ್ದು, ಈಗ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ ಈ ನಾಲ್ವರನ್ನು ಅಮಾನತು ಮಾಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ