ಶಿವಮೊಗ್ಗ (ರಿಪ್ಪನ್ ಪೇಟೆ): ಕೆವೈಸಿ ಅಪ್‌ಡೇಟ್ (KYC Update) ಮಾಡಬೇಕು ಎಂದು ನಂಬಿಸಿ ಒಟಿಪಿ ನಂಬರ್ ಪಡೆದ ಸೈಬರ್ ಕಳ್ಳರು (Cyber Crime) 1.80 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದಲ್ಲಿ ನಡೆದಿದೆ. ಚೌಡೇಶ್ವರಿ ಬೀದಿಯ ಸ್ವಾಮಿ (55) ವಂಚನೆಗೊಳಗಾದವರು.
ಭಾರತದಲ್ಲಿ ನೋಟ್ ಬ್ಯಾನ್ ಆದ ನಂತರ ಜನ ಡಿಜಿಟಲ್ ಹಣಕಾಸಿನ ವ್ಯವಹಾರದ ಕಡೆ ಮುಖ ಮಾಡಲಾಗಿತ್ತು. ಇದರಿಂದ ಜೀವನ ಒಂದು ಮಟ್ಟಕ್ಕೆ ಸುಧಾರಿಸಿತು ಎನ್ನುವಾಗಲೇ ಡಿಜಿಟಲ್ ಮೋಸಗಳು ಹೆಚ್ಚುತ್ತಿದ್ದು, ಹಣ ಕಳೆದುಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ.
ಕಳೆದ ಏಪ್ರಿಲ್ 12ರ ಬುಧವಾರದಂದು ಬ್ಯಾಂಕ್ ಸಿಬ್ಬಂದಿ ಸೋಗಿನಲ್ಲಿ ಸ್ವಾಮಿಯವರ ಮೊಬೈಲ್‌ಗೆ ಕರೆ ಮಾಡಿದ ಅಪರಿಚಿತರು, ನಿಮ್ಮ ಬ್ಯಾಂಕ್ ಖಾತೆಯ ಕೆವೈಸಿ ಅಪ್‌ಡೇಟ್ ಮಾಡಬೇಕಿದ್ದು, ಕೆಲವು ಮಾಹಿತಿ ನೀಡಬೇಕೆಂದು ಹೇಳಿದ್ದಾರೆ. ಅದರಂತೆ ಸ್ವಾಮಿ ಅಪರಿಚಿತರು ಕೇಳಿದ ಮಾಹಿತಿ ನೀಡಿದ್ದಾರೆ. ನಂತರ ನಿಮ್ಮ ಮೊಬೈಲ್‌ಗೆ ಬಂದಿರುವ ಒಟಿಪಿ ನಂಬರ್ ಹೇಳುವಂತೆ ಸೂಚಿಸಿದ್ದಾರೆ. ಸ್ವಾಮಿ ನಾಲ್ಕೈದು ಬಾರಿ ಒಟಿಪಿ ನಂಬರ್ ಹೇಳಿದ್ದಾರೆ. ಅಷ್ಟರಲ್ಲಾಗಲೇ ಸ್ವಾಮಿ ಅವರ ಖಾತೆಯಿಂದ ವಂಚಕನ ಖಾತೆಗೆ ಕ್ರಮವಾಗಿ 98,500 , 50,000 ಮತ್ತು 32,600 ರೂ. ವರ್ಗಾವಣೆ ಆಗಿದೆ.
ಇದ್ಯಾವುದರ ಅರಿವೇ ಇಲ್ಲದ ಜಿ.ಎಂ. ಸ್ವಾಮಿ ಕೆಲ ಸಮಯದ ನಂತರ ಮೊಬೈಲ್‌ಗೆ ಬಂದ ಮೆಸೇಜ್ ಅನ್ನು ಗಮನಿಸಿದಾಗ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗಿ ಮೋಸ ಹೋಗಿರುವ ಮಾಹಿತಿ ತಿಳಿದುಬಂದಿದೆ.
ಇದನ್ನೂ ಓದಿ: Infertility problem: ಪ್ರತಿ ಆರು ಜನರ ಪೈಕಿ ಒಬ್ಬರಿಗೆ ಬಂಜೆತನ ಸಮಸ್ಯೆ; ವಿಶ್ವ ಆರೋಗ್ಯ ಸಂಸ್ಥೆ ಕಳವಳ
ಅಮಾಯಕ ಕೂಲಿ ಕಾರ್ಮಿಕರಾದ ಜಿ.ಎಂ. ಸ್ವಾಮಿ ಸೈಬರ್ ಕಳ್ಳರ ಕೈಚಳಕದಿಂದ ಮನೆ ಮಾರಿ ಹೊಂದಿಸಿಟ್ಟಿದ್ದ ಲಕ್ಷಾಂತರ ರೂಪಾಯಿಯನ್ನು ಕಳೆದುಕೊಂಡಿದ್ದಾರೆ. ಈ ಬಗ್ಗೆ ಶಿವಮೊಗ್ಗದ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.