ಬೆಂಗಳೂರು: ಮಾಂಡೌಸ್ ಚಂಡಮಾರುತ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮೂರು ದಿನದಿಂದ ಬಿಟ್ಟೂ ಬಿಡದೇ ಮಳೆಯಾಗುತ್ತಿದ್ದು, ಸೋಮವಾರ ಮುಂಜಾನೆ ಕೂಡ ಮಳೆ ಸುರಿಯತೊಡಗಿದೆ. ಆಂಧ್ರ- ತಮಿಳುನಾಡು ಗಡಿ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ.
ಬೆಂಗಳೂರು, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತುಂತುರು ಮಳೆಯಾಗುತ್ತಿದೆ. ನಾಡಿನ ಇತರ ಕಡೆಗಳಲ್ಲಿ ಮೋಡ ಕವಿದ ವಾತಾವರಣ ಕಂಡುಬಂದಿದೆ. ತುಮಕೂರು, ಚಿಕ್ಕಬಳ್ಳಾಪುರ ಮುಂತಾದ ಕಡೆಯ ಗಿರಿ ಪ್ರದೇಶಗಳು ಕೂಡ ಮಂಜು ಕವಿದ ವಾತಾವರಣದಿಂದ ಕೂಡಿದ್ದು, ಮಲೆನಾಡಿನಂತೆ ಭಾಸವಾಗುತ್ತಿವೆ.
ಬೆಂಗಳೂರಿನಲ್ಲಿ ಮುಂಜಾನೆಯೇ ಬಿಡದೇ ಮಳೆ ಸುರಿಯತೊಡಗಿದ್ದರಿಂದ ಕೆಲಸಕ್ಕೆ ಹೋಗುವವರು ತುಸು ತೊಂದರೆ ಅನುಭವಿಸಿದರು. ಟ್ರಾಫಿಕ್ ತುಸು ಅಸ್ತವ್ಯಸ್ತಗೊಂಡಿತು.
ಯೆಲ್ಲೋ ಅಲರ್ಟ್
ಇನ್ನೂ 3 ದಿನ ರಾಜ್ಯದಲ್ಲಿ ಮಳೆ ಮುಂದುವರಿಯಲಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲೂ ಮಳೆ ಸಾಧ್ಯತೆ ಇದೆ. ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರಿನಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉಷ್ಣಾಂಶದಲ್ಲೂ ಭಾರಿ ಇಳಿಕೆ ಕಾಣುವ ಸೂಚನೆ ಇದೆ. ಚಳಿ ಜೊತೆ ತುಂತುರುಮಳೆ, ಉತ್ತರ, ದಕ್ಷಿಣ ಒಳನಾಡು ಭಾಗಗಳಲ್ಲೂ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಶಾಲೆಗಳಿಗೆ ರಜೆ
ಕೋಲಾರ ಜಿಲ್ಲೆಯಾದ್ಯಂತ ಬಿಡದೇ ಸುರಿಯುತ್ತಿರುವ ಗಾಳಿಮಳೆಯಿಂದಾಗಿ ವಿದ್ಯುತ್ ಕಂಬಗಳು ಅಲ್ಲಲ್ಲಿ ನೆಲಕ್ಕೆ ಉರುಳಿವೆ. ಕೆಜಿಎಫ್‌ನ ಬೆಮೆಲ್ ಬಡಾವಣೆಯಲ್ಲಿ ಮರಗಳು ನೆಲಕ್ಕುರುಳಿವೆ. ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳ ಸಮೀಪ ಸುತ್ತಾಡದಂತೆ ಕೋಲಾರ ಜಿಲ್ಲಾಧಿಕಾರಿ ವೆಂಕಟ್ ರಾಜಾ ಘೋಷಣೆಯಲ್ಲಿ ಸೂಚಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾಂಡೌಸ್ ಚಂಡಮಾರುತ ಹಿನ್ನೆಲೆಯಲ್ಲಿ ಮೋಡ ಕವಿದ ವಾತಾವರಣವಿದ್ದು, ಶೀತ ಗಾಳಿ ಚಳಿ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಮುಂಜಾಗ್ರತೆಯಾಗಿ ಶಾಲಾ- ಕಾಲೇಜುಗಳಿಗೆ ರಜೆಯನ್ನು ಜಿಲ್ಲಾಧಿಕಾರಿ ಎನ್.ಎಮ್ ನಾಗರಾಜ್ ಘೋಷಿಸಿದ್ದಾರೆ.
ಮಲೆನಾಡಿನಂತಾದ ದೇವರಾಯನದುರ್ಗ
ಕಲ್ಪತರು ನಾಡು ತುಮಕೂರು ಥೇಟ್ ಮಲೆನಾಡಿನಂತಾಗಿ ಬದಲಾಗಿದೆ. ದೇವರಾಯನದುರ್ಗ ಗಿರಿಧಾಮದ ಸುತ್ತಲೂ ಮಂಜು ಕವಿದ ವಾತಾವರಣ ನಿರ್ಮಾಣವಾಗಿದ್ದು, ಮುಳ್ಳಯ್ಯನಗಿರಿಯಂತೆ ಭಾಸವಾಗ್ತಿದೆ . ಈ ದೃಶ್ಯ ವೈಭವವನ್ನ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಹರಿದುಬರುತ್ತಿದೆ. ಬೆಟ್ಟದ ತುಂಬಾ ಮಂಜು ಮುಸುಕಿ ಕತ್ತಲು ಆವರಿಸಿದ್ದರಿಂದ ಪ್ರವಾಸಿಗರು ತಮ್ಮ ವಾಹನಗಳ ಹೆಡ್‌ಲೈಟ್ ಆನ್ ಮಾಡಿಕೊಂಡೇ ಸಾಗುತ್ತಿದ್ದದ್ದು ಕಂಡುಬಂತು.
ತಿರುಪತಿ ಬಂದ್
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿಯಲ್ಲಿ ಮಳೆ ಕಡಿಮೆಯಾಗುವವರೆಗೆ ಭಕ್ತರಿಗೆ ಪ್ರವೇಶವಿಲ್ಲ ಎಂದು ತಿರುಪತಿ ತಿರುಮಲ ದೇವಸ್ಥಾನದ ಅಧಿಕಾರಿಗಳು ಘೋ಼ಷಿಸಿದ್ದಾರೆ. ಶ್ರೀವಾರಿಮೆಟ್ಟು ರಸ್ತೆ ಬಂದ್ ಆಗಿದ್ದು, ಮೆಟ್ಟಿಲುಗಳ ಮೇಲೆ ನೀರು ಹರಿಯುತ್ತಿರುವುದರಿಂದ ಬೆಳಗ್ಗೆ 8ರಿಂದ ಪಾದಯಾತ್ರೆಯಲ್ಲಿ ಭಕ್ತರಿಗೆ ಅನುಮತಿ ನಿರಾಕರಿಸಲಾಗಿದೆ.
ದೋಣಿಯಲ್ಲಿ ಸಿಲುಕಿದ ಭಕ್ತರು
ಆಂಧ್ರಪ್ರದೇಶದಲ್ಲಿ ಮಾಂಡೌಸ್ ಚಂಡಮಾರುತದಿಂದಾಗಿ ಸಿಂಗರಾಯಕೊಂಡ ಮಂಡಲದ ಉಲ್ಲಪಾಲೆಂ ಬಳಿ ದೋಣಿಯೊಂದು ಸಮುದ್ರದಲ್ಲಿ ಸಿಲುಕಿಕೊಂಡಿದೆ. ಬೋಟ್‌ನಲ್ಲಿ ಏಳು ಜನ ಭಕ್ತಾದಿಗಳು ಸಿಕ್ಕಿಬಿದ್ದಿದ್ದು, ಚಂಡಮಾರುತದ ತೀವ್ರತೆಯಿಂದಾಗಿ ಪರಿಹಾರ ಕಾರ್ಯಾಚರಣೆಗೆ ಅಡ್ಡಿಯಾಗಿದೆ.
ಇದನ್ನೂ ಓದಿ | Cyclone Mandous | ಮಾಂಡೌಸ್ ಅಬ್ಬರ; ಡಿ.12ರಂದು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ