Site icon Vistara News

Cyclone Mandous | ಮಳೆಗೆ ಕೃಷಿಕರ ಬದುಕು ದುಸ್ತರ; ಬೆಳೆ ಹಾನಿ, ಮಾರುಕಟ್ಟೆಗಳು ಕೆಸರುಮಯ

Cyclone Mandous ಬೆಳೆ ಹಾನಿ

ಬೆಂಗಳೂರು: ರಾಜ್ಯಾದ್ಯಂತ ಮಳೆಯ (Cyclone Mandous) ಆರ್ಭಟ ಮುಂದುವರಿದಿದ್ದು, ಜನರು ತತ್ತರಿಸಿ ಹೋಗಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇದ್ದು, ಆಗಾಗ ಜಿಟಿಜಿಟಿ ಮಳೆಯಾಗುತ್ತಿದೆ. ಶಾಲಾ-ಕಾಲೇಜು, ಕಚೇರಿಗಳಿಗೆ ತೆರಳು ಜನರು ಪರದಾಡುವಂತಾಗಿದೆ.

ಚಿಕ್ಕಬಳ್ಳಾಪುರದಲ್ಲಿ ರಾತ್ರಿಯಿಡಿ ಎಡೆಬಿಡದೆ ಮಳೆ ಸುರಿಯುತ್ತಿದೆ. ನಿರಂತರ ಮಳೆಗೆ ಕೃಷಿಕರ ಬದುಕು ದುಸ್ತರವಾಗಿದೆ. ಒಂದು ಕೊಯ್ಲಿಗೆ ಬಂದಿದ್ದ ಬೆಳೆಗಳು ಮಣ್ಣು ಪಾಲಾಗುತ್ತಿದ್ದರೆ, ಮತ್ತೊಂದು ಕಡೆ ದನಕರುಗಳಿಗೆ ಮೇವು ಒದಗಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಜಮೀನಿನಲ್ಲಿ ಕೊಳೆಯುತ್ತಿರುವ ಭತ್ತದ ಬೆಳೆ
ಮಾಂಡೌಸ್ ಚಂಡಮಾರುತ ಎಫೆಕ್ಟ್‌ನಿಂದಾಗಿ ಅರಮನೆ ನಗರಿ ಮೈಸೂರಿನಲ್ಲಿ ನಿರಂತರ ಮಳೆಯಾಗುತ್ತಿದೆ. ಒಂದೇ ಹದದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜಮೀನಿನಲ್ಲಿ ಭತ್ತದ ಬೆಳೆ ಕೊಳೆಯುವ ಹಂತ ತಲುಪಿದ್ದು, ಮೊಳಕೆ ಒಡೆಯುವ ಹಂತ ತಲುಪಿದೆ.

ತಿ.ನರಸೀಪುರ ತಾಲೂಕಿನ ಶಂಭುದೇವನಪುರದ ರೈತ ನಂಜುಂಡಸ್ವಾಮಿ ಅಳಲು ತೋಡಿಕೊಂಡಿದ್ದು, ಕಷ್ಟಪಟ್ಟು ಬೆಳೆದ ಬೆಳೆಯು ಕಣ್ಣೆದುರಿಗೆ ಹಾಳಾಗುತ್ತಿದೆ. ಕಟಾವು ಮಾಡಲು ಮಳೆ ಬಿಡುವು ನೀಡುತ್ತಿಲ್ಲ. ಇದರಿಂದಾಗಿ ಬೆಳೆಯೆಲ್ಲವೂ ಮೊಳಕೆ ಒಡೆಯುವಂತಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ನಂಜನಗೂಡು, ತಿ.ನರಸೀಪುರ, ಕೆ.ಆರ್.ನಗರ ತಾಲೂಕುಗಳಲ್ಲಿ ಬಹುಪಾಲು ಭತ್ತ ಬೆಳೆದಿದ್ದು ಮಳೆಗೆ ಎಲ್ಲವೂ ಹಾಳಾಗುತ್ತಿದೆ.

ಶಾಲಾ-ಕಾಲೇಜು ಆರಂಭ
ಶೀತಗಾಳಿಯ ಕಾರಣಕ್ಕೆ ಕೋಲಾರದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಕಳೆದ ಮೂರು ದಿನದಿಂದ ಮೋಡ ಮುಸುಕಿದ ವಾತಾವರಣ ಇತ್ತು. ಮಂಗಳವಾರ ಕೊಂಚ ಮಳೆ ತಗ್ಗಿದ್ದು, ಇಂದು ಸೂರ್ಯ ದರ್ಶನ ನೀಡಿದ್ದಾನೆ. ಎಂದಿನಂತೆ ಜನರು ತಮ್ಮ ತಮ್ಮ ‌ಕಾಯಕದಲ್ಲಿ‌ ತೊಡಗಿದ್ದಾರೆ. ಶಾಲಾ-ಕಾಲೇಜುಗಳೂ ಆರಂಭವಾಗಿವೆ. ಜತೆಗೆ ರೈತರು ಕೃಷಿ ಚಟುವಟಿಯಲ್ಲಿ ತೊಡಗಿದ್ದರು.

ವಾರದ ಸಂತೆ ಕೆಸರುಮಯ
ವಿಜಯನಗರದ ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ಜಿಟಿ, ಜಿಟಿ ಮಳೆಯಿಂದಾಗಿ ಸಂತೆ ಮೈದಾನ ಕೆಸರುಮಯವಾಗಿತ್ತು. ಕೆಸರು ಜಾಗದಲ್ಲಿಯೇ ತರಕಾರಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಪ್ರತಿ ಬಾರಿ ಮಳೆ ಬಂದಾಗ ಇದೇ ಫಜೀತಿಗೆ ವ್ಯಾಪಾರಸ್ಥರು ಮತ್ತು ಖರೀದಿದಾರರು ಸಿಲುಕುತ್ತಾರೆ. ಹೀಗಾಗಿ ಸುಸಜ್ಜಿತ ಸಂತೆ ಮಾರುಕಟ್ಟೆ ನಿರ್ಮಾಣಕ್ಕೆ ಮನವಿ ಮಾಡಿದ್ದಾರೆ.

ಕಾಫಿ ಬೆಳೆಗೆ ಮಾಂಡೌಸ್‌ ಹೊಡೆತ
ಮಾಂಡೌಸ್‌ ಚಂಡಮಾರುತದ ಎಫೆಕ್ಟ್‌ನಿಂದಾಗಿ ಕೊಯ್ಲಿಗೆ ಬಂದಿದ್ದ ಕಾಫಿ ಬೆಳೆಗೆ ಭಾರಿ ಹೊಡೆತ ಕೊಟ್ಟಿದೆ. ಕಟಾವು ಮಾಡಲು ಆಗದೆ, ಮಳೆಗೆ ಹಾಗೂ ಹೆಚ್ಚು ಶೀತಕ್ಕೆ ಗಿಡದಿಂದ ಕಾಫಿ ಬೀಜ ಉದುರಿ ಹೋಗುತ್ತಿದೆ. ಅಕಾಲಿಕ‌ ಮಳೆಯಿಂದ ಕಾಫಿ ಗಿಡಗಳಲ್ಲಿ ಕಾಫಿ ಹೂ ಅರಳಿವೆ. ಫೆಬ್ರವರಿಯಲ್ಲಿ ಚಿಗುರಬೇಕಿದ್ದ ಕಾಫಿ ಹೂ ಡಿಸೆಂಬರ್‌ನಲ್ಲಿಯೇ ಚಿಗುರುತ್ತಿದ್ದು, ಸಮಸ್ಯೆಯಾಗಿದೆ.

ಇದನ್ನೂ ಓದಿ | Cyclone Mandous | ಡಿ.15ರವರೆಗೂ ಮಳೆ, ಒಳನಾಡು- ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

Exit mobile version