Site icon Vistara News

Cyclone Mandous‌ | ರಾಜ್ಯದಲ್ಲಿ ಮಾಂಡೌಸ್ ಚಂಡಮಾರುತ ಎಫೆಕ್ಟ್, ಬೆಂಗಳೂರಿನಲ್ಲಿ ಮಲೆನಾಡಿನ ವಾತಾವರಣ

rain

ಬೆಂಗಳೂರು: ರಾಜ್ಯದಲ್ಲಿ ಮಾಂಡೌಸ್ ಚಂಡಮಾರುತ ಪ್ರಭಾವ ಬೀರಿದ್ದು, ಹವಾಮಾನದಲ್ಲಿ ಬದಲಾವಣೆಯಾಗಿದೆ. ಬೆಂಗಳೂರಿನಲ್ಲಿ ಊಟಿ, ಮಡಿಕೇರಿಯನ್ನು ಕೂಡ ಮೀರಿಸುವಂತೆ ಮಲೆನಾಡಿನ ಮಳೆ-ಚಳಿಯ ವಾತಾವರಣ ಸೃಷ್ಟಿಯಾಗಿದೆ. ಕಳೆದೆರಡು ದಿನಗಳಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ. (Cyclone Mandous‌) ಬೆಂಗಳೂರಿನಲ್ಲಿ ತಾಪಮಾನ 18 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಮಳೆಗಿಂತ‌ ಚಳಿಯೇ ಹೆಚ್ಚು ಕಾಡುತ್ತಿದೆ. ಚಂಡಮಾರುತದ ಗಾಳಿ ಕೆಳಭಾಗದಲ್ಲಿ ಬೀಸುತ್ತಿದ್ದು, ಚಳಿ ಜೋರಾಗಿದೆ.

ವೀಕೆಂಡ್ ಮೂಡ್‌ನಲ್ಲಿದ್ದ ಬೆಂಗಳೂರಿಗರಿಗೆ ಮಳೆ ಮತ್ತು ಚಳಿಯ ಅಬ್ಬರಕ್ಕೆ ಥಂಡ ಹೊಡೆದಂತಾಗಿದೆ. ಇನ್ನೂ ಮೂರು ದಿನಗಳವರೆಗೆ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಈಗಾಗಲೇ ಮಳೆಯಿಂದ ತತ್ತರಿಸಿದ ಜನರಿಗೆ ಮಾಂಡೌಸ್ ಚಂಡಮಾರುತದ ಎಫೆಕ್ಟ್ ಎದುರಿಸುವಂತಾಗಿದೆ.

ಬೀದರ್‌ ವರದಿ: ಮಾಂಡೋಸ್ ಚಂಡಮಾರುತದ ಪರಿಣಾಮ ಬೀದರ್‌ನಲ್ಲಿ ಮಳೆಯಾಗಿದ್ದು, ಚಳಿಯನ್ನೂ ಹೆಚ್ಚಿಸಿದೆ. ದೈನಂದಿನ ಕೆಲಸ ಕಾರ್ಯಗಳಿಗೆ ಮನೆಯಿಂದ ಹೊರ ಬರಲು ಜನ ಹಿಂದೇಟು ಹಾಕುತ್ತಿದ್ದಾರೆ. ಕೊಪ್ಪಳದಲ್ಲೂ ತಂಪಾದ ಹವೆ ಉಂಟಾಗಿದೆ.

ಚಿಕ್ಕ ಬಳ್ಳಾಪುರದಲ್ಲಿ ಬೆಳೆ ಹಾನಿ: ಚಿಕ್ಕಬಳ್ಳಾಪುರದಲ್ಲೂ ಮಾಂಡೋಸ್ ಅಬ್ಬರ ಕಂಡು ಬಂದಿದ್ದು, ಎರಡು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ನಿರಂತರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಹೂವು, ತರಕಾರಿ, ರೇಷ್ಮೆ ಬೆಳೆಗಳಿಗೆ ಹಾನಿ ಸಂಭವಿಸಿದೆ.

Exit mobile version