ಬೆಂಗಳೂರು: ಮಾಂಡೌಸ್ ಚಂಡಮಾರುತ (Cyclone Mandous) ತಮಿಳುನಾಡನ್ನು ಪ್ರವೇಶಿಸಿದೆ. ಇದರಿಂದಾಗಿ ಹಾಗೂ ಬಂಗಾಲ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಗಾಳಿ- ಮಳೆ ಉಂಟಾಗಿದೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೂ ಇದರ ಪರಿಣಾಮ ವ್ಯಾಪಿಸಿದ್ದು, ಶುಕ್ರವಾರ ಮುಂಜಾನೆಯಿಂದ ತುಂತುರು ಮಳೆ, ಮೋಡ ಕವಿದ ವಾತಾವರಣ ಕಂಡುಬಂತು.
ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಎಫೆಕ್ಟ್ ಬೆಂಗಳೂರಿಗೂ ಆಗಿದ್ದು, ಚಳಿಯ ಜೊತೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಈಗಾಗಲೇ ಆವರಿಸಿಕೊಂಡಿರುವ ಡಿಸೆಂಬರ್‌ನ ಚಳಿಗೆ ಮಳೆಯ ಎಫೆಕ್ಟ್ ಇನ್ನಷ್ಟು ನಡುಕವನ್ನು ಸೇರಿಸಿದೆ. ಇಂದು ಮತ್ತು ನಾಳೆ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಮಾಂಡೌಸ್ ಚಂಡಮಾರುತ ಡಿಸೆಂಬರ್ 9 ಹಾಗೂ 10ರಂದು ತಮಿಳುನಾಡಿನ ಪುದುಚೇರಿ ಹಾಗೂ ಶ್ರೀಹರಿಕೋಟಾದ ನಡುವೆ ಈಶಾನ್ಯ ದಿಕ್ಕಿಗೆ ಹಾದುಹೋಗಲಿದೆ. ಇದರಿಂದಾಗಿ ತಮಿಳುನಾಡು ಹಾಗೂ ಪಕ್ಕದ ಆಂಧ್ರಪ್ರದೇಶದ ಕೆಲವು ಜಿಲ್ಲೆಗಳಲ್ಲಿ 65-75 ಕಿಲೋಮೀಟರ್ ವೇಗದ ಬಿರುಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ತಮಿಳುನಾಡಿನ 13 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಚೆನ್ನೈ, ವೆಲ್ಲೂರು, ತಿರುವಣ್ಣಾಮಲೈ ಮುಂತಾದ ಕಡೆ ಭಾರಿ ಮಳೆ ನಿರೀಕ್ಷಿಸಲಾಗಿದೆ.
ಇದನ್ನೂ ಓದಿ | Weather Report | ಮಾಂಡೌಸ್ ಚಂಡಮಾರುತ ಎಫೆಕ್ಟ್; ಎಲ್ಲೆಲ್ಲಿ ಭಾರಿ ಮಳೆ, ಎಲ್ಲಿ ಸಾಧಾರಣ?