Site icon Vistara News

Cyclone Mandous | ಕೋಲಾರದಲ್ಲಿ ಮಳೆಗೆ ಕುಸಿದು ಬಿದ್ದ ಮನೆ; ಧರೆಗುರುಳಿದ ಲೈಟ್‌ ಕಂಬ, ಮರಗಳು

Cyclone Mandous weather report

ಕೋಲಾರ/ವಿಜಯನಗರ: ಮಾಂಡೌಸ್ ‌ಚಂಡ‌ಮಾರುತದಿಂದಾಗಿ (Cyclone Mandous) ರಾಜ್ಯಾದ್ಯಂತ ಬಿಟ್ಟೂಬಿಡದೆ ಮಳೆಯಾಗುತ್ತಿದ್ದು, ಜನರು ಹೈರಾಣಾಗಿದ್ದಾರೆ. ಅದರಲ್ಲೂ ಕೋಲಾರದಲ್ಲಿ ಧಾರಾಕಾರ ಮಳೆಗೆ ಮನೆಗಳು ಕುಸಿದು ಬೀಳುತ್ತಿವೆ. ಇದರಿಂದಾಗಿ ಜನ ಭೀತಿಯಲ್ಲಿ ಬದುಕುವಂತಾಗಿದೆ.

Cyclone Mandous

ಕೋಲಾರ ತಾಲೂಕಿನ ಹೊನ್ನೇನಹಳ್ಳಿಯಲ್ಲಿ ಎಡೆಬಿಡದೆ ಮಳೆಯಾಗುತ್ತಿದ್ದು, ವೆಂಕಟರಾಮಪ್ಪ ಎಂಬುವವರಿಗೆ ಸೇರಿದ ಮನೆಯು ಕುಸಿದಿದೆ. ಈ ವೇಳೆ ಮನೆಯಲ್ಲಿ ಪುಟ್ಟ ಮಕ್ಕಳಿದ್ದರು. ಅದೃಷ್ಟವಶಾತ್ ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲ. ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ಹಾಳಾಗಿದ್ದು, ಕುಟುಂಬಸ್ಥರು ಕಂಗಾಲಾಗಿದ್ದಾರೆ. ಸ್ಥಳಕ್ಕೆ ಬಾರದ ಹೊನ್ನೇನಹಳ್ಳಿ ಪಂಚಾಯತ್‌ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Cyclone Mandous

ಕೋಲಾರದಲ್ಲಿ ವರುಣ ಅಬ್ಬರಿಸುತ್ತಿದ್ದು, ಜೋರಾಗಿ ಬೀಸುತ್ತಿರುವ ಗಾಳಿ, ‌ಮಳೆಗೆ ಕೆಲವೆಡೆ ಮರಗಳು, ವಿದ್ಯುತ್ ‌ಕಂಬಗಳು ಧರೆಗುರುಳಿವೆ. ಕೆಜಿಎಫ್‌‌ನ ಬೆಮೆಲ್‌ ಬಡಾವಣೆಯಲ್ಲಿ ಬೃಹತ್‌ ಗಾತ್ರದ ಮರವೊಂದು ನೆಲಕ್ಕೆ ‌ಉರುಳಿದ್ದರೆ, ಮತ್ತೊಂದು ಕಡೆ ವಿದ್ಯುತ್ ಕಂಬಗಳು ಬಿದ್ದು ಹೋಗಿದೆ. ಬೆಳಗಿನ ಜಾವ ಜನರ ಓಡಾಟ ಇಲ್ಲದ ಕಾರಣದಿಂದಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ವಿದ್ಯುತ್ ಕಂಬ ಉರುಳಿರುವ ಕಾರಣ ಬೆಮೆಲ್‌ನಲ್ಲಿ ವಿದ್ಯುತ್ ‌ಕಡಿತ ಮಾಡಲಾಗಿದೆ.

Cyclone Mandous

ಸೈಕ್ಲೋನ್‌ ಹೊಡೆತಕ್ಕೆ ಬಾಡಿದ ಹೂಗಳು, ಬೆಳೆ ನಾಶ
ಮಾಂಡೌಸ್‌ ಸೈಕ್ಲೋನ್‌ ಹೊಡೆತಕ್ಕೆ ರೈತರು ಬೆಳೆದ ಬೆಳೆಗಳು ನಾಶವಾಗಿವೆ. ಮಳೆಯಿಂದಾಗಿ ಚಿಕ್ಕಬಳ್ಳಾಪುರದಲ್ಲಿ ರೈತರು ಬೆಳೆದ ಹೂವಿನ ಬೆಲೆ ಕುಸಿತ ಕಂಡಿದೆ. ಮತ್ತೊಂದು ಕಡೆ ರಾಗಿ ಬೆಳೆ ಎಲ್ಲವೂ ಮಳೆಗೆ ನಾಶವಾಗಿದೆ. ಜಿಲ್ಲೆಯ ಅಗಲಕುರ್ಗಿ, ಜಡಲತಿಮ್ಮನಹಳ್ಳಿ, ಚೊಕ್ಕಹಳ್ಳಿ ಗ್ರಾಮಗಳ ರೈತರು ಕಂಗಾಲಾಗಿದ್ದು, ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ.

ನಿರಂತರ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ರಾಗಿ ಹಾಗೂ ದ್ವಿದಳ ಧಾನ್ಯಗಳಾದ ರಾಗಿ, ಅವರೆ, ತೊಗರಿ, ಅಲಸಂದೆ ಬೆಳೆಗಳು ಮಳೆಯಿಂದಾಗಿ ನೆಲಕಚ್ಚಿವೆ. ರಾಗಿ ಬೆಳೆ ಸಂಪೂರ್ಣವಾಗಿ ಹಾಳಾಗಿದ್ದು, ಕಟಾವಿಗೆ ಬಂದಿದ್ದ ರಾಗಿ ಬೆಳೆ ಕೂಡಾ ಮಳೆಗೆ ನೆನೆದು ಮೊಳಕೆಯೊಡೆಯುವಂತಾಗಿದೆ. ಇನ್ನು ದ್ವಿದಳ ಧಾನ್ಯಗಳಾದ ಅವರೆ, ತೊಗರಿ ಬೆಳೆಗಳು ಮಳೆಯಬ್ಬರಕ್ಕೆ ಹೂವುಗಳು ನೆಲಕಚ್ಚಿವೆ. ಒಟ್ಟಾರೆಯಾಗಿ ಮಳೆಯಾರ್ಭಟಕ್ಕೆ ವಾರ್ಷಿಕ ಬೆಳೆಗಳಲ್ಲೂ ರೈತರು ನಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ.

Cyclone Mandous

ಶೀತ ಗಾಳಿಗೆ ಜನರು ಗಢಗಢ
ವಿಜಯನಗರ, ತುಮಕೂರು ಹಾಗೂ ಕೋಲಾರದಲ್ಲಿ ಕೊರೆಯುವ ಚಳಿಯೊಂದಿಗೆ ಜಡಿ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಮೋಡ ಕವಿದ ವಾತಾವರಣ, ಥಂಡಿ ಗಾಳಿಗೆ ಜನ ಗಢಗಢ ನಡುಗುವಂತಾಗಿದೆ. ಶೀತಗಾಳಿಗೆ ಮನೆಯಿಂದ ಹೊರಬರಲು ಜನರು ಹಿಂದೇಟು ಹಾಕುತ್ತಿದ್ದಾರೆ. ಇನ್ನೆರಡು ದಿನ ಇದೇ ರೀತಿಯ ವಾತಾವರಣ ಇರಲಿದೆ ಎಂದ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇತ್ತ ತುಮಕೂರಿನಲ್ಲಿ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಿದ್ದು, ಬಿಟ್ಟೂಬಿಡದೆ ಜಿಟಿಜಿಟಿ ಮಳೆ ಸುರಿಯುತ್ತಿದೆ.

Cyclone Mandous

ಪೇಡಾ ನಗರಿಗೆ ಮಾಂಡೌಸ್‌ ಎಫೆಕ್ಟ್
ಮಾಂಡೌಸ್‌ ಎಫೆಕ್ಟ್ ಧಾರವಾಡದಲ್ಲಿಯೂ ಸಹ ಹೆಚ್ಚಾಗಿದ್ದು, ಕಳೆದ 3 ದಿನಗಳಿಂದ ತುಂತುರು ಮಳೆ ಸೇರಿದಂತೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಚಳಿಯ ಜತೆಗೆ ತುಂತುರು ಮಳೆಯಿಂದಾಗಿ ಧಾರವಾಡ ಜನರು ಹೊರ ಬಾರದೆ ಚಳಿಯಿಂದ ತಪ್ಪಿಸಿಕೊಳ್ಳಲು ಮನೆಯಲ್ಲಿ ಉಳಿಯುತ್ತಿದ್ದಾರೆ. ಇನ್ನು ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಭಾಗದಲ್ಲೂ ಸಹ ಮಳೆಯಿಂದಾಗಿ ರೈತ ಸಮುದಾಯ ಆತಂಕಕ್ಕೀಡಾಗಿದ್ದು, ಹೆಚ್ಚಿನ ಮಳೆ ಆಗಿದ್ದೇ ಆದಲ್ಲಿ ಕೈಗೆ ಬಂದಿರುವ ಕಡಲೆ ಹಾಗೂ ಕುಸುಬಿ ಮತ್ತು ಮಾವು ಹಾಳಾಗುವ ಸಾಧ್ಯತೆ ಇದೆ.

ಇದನ್ನೂ ಓದಿ | Cyclone Mandous | ಬೆಂಗಳೂರು, ಗಡಿ ಜಿಲ್ಲೆಗಳಲ್ಲಿ ಮುಂದುವರಿದ ಮಳೆ, ಗಾಳಿ, ಚಳಿ

Exit mobile version