Site icon Vistara News

Cyclone Mandous | ಶೀತಗಾಳಿ, ಮಳೆಯಿಂದಾಗಿ ಮಕ್ಕಳು, ವೃದ್ಧರಿಗೆ ತೊಂದರೆ; ಎಚ್ಚರ ವಹಿಸಲು ಆರೋಗ್ಯ ಸಚಿವರ ಸಲಹೆ

ಡಾ.ಕೆ.ಸುಧಾಕರ್

ಬೆಂಗಳೂರು: ಒಂದು ಕಡೆ ಚಳಿಗಾಲ, ಇನ್ನೊಂದು ಕಡೆ ಮಾಂಡೌಸ್‌ ಚಂಡಮಾರುತದ ಎಫೆಕ್ಟ್‌ನಿಂದ ರಾಜ್ಯಾದ್ಯಂತ ಶೀತ, ಉಸಿರಾಟದ ಸಮಸ್ಯೆ ಸೇರಿದಂತೆ ಹಲವು ಆರೋಗ್ಯದ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ. ಆದರೆ, ಇವ್ಯಾವುದೂ ಕೊರೊನಾದ ಲಕ್ಷಣಗಳಲ್ಲ. ಹಾಗಾಗಿ ಭಯಪಡಬೇಕಾಗಿಲ್ಲ. ಆದರೆ, ಆರೋಗ್ಯ ಸಮಸ್ಯೆಗಳ ವಿಚಾರದಲ್ಲಿ ಎಚ್ಚರಿಕೆ ವಹಿಸುವುದು ಉತ್ತಮ ಎಂದು ಆರೋಗ್ಯ ಸಚಿವ ಕೆ. ಸುಧಾಕರ್‌ ಹೇಳಿದ್ದಾರೆ.

ಸಾಂಕ್ರಾಮಿಕ ರೋಗಗಳ ಕುರಿತಂತೆ ಸೋಮವಾರ ಆಯೋಜಿಸಲಾಗಿದ್ದ ಸಭೆಯಲ್ಲಿ ಅಧಿಕಾರಿಗಳ ಜತೆ ಸಮಾಲೋಚನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಅಲ್ಲಲ್ಲಿ ತುಂತುರು ಮಳೆ ಹಾಗೂ ಶೀತಗಾಳಿ ಬೀಸುತ್ತಿದೆ. ಇದು ಜನರ ಆರೋಗ್ಯವನ್ನು ಹದಗೆಡಿಸುತ್ತಿದೆ. ಶೀತಗಾಳಿ, ಮಳೆಯಿಂದಾಗಿ ಅನೇಕರು ಶೀತ, ಕೆಮ್ಮು, ನೆಗಡಿ ಅಂತ ಆಸ್ಪತ್ರೆಗೆ ಭೇಟಿ ಕೊಡುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಮಕ್ಕಳು ಹಾಗೂ ವೃದ್ಧರಲ್ಲಿ ಫ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಶ್ವಾಸಕೋಶದ ಸಮಸ್ಯೆ ಹೆಚ್ಚಾಗಿದೆ. ಮಕ್ಕಳು ಮತ್ತು ವಯಸ್ಸಾದವರು ಬೆಳಗ್ಗೆ ಅಥವಾ ಸಂಜೆಯ ಸಮಯದಲ್ಲಿ ಹೊರಗೆ ಹೋಗುವಾಗ ಮೈಯನ್ನು ಬೆಚ್ಚಗೆ ಇಟ್ಟುಕೊಳ್ಳುವುದು ತುಂಬ ಮುಖ್ಯವಾಗಿದೆ. ಮಕ್ಕಳು ಹಾಗೂ ವೃದ್ಧರ ಆರೋಗ್ಯದ ದೃಷ್ಟಿಯಿಂದ ಕೆಲವೊಂದು ಮಾರ್ಗಸೂಚಿಗಳನ್ನು ಹೊರಡಿಸುತ್ತೇವೆ ಎಂದು ಹೇಳಿದರು.

ಚಂಡಮಾರುತದ ಪರಿಣಾಮದಿಂದ ಉಂಟಾಗಿರುವ ಆರೋಗ್ಯ ವ್ಯತ್ಯಯವನ್ನು ಗಮನಿಸುವಂತೆ ಎಲ್ಲ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎರಡು ಜಿಲ್ಲೆಗಳಲ್ಲಿ ಈಗಾಗಲೇ ರಜೆ ನೀಡಲಾಗಿದೆ. ಎರಡು ದಿನದಲ್ಲಿ ಚಂಡಮಾರುತ ಸಹಜ ಸ್ಥಿತಿಗೆ ಬರಲಿದೆ. ಆದರೆ, ಚಳಿಗಾಲ ಮುಂದುವರಿಯುವುದರಿಂದ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದರು.

ಬೀದಿ ನಾಯಿಗಳ ಉಪಟಳ ಹೆಚ್ಚಾಗಿದೆ. ಆದರೆ, ಸರಕಾರಿ ಆಸ್ಪತ್ರೆಗಳಲ್ಲಿ ರ‍್ಯಾಬಿಸ್‌ ಲಸಿಕೆಯ ಕೊರತೆ ಇದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲ ಕಡೆ ಲಸಿಕೆ ವ್ಯವಸ್ಥೆ ಇದೆ ಎಂದರು. ಇನ್ನು ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್ಕಿನ್ಸ್‌ ಒದಗಿಸುವ ಬಗ್ಗೆ ಟೆಂಡರ್‌ ಕರೆಯಲಾಗಿದೆ. ಇದೇ ವಾರದಿಂದ ಅದು ಲಭ್ಯವಾಗಲಿದೆ ಎಂದರು.

ಇದನ್ನೂ ಓದಿ | Ayushman Bharat Yojana | ಡಿ.8ರಂದು 5.09 ಕೋಟಿ ಜನರಿಗೆ ಆಯುಷ್ಮಾನ್‌ ಭಾರತ್‌‌ ಕಾರ್ಡ್ ವಿತರಣೆಗೆ ಚಾಲನೆ: ಡಾ.ಕೆ. ಸುಧಾಕರ್‌

Exit mobile version