Site icon Vistara News

ಸಮಸ್ಯೆಗಳನ್ನು ನಿಭಾಯಿಸುವ ಸಾಮರ್ಥ್ಯ ಬೆಳೆಸಿಕೊಳ್ಳಿ : ಮಹಿಳೆಯರಿಗೆ ಡಿ.ಕೆ. ಶಿವಕುಮಾರ್‌ ಕರೆ

Rakshit Shetty Richard Anthony Produce By Hombale

ಬೆಂಗಳೂರು: ಮಹಿಳೆಯರಿಗೆ ಶಕ್ತಿ ತುಂಬುವುದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕನಸು. ಅವರು ಸದಾ ಅವಕಾಶಗಳನ್ನು ಸೃಷ್ಟಿ ಮಾಡಿಕೊಳ್ಳಬೇಕು ಎಂದು ಹೇಳುತ್ತಿದ್ದರು. ದೇವರು ನಮಗೆ ವರವನ್ನೂ ಕೊಡುವುದಿಲ್ಲ, ಶಾಪವನ್ನೂ ನೀಡುವುದಿಲ್ಲ. ಅವಕಾಶಗಳನ್ನು ಮಾತ್ರ ನೀಡುತ್ತಾನೆ. ಅವುಗಳನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.

ನಗರದಲ್ಲಿ ಜೂಮ್ ಮೂಲಕ ಬಳ್ಳಾರಿಯ ʼನಾ ನಾಯಕಿʼ ಪ್ರಾದೇಶಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ತಾಯಿ ಮಗುವಿಗೆ ಜನ್ಮ ನೀಡಿದಾಗ ಆಕೆಯೇ ಆ ಮಗುವಿನ ಮೊದಲ ಗುರು ಆಗುತ್ತಾಳೆ. ಅದೇ ರೀತಿ ಬಳ್ಳಾರಿಯಲ್ಲಿ ಸಾವಿರಾರು ಮಹಿಳೆಯರು ಸೇರಿದ್ದು, ನೀವೆಲ್ಲರೂ ನಾಯಕಿಯರೇ. ಅಮ್ಮನ ನೆನಪು ಪ್ರೀತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ದೇವರ ನೆನಪು ಭಕ್ತಿಯ ಮೂಲ, ಮನುಷ್ಯತ್ವ ಮೋಕ್ಷಕ್ಕೆ ಮೂಲ ಎಂಬ ಮಾತಿದೆ. ಅದೇ ರೀತಿ ತಾಯಿಗೆ ಪವಿತ್ರವಾದ ಸ್ಥಾನವಿದೆ. ನಾವು ಎಲ್ಲಿ ಹೋದರೂ ಗ್ರಾಮದೇವತೆಯನ್ನು ನೋಡುತ್ತೇವೆ, ಈ ಭೂಮಿಯನ್ನು ಭೂತಾಯಿ ಎಂದು ಕರೆಯುತ್ತೇವೆ. ಇದೇ ಈ ದೇಶದ ಸಂಸ್ಕೃತಿ, ನಮ್ಮ ಆಸ್ತಿ ಎಂದರು.

ಹೆಣ್ಣು ಮಕ್ಕಳಿಲ್ಲದೇ ಯಾವ ಸಮಾಜವೂ ಉದ್ಧಾರವಾಗಲು ಸಾಧ್ಯವಿಲ್ಲ. ಹೆಣ್ಣಿಗೆ ಸಾಮಾಜಿಕ, ಶೈಕ್ಷಣಿಕವಾಗಿ ಶಕ್ತಿ ತುಂಬಿದರೆ, ಇಡೀ ಸಮಾಜ ಮುಂದೆ ಬರುತ್ತದೆ. ನೀವೆಲ್ಲರೂ ಮಾನಸಿಕವಾಗಿ ನಾಯಕಿಯರು. ಗಂಡ, ಮಕ್ಕಳು, ಸಹೋದರರನ್ನು ನೋಡಿಕೊಳ್ಳುವ ಶಕ್ತಿ ನಿಮ್ಮಲ್ಲಿ ಅಡಗಿದೆ, ನಿಮಗೆ ಎಲ್ಲ ರೀತಿಯ ಶಕ್ತಿ ಇದ್ದು ನೀವುಗಳು ನಮ್ಮ ಮೇಲೆ ಅವಲಂಬಿತರಾಗಬಾರದು. ಮುಂದಿನ ದಿನಗಳಲ್ಲಿ 224 ಕ್ಷೇತ್ರಗಳಲ್ಲಿ ಮಹಿಳೆಯರು ಸೇರಿ ಈ ಕಾರ್ಯಕ್ರಮಗಳನ್ನು ಮಾಡಬೇಕು. ನಿಮ್ಮ ಸಾಮಾಜಿಕ ಸಮಸ್ಯೆ ಚರ್ಚಿಸಲು ಇದೊಂದು ಅವಕಾಶ. ನೀವೇ ಸಮಾಜದ ಎಲ್ಲ ಸಮಸ್ಯೆಗಳನ್ನು ನಿಭಾಯಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ | ʼಎನ್‌ಸಿಪಿ, ಕಾಂಗ್ರೆಸ್‌ಗಳೇ ನಮಗೆ ನಿಜವಾದ ವಿರೋಧ ಪಕ್ಷಗಳಾಗಿದ್ದವುʼ; ಸಿಎಂ ಠಾಕ್ರೆಗೆ ಶಿವಸೇನೆ ಶಾಸಕನ ಪತ್ರ

ಸೋನಿಯಾ ಗಾಂಧಿ ಅವರು 20 ವರ್ಷದ ಹಿಂದೆ ಲೋಕಸಭೆಗೆ ಆಯ್ಕೆಯಾಗಬೇಕಾದಾಗ ಇದೇ ಬಳ್ಳಾರಿ ಮೇಲೆ ವಿಶ್ವಾಸ ಇಟ್ಟು ಸ್ಪರ್ಧಿಸಿದ್ದರು. ನೀವು ಅವರನ್ನು ಗೆಲ್ಲಿಸಿ ರಾಷ್ಟ್ರ ರಾಜಕಾರಣಕ್ಕೆ ಕಳುಹಿಸಿಕೊಟ್ಟಿದ್ದಿರಿ. ಹೀಗಾಗಿ ಈ ಪುಣ್ಯಭೂಮಿಯಿಂದಲೇ ಈ ಕಾರ್ಯಕ್ರಮ ಆರಂಭಿಸುತ್ತಿದ್ದೇನೆ. ಸದ್ಯದಲ್ಲೇ ಚುನಾವಣೆ ಎದುರಾಗಲಿರುವುದರಿಂದ ಕಾಂಗ್ರೆಸ್ ನಿಮಗೆ ಏನನ್ನು ನೀಡಬೇಕು? ನಿಮ್ಮ ಸಮಸ್ಯೆಗಳೇನು? ಪ್ರಣಾಳಿಕೆಯಲ್ಲಿ ಏನೆಲ್ಲಾ ವಿಚಾರ ಸೇರಿಸಬೇಕು ಎಂಬ ವಿಚಾರಗಳ ಬಗ್ಗೆ ಚರ್ಚೆ ಮಾಡಿ ಎಂದು ಸಲಹೆ ನೀಡಿ ಎಂದರು.

ನಾವು ಮೋಟಮ್ಮನವರ ಅಧ್ಯಕ್ಷತೆಯಲ್ಲಿ ಸ್ತ್ರೀಶಕ್ತಿ ಸಂಘವನ್ನು ಆರಂಭಿಸಿದೆವು. ಆ ಮೂಲಕ ಸಾವಿರಾರು ಸಂಘಗಳು ರಚನೆಯಾದವು. ನಂತರ ಬ್ಯಾಂಕುಗಳು ಇದೇ ವ್ಯವಸ್ಥೆಯನ್ನು ಅಳವಡಿಸಿಕೊಂಡು ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುತ್ತಿವೆ. ಮುಂದೆ ಯಾವುದೇ ಸರ್ಕಾರದ ಸೌಲಭ್ಯ ನೀಡುವುದಾದರೆ, ಅದನ್ನು ಆ ಮನೆಯ ಹೆಣ್ಣು ಮಕ್ಕಳ ಹೆಸರಲ್ಲಿ ನೀಡಬೇಕು ಎಂಬ ಆಲೋಚನೆ ಇಟ್ಟುಕೊಂಡಿದ್ದೇವೆ. ಇಲ್ಲಿ ಹಳ್ಳಿ ಹೆಣ್ಣು ಮಕ್ಕಳಿಂದ, ನಗರ ಹೆಣ್ಣು ಮಕ್ಕಳವರೆಗೂ ಎಲ್ಲರೂ ತಮ್ಮ ಅಭಿಪ್ರಾಯವನ್ನು ತಿಳಿಸಬೇಕು. ಅದಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಿಮ್ಮಲ್ಲಿ ಸಾಕಷ್ಟು ಜನರಿಗೆ ಪ್ರತಿಭೆ ಇದೆ. ಅದನ್ನು ಗುರುತಿಸುವವರು ಬೇಕು. ನಿಮ್ಮಲ್ಲಿರುವ ನಾಯಕತ್ವ ಗುಣ ಗುರುತಿಸಿ ಪ್ರೋತ್ಸಾಹ ನೀಡಲು, ನಿಮ್ಮನ್ನು ನಾಯಕಿಯರನ್ನಾಗಿ ಮಾಡಲು ನಮ್ಮ ನಾಯಕಿಯರು ನಿಮ್ಮ ಮನೆ ಬಾಗಿಲಿಗೆ ಬಂದಿದ್ದಾರೆ, ಇದು ದೊಡ್ಡ ಆಂದೋಲನವಾಗಲಿದೆ. ಇದು ಪ್ರಾಯೋಗಿಕ ಕಾರ್ಯಕ್ರಮ ಇಲ್ಲಿ ಉತ್ತಮ ಚರ್ಚೆ ಆಗಬೇಕು. ಗ್ರಾಮೀಣ ಮಹಿಳೆಯರಿಗೆ ಹೆಚ್ಚು ಮಾತನಾಡಲು ಅವಕಾಶ ನೀಡಿ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

ಇದನ್ನೂ ಓದಿ | ಬಿಜೆಪಿ ನಾಯಕರ ವಿರುದ್ಧ ಯಾಕೆ ED ತನಿಖೆ ಮಾಡಲ್ಲ? : ಡಿ.ಕೆ. ಶಿವಕುಮಾರ್ ಪ್ರಶ್ನೆ

Exit mobile version