ಬೆಂಗಳೂರು: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗಿಂತ ರಾಜ್ಯದ ಮುಖ್ಯಮಂತ್ರಿ ಯಾರು ಆಗುತ್ತಾರೆ ಎಂಬ ಕುತೂಹಲ ಹೆಚ್ಚಿದೆ. ಅದರಲ್ಲೂ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಮಧ್ಯೆ ತೀವ್ರ ಪೈಪೋಟಿ ಇದ್ದು, ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ ದೆಹಲಿ ಕಾಂಗ್ರೆಸ್ ನಾಯಕರಿಗೇ ಯಾರನ್ನು ಆಯ್ಕೆ ಮಾಡಬೇಕು ಎಂಬ ಗೊಂದಲ ಮೂಡಿದೆ. ಹಾಗಾಗಿಯೇ, ಎಐಸಿಸಿ ಅಧ್ಯಕ್ಷರಿಗೇ ಸಿಎಂ ಆಯ್ಕೆಯ ನಿರ್ಧಾರವನ್ನು ಬಿಡಲಾಗಿದೆ. ಇನ್ನು ಇದರ ಮಧ್ಯೆಯೇ, ಶಾಸಕಾಂಗ ಪಕ್ಷದ ಸಭೆ ನಡೆದ ಶಾಂಗ್ರಿಲಾ ಹೋಟೆಲ್‌ನಲ್ಲಿಯೇ ಡಿ.ಕೆ.ಶಿವಕುಮಾರ್ ಅವರ ಜನ್ಮದಿನವನ್ನು ಆಚರಿಸಲಾಗಿದೆ.
ಸೋಮವಾರ (May 15) ಡಿ.ಕೆ.ಶಿವಕುಮಾರ್ ಅವರ 62ನೇ ಜನ್ಮದಿನ ಇರುವುದರಿಂದ ಭಾನುವಾರ ರಾತ್ರಿಯೇ ಹೋಟೆಲ್‌ನಲ್ಲಿ ಕೇಕ್ ಕತ್ತರಿಸಿ ಆಚರಣೆ ಮಾಡಲಾಯಿತು. ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ, ಮಾಜಿ ಸಚಿವ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್ ಸೇರಿ ಹಲವು ನಾಯಕರು ಡಿಕೆಶಿ ಅವರಿಗೆ ಶುಭಾಶಯ ಕೋರಿದರು. ಇದೇ ವೇಳೆ ಸಿದ್ದರಾಮಯ್ಯ ಅವರಿಗೆ ಡಿಕೆಶಿ ಕೇಕ್ ತಿನ್ನಿಸಿದರು.
ಇದನ್ನೂ ಓದಿ: Karnataka CM: ರಾತ್ರಿ ಭೋಜನ ಕೂಟ; ಸೋಮವಾರ ಬೆಳಗ್ಗೆ ವೀಕ್ಷಕರ ಸಭೆ; ಸಿಎಂ ಆಯ್ಕೆಗೆ ಏನೆಲ್ಲ ಕಸರತ್ತು?
ಜನ್ಮದಿನಕ್ಕೆ ಒಂದು ದಿನ ಮೊದಲೇ ಕಾಂಗ್ರೆಸ್ ನಾಯಕರೆಲ್ಲ ಒಗ್ಗೂಡಿ ಬರ್ತ್‌ಡೇ ಸೆಲೆಬ್ರೇಷನ್ ಮಾಡಿದ್ದಾರೆ. ಹಾಗೆಯೇ, ಸೆಲೆಬ್ರೇಷನ್ ಫೋಟೊಗಳು ವೈರಲ್ ಆಗಿದ್ದು, ಎಲ್ಲ ನಾಯಕರು ಆತ್ಮೀಯವಾಗಿದ್ದಾರೆ. ಅದರಲ್ಲೂ, ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರು ಯಾವುದೇ ಮುನಿಸು ಇಲ್ಲದೆ, ಒಗ್ಗಟ್ಟಾಗಿದ್ದಾರೆ ಎಂಬ ಸಂದೇಶವನ್ನೂ ಫೋಟೊಗಳ ಮೂಲಕ ಸಾರಲಾಗಿದೆ.
ಬರ್ತ್‌ಡೇ ಕುರಿತು ಡಿಕೆಶಿ ಟ್ವೀಟ್
ಚೀಟಿಯ ಮೂಲಕ ಅಭಿಪ್ರಾಯ ಸಂಗ್ರಹ
ಇನ್ನು ಮುಖ್ಯಮಂತ್ರಿ ಆಯ್ಕೆಯ ಕುರಿತು ಶಾಸಕಾಂಗ ಸಭೆಯ ಬಳಿಕ ಆಯೋಜಿಸಲಾಗಿದ್ದ ಭೋಜನ ಕೂಟದ ವೇಳೆ ಕಾಂಗ್ರೆಸ್ ಶಾಸಕರಿಂದ ನಾಯಕರು ಅಭಿಪ್ರಾಯ ಸಂಗ್ರಹಿಸಿದರು. ಒಂದಷ್ಟು ಜನ ಚೀಟಿಯಲ್ಲಿ, ಒಂದಷ್ಟು ಜನ ಮೌಖಿಕವಾಗಿ ನಾಯಕರಿಗೆ ಅಭಿಪ್ರಾಯ ತಿಳಿಸಿದ್ದಾರೆ. ಸೋಮವಾರ ಬೆಳಗ್ಗೆ ಕಾಂಗ್ರೆಸ್ ವೀಕ್ಷಕರು ಸಭೆ ನಡೆಸಿ, ಶಾಸಕರ ಅಭಿಪ್ರಾಯವನ್ನು ಹೈಕಮಾಂಡ್‌ಗೆ ರವಾನಿಸಲಿದ್ದಾರೆ ಎಂದು ತಿಳಿದುಬಂದಿದೆ.