Site icon Vistara News

ಮಂಗಳೂರು ಸ್ಫೋಟಕ್ಕೆ ಸಾದಾ ಕುಕ್ಕರ್‌ ಎಂದು ಹೇಳಿದ್ದ ಡಿ.ಕೆ. ಶಿವಕುಮಾರ್‌ ಈಗ ಏನು ಹೇಳ್ತಾರೆ: ಸಿಎಂ ಬೊಮ್ಮಾಯಿ ಪ್ರಶ್ನೆ

karnataka congress chief DK Shivakumar defends move to invite other party leaders to congress

ಹುಬ್ಬಳ್ಳಿ: ಮಂಗಳೂರಿನಲ್ಲಿ ಸಂಭವಿಸಿದ್ದ ಕುಕ್ಕರ್ ಬಾಂಬ್ ಸ್ಫೋಟದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಇದೊಂದು ಸಾದಾ ಕುಕ್ಕರ್‌ ಎಂದು ಮಾತನಾಡಿದ್ದರು. ಬಿಜೆಪಿ ಇದರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಹೇಳಿಕೆ ನೀಡಿದ್ದರು. ಆದರೆ, ಈಗ ಸ್ಫೋಟದ ಹೊಣೆಯನ್ನು ಐಎಸ್‌ಕೆಪಿ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಇದಕ್ಕೆ ಅವರು ಏನು ಹೇಳುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನೆ ಮಾಡಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಅಂದು ಕುಕ್ಕರ್‌ ಬಾಂಬ್‌ ಸ್ಫೋಟವಾಗಿದ್ದಾಗ ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್‌ ಸೇರಿದಂತೆ ಹಲವು ನಾಯಕರು ಸಾದಾ ಕುಕ್ಕರ್‌ ಎಂದು ಹೇಳಿದ್ದರು. ಈಗ ಅವರು ಏನು ಹೇಳುತ್ತಾರೆ ಎಂಬುದನ್ನು ಕೇಳಲು ಬಯಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: Road Accident: ಕಾರು-ಕ್ರೂಸರ್ ನಡುವೆ ಅಪಘಾತ; ಶಾಲಾ ವಿದ್ಯಾರ್ಥಿಗಳಿದ್ದ ಕ್ರೂಸರ್ ಪಲ್ಟಿ, ವಿದ್ಯಾರ್ಥಿಗಳಿಗೆ ಗಾಯ

ಆಪಾದನೆ ಮಾಡುವವರು ಮೊದಲು ಶುದ್ಧಹಸ್ತರಿರಬೇಕು. ಇವರು ದಿಂಬು, ಹಾಸಿಗೆ, ಬಿಸ್ಕತ್‌, ಕಾಫಿಯಲ್ಲೂ ಬಿಡದೆ ಹಣ ಮಾಡಿದ್ದಾರೆ. ಸಣ್ಣದರಿಂದ ಹಿಡಿದು ದೊಡ್ಡ ದೊಡ್ಡ ನೀರಾವರಿ ಯೋಜನೆಯಲ್ಲೂ ಭ್ರಷ್ಟಾಚಾರ ಮಾಡಿದ್ದಾರೆ. ಆಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ಸಚಿವರಿಗೂ ಟಾರ್ಗೆಟ್ ಕೊಟ್ಟಿದ್ದರು. ಈ ಬಗ್ಗೆ ಬೇಕಿದ್ದರೆ ಆಗ ಸಚಿವರಾಗಿದ್ದ ಎಂ.ಬಿ. ಪಾಟೀಲ್‌, ಕೆ.ಜೆ. ಜಾರ್ಜ್‌, ಎಚ್. ಮಹದೇವಪ್ಪ ಅವರನ್ನೇ ಕೇಳಿ. ಯಾವುದಕ್ಕೆ ಏನು ಟಾರ್ಗೆಟ್‌ ಕೊಟ್ಟಿದ್ದರು ಎಂದು ಸಿಎಂ ತಿರುಗೇಟು ನೀಡಿದರು.

ಕಾಂಗ್ರೆಸ್ ಭ್ರಷ್ಟಾಚಾರದ ಕೂಪ

ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಕರೆ ನೀಡಿರುವ ಬಂದ್‌ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿಎಂ, ಕಾಂಗ್ರೆಸ್ ಭ್ರಷ್ಟಾಚಾರದ ಕೂಪವಾಗಿದೆ. ಕಾಂಗ್ರೆಸ್ ಮಾಡಿರುವ ಕರ್ಮಕಾಂಡ ಒಂದೆರಡಲ್ಲ. ಕಾಂಗ್ರೆಸ್ ಖುದ್ದು ಬಂದ್ ಆಗುವ ಕಾಲ ಬಂದಿದೆ. ಪ್ರತಿಭಟನೆ, ಬಂದ್ ಮೂಲಕ ತಮ್ಮ ರಾಜಕೀಯ ಭವಿಷ್ಯವನ್ನು ಬರೆಯಬಹುದೆಂದು ಬಂದ್‌ಗೆ ಕರೆ ನೀಡಿದ್ದಾರೆ. ಅವರಿಗೆ ಯಾವ ಪ್ರತಿಕ್ರಿಯೆಯೂ ದೊರೆಯಿವುದಿಲ್ಲ. ಕಾಂಗ್ರೆಸ್‌ ಸಂಪೂರ್ಣವಾಗಿ ಭ್ರಷ್ಟಾಚಾರದಿಂದ ಕೂಡಿದ್ದು, ಇವೆಲ್ಲ ಆಟ ನಡೆಯುವುದಿಲ್ಲ. 2023ರ ಮೇ ತಿಂಗಳಿನಲ್ಲಿ ನಡೆಯುವ ಚುನಾವಣಾ ಅಖಾಡದಲ್ಲಿ ಜನ ತೀರ್ಮಾನ ಮಾಡುತ್ತಾರೆ ಎಂದರು.

ಇದನ್ನೂ ಓದಿ: HD Deve Gowda : ಮಾಜಿ ಪ್ರಧಾನಿ ದೇವೇಗೌಡರು ಆಸ್ಪತ್ರೆಯಿಂದ ಡಿಸ್ಚಾರ್ಜ್‌, ಮೊಣಕಾಲು ನೋವಿಗೆ ಚಿಕಿತ್ಸೆ

ಒಣಪ್ರತಿಷ್ಠೆಗೆ ಶಿವಾಜಿ ಪ್ರತಿಮೆ ಮರು ಉದ್ಘಾಟನೆ

ಬೆಳಗಾವಿಯಲ್ಲಿ ಶಿವಾಜಿ ಪ್ರತಿಮೆ ಮರು ಉದ್ಘಾಟನೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ 50 ಲಕ್ಷ ರೂ. ಗಳನ್ನು ಬಿಡುಗಡೆ ಮಾಡಿದ್ದರು. ಒಣಪ್ರತಿಷ್ಠೆಗೆ ಈ ಕೆಲಸ ಮಾಡಿದ್ದಾರೆ. ರಾಷ್ಟ್ರನಾಯಕರ ಹೆಸರಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದರು.

Exit mobile version