Site icon Vistara News

DK Shivakumar | 2023 ಕಾಂಗ್ರೆಸ್ ಅಧಿಕಾರದ ವರ್ಷವಾಗಲಿದೆ: ಡಿ.ಕೆ. ಶಿವಕುಮಾರ್‌

D K Shivakumar

ಬೆಂಗಳೂರು: ಕೇಂದ್ರ ಸಚಿವ ಅಮಿತ್‌ ಶಾ ಎರಡು ದಿನಗಳ ರಾಜ್ಯ ಪ್ರವಾಸ ಮಾಡಿ ಬಿಜೆಪಿ ನಾಯಕರ ಜತೆ ಸಭೆಗಳನ್ನು ನಡೆಸಿದ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸದಾಶಿವನಗರದ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK Shivakumar) ಭಾನುವಾರ ಭೇಟಿ ನೀಡಿ ಚುನಾವಣಾ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ನಂತರ ಮಾತನಾಡಿದ ಡಿ.ಕೆ.ಶಿವಕುಮಾರ್‌, ಮಲ್ಲಿಕಾರ್ಜುನ್ ಖರ್ಗೆ ಅವರು ನಮ್ಮ ಪಕ್ಷದ ಅಧ್ಯಕ್ಷರಾಗಿದ್ದಾರೆ. ನಾನು ಹೊಸ ವರ್ಷದ ಶುಭಾಶಯ ಕೋರಲು ಬಂದಿದ್ದೇನೆ. ನಾವೆಲ್ಲ ಒಟ್ಟಿಗೆ ದುಡಿದು ಕಾಂಗ್ರೆಸ್ ಅಧಿಕಾರಕ್ಕೆ ತರುತ್ತೇವೆ ಎಂದು ಮಾತು ಕೊಟ್ಟಿದ್ದೇವೆ. ಜನ ಬದಲಾವಣೆ ಬಯಸಿದ್ದಾರೆ. ನಾವು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಕೆಲಸ ಮಾಡುತ್ತೇವೆ. 2023 ಕಾಂಗ್ರೆಸ್ ಅಧಿಕಾರದ ವರ್ಷವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಲಿಸ್ಟ್ ಕಳುಹಿಸಲು ಡಿ.31ರವರೆಗೆ ಗಡುವು ಕೊಡಲಾಗಿತ್ತು. ಆದರೆ ಇನ್ನು ಮೂರು ನಾಲ್ಕು ಜಿಲ್ಲೆಗಳಲ್ಲಿ ಪಕ್ಷದ ಮೀಟಿಂಗ್ ಆಗಿಲ್ಲ. ಮೂರು ದಿನಗಳಲ್ಲಿ ಎಲ್ಲರೂ ಲಿಸ್ಟ್ ಕಳುಹಿಸುತ್ತಾರೆ. ನಂತರ ಚುನಾವಣಾ ಸಮಿತಿ ಸಭೆ ನಡೆಯುತ್ತದೆ. ಸಂಕ್ರಾಂತಿ ಒಳಗಡೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಆಗುವ ಸಾದ್ಯತೆ ಇದೆ ಎಂದು ಹೇಳಿದರು.

ಇದನ್ನೂ ಓದಿ | New Year 2023 | ಪ್ರವಾಸಿ ತಾಣಗಳಲ್ಲಿ ಭಾರಿ ಜನದಟ್ಟಣೆ; ಇದು ಹೊಸ ವರ್ಷದ ವೀಕೆಂಡ್‌ ಎಫೆಕ್ಟ್‌!

ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಬಣಗಳ ನಡುವೆ ಫೈಟ್‌ ಬಗ್ಗೆ ಸ್ಪಂದಿಸಿ, ಕಾಂಗ್ರೆಸ್‌ನಲ್ಲಿ ಸ್ಪರ್ಧೆ ಇದೆ. ಸ್ಪರ್ಧೆ ಇರುವ ಕಡೆ ಯುದ್ಧವಾಗುತ್ತದೆ. ಯುದ್ಧ ಆಗಬೇಕು, ಮೊದಲು ನಮ್ಮಲ್ಲಿ ಯುದ್ಧ ಮಾಡಿಕೊಂಡು ನಂತರ ಬಿಜೆಪಿ ಅವರ ಮೇಲೆ ಯುದ್ಧ ಮಾಡಬೇಕು. ನಮ್ಮಲ್ಲಿ ಯಾವ ಬಣಗಳೂ ಇಲ್ಲ, ಇರುವುದು ಒಂದೇ ಬಣ, ಅದು ಕಾಂಗ್ರೆಸ್ ಬಣ ಎಂದು ಟಿಕೆಟ್‌ಗಾಗಿ ನಡೆಯುತ್ತಿರುವ ಜಗಳವನ್ನು ಸಮರ್ಥಿಸಿಕೊಂಡರು.

ಒಕ್ಕಲಿಗ ಹಾಗೂ ಪಂಚಮಸಾಲಿ ಮೀಸಲಾತಿ ಪರಿಷ್ಕರಣೆ ಬಗ್ಗೆ ಪ್ರತಿಕ್ರಿಯಿಸಿ, ಪಂಚಮಸಾಲಿ ಸ್ವಾಮೀಜಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಸಿಎಂ ಹೇಗೆ ಮಾಡಿದ್ದಾರೆ ಎಂದರೆ ತುಪ್ಪವನ್ನು ಮೊಣಕೈಗೂ ಸವರಿಲ್ಲ, ಮೂಗಿಗೂ ಸವರಿಲ್ಲ. ತಲೆ ಮೇಲೆ ತುಪ್ಪ ಸುರಿದಿದ್ದರಿಂದ ಅದು ನಾಲಿಗೆಗೂ ಸಿಗುತ್ತಿಲ್ಲ. ಏನ್ ಟೋಪಿ ಹಾಕಿಬಿಟ್ರು ರೀ ನಮ್ಮ ಬಸಣ್ಣ ಎಂದು ಸಿಎಂ ವಿರುದ್ಧ ಕಿಡಿಕಾರಿದರು.

ಪಂಚಮಸಾಲಿ ಶಾಸಕರು, ಸಚಿವರು ರಾಜೀನಾಮೆ ಕೊಡಬೇಕು. ಮಾನ, ಮರ್ಯಾದೆ ಇದ್ದರೆ ಅಶೋಕ್ ಕೂಡ ರಾಜೀನಾಮೆ ಕೊಟ್ಟು ಹೊರಗೆ ಬರಲಿ. ಒಕ್ಕಲಿಗ ಸ್ವಾಮೀಜಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಅವತ್ತು ಸಭೆಯಲ್ಲಿ ಇದೇ ಅಶೋಕ್ ಭರವಸೆ ಕೊಟ್ಟು ಹೋಗಿದ್ದರು. ಈಗ ಹೋಗಿ ಕ್ಯಾಬಿನೆಟ್‌ನಲ್ಲಿ ಸಿಎಂ ಪಕ್ಕದಲ್ಲಿ ಕೂತಿದ್ದಾರೆ. ಹೀಗಾಗಿ ರಾಜೀನಾಮೆ ಕೊಟ್ಟು ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು ಎಂದು ಒತ್ತಾಯಿಸಿದರು.

ಅಮಿತ್ ಶಾ ಎರಡು ದಿನಗಳ ಕಾಲ ರಾಜ್ಯಕ್ಕೆ ಬಂದಿದ್ದರು. ರಾಜ್ಯದ ಆಡಳಿತ ಬಗ್ಗೆ ಅವರಿಗೆ ಸಮಾಧಾನವಿಲ್ಲ. ಇಲ್ಲಿನ ಬಿಜೆಪಿ ನಾಯಕರ ಮುಂದಾಳತ್ವದಲ್ಲಿ ಚುನಾವಣೆಗೆ ಹೋದರೆ ಕಾಂಗ್ರೆಸ್‌ ಸಾಮೂಹಿಕ ನಾಯಕತ್ವವನ್ನು ಎದುರಿಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಅಮಿತ್ ಶಾ ಅರಿತಿದ್ದಾರೆ. ಅದಕ್ಕಾಗಿ ಅವರು ಮೋದಿ ಹೆಸರಿನೊಂದಿಗೆ ಪ್ರಚಾರ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಹಿಂದುತ್ವ ಕಾರ್ಡ್ ಪ್ಲೇ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮಗೂ ಅವರಿಗೂ ಇರುವ ವ್ಯತ್ಯಾಸ ಇಷ್ಟೇ. ಅವರು ಭಾವನೆ ಮೇಲೆ ಹೋಗುತ್ತಾರೆ, ನಾವು ಬದುಕಿನ ಮೇಲೆ ಹೋಗುತ್ತೇವೆ. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದರು, ಏನಾಯಿತು? ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ದೊಡ್ಡ ಬ್ಯುಸಿನೆಸ್ ಮ್ಯಾನ್‌ಗಳನ್ನು ಜೇಬಿನಲ್ಲಿ ಇಟ್ಟುಕೊಂಡಿದ್ದಾರೆ. ಆದರೆ, ಸಣ್ಣ ಬ್ಯುಸಿನೆಸ್ ಮ್ಯಾನ್‌ಗಳು, ಹೆಣ್ಣು ಮಕ್ಕಳು ಅವರ ವಿರೋಧವಾಗಿದ್ದಾರೆ ಎಂದು ಹೇಳಿದ್ದಾರೆ.

ಹೊಸ ವರ್ಷ 2023ರಲ್ಲಿ ರಾಜ್ಯಕ್ಕೆ ಬಂದ ಕಳಂಕ ತೊಲಗಿ ಬಲಿಷ್ಠ, ಉತ್ತಮ ನವ ಕರ್ನಾಟಕ ನಿರ್ಮಾಣ ಆಗಲಿ. ರಾಜ್ಯದ ಜನ ಬದಲಾವಣೆ ತರುತ್ತಾರೆ ಎಂಬ ನಂಬಿಕೆ ಇದೆ. ಎಲ್ಲ ತರಹದ ಬದಲಾವಣೆ ಶಾಂತಿ, ನೆಮ್ಮದಿ ಸಮೃದ್ಧಿ ಸಿಗಲಿ ಎಂದು ಹಾರೈಸುತ್ತೇನೆ ಎಂದರು.

ಇದನ್ನೂ ಓದಿ | SM Krishna | ಬೆಂಗಳೂರು-ಮೈಸೂರು ದಶಪಥಕ್ಕೆ ನಾಲ್ವಡಿ ಕೃಷ್ಣರಾಜರ ಹೆಸರಿಡಿ: ಕೇಂದ್ರಕ್ಕೆ ಎಸ್ಎಂಕೆ ಒತ್ತಾಯ

Exit mobile version