ತುಮಕೂರು: ಜಾರಿ ನಿರ್ದೇಶನಾಲಯ (ಇಡಿ) ಮೂರು ನಾಲ್ಕು ವರ್ಷದ ಹಿಂದೆಯೇ ಚಾರ್ಜ್‌ಶಿಟ್ ಸಲ್ಲಿಸಬೇಕಾಗಿತ್ತು. ನಾನು ಜೈಲಿನಲ್ಲಿ ಇದ್ದಾಗಲೇ ಹಾಕಬೇಕಿತ್ತು, ಬಹಳ ತಡವಾಗಿ ಈಗ ಸಲ್ಲಿಕೆಯಾಗಿದೆ. ಇದರಲ್ಲಿ ರಾಜಕಾರಣ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ನಾನು ಜೈಲಿನಿಂದ ಹೊರ ಬಂದ ಆರು ತಿಂಗಳ ಒಳಗಾದರೂ ಹಾಕಬೇಕಿತ್ತು. ಈಗ ಫೈಲ್ ಮಾಡಿದ್ದಾರೆ. ತಡವಾಗಿರುವುದರ ಹಿಂದೆ ಬೇರೆ ಬೇರೆ ಉದ್ದೇಶಗಳಿರುವುದು ಸ್ಪಷ್ಟ. ನಾನು ಇನ್ನೂ ಚಾರ್ಜ್ ಶೀಟ್ ನೋಡಿಲ್ಲ ಎಂದವರು ತಿಳಿಸಿದ್ದಾರೆ.
ತುಮಕೂರಿನಲ್ಲಿ ಭಾನುವಾರ ಮಾತನಾಡಿದ ಅವರು, ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ನವಸಂಕಲ್ಪ ಸಭೆ ಮಾಡಲಾಗುತ್ತಿದೆ. ಜಿಲ್ಲೆಯ ಸಮಸ್ಯೆಗಳ ಕುರಿತು ಕಾಂಗ್ರೆಸ್ ಮುಖಂಡರ ಜತೆ ಚಿಂತನ ಮಂಥನ ಸಭೆ ಮಾಡಲಾಗುತ್ತಿದೆ. ಸಭೆಯಲ್ಲಿ ಜಿಲ್ಲೆಯ ಸಾಮಾಜಿಕ, ರಾಜಕೀಯ, ರೈತ, ನಿರುದ್ಯೋಗ, ಶೋಷಣೆ ಬಗ್ಗೆ ಚರ್ಚೆ ನಡೆಯುತ್ತದೆ. ನಾಯಕರಷ್ಟೇ ಅಲ್ಲ ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ ಎಂದರು.
ಇದನ್ನೂ ಓದಿ | ಡಿಕೆಶಿಗೆ ಮತ್ತೆ ಇಡಿ ಸಂಕಷ್ಟ; ಚಾರ್ಜ್‌ಶೀಟ್‌ನಲ್ಲಿ ಏನೆಲ್ಲಾ ಮಾಹಿತಿ ಇದೆ ಗೊತ್ತಾ?
ದಲಿತ ಸಿಎಂ ಕೂಗು ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ದಲಿತ ಸಿಎಂ ಯಾಕೆ ಆಗಬಾರದು, ಈ ಬಗ್ಗೆ ಅಭಿಪ್ರಾಯಗಳು ಕೇಳಿಬರುವುದು ತಪ್ಪೇನಲ್ಲ, ಪಕ್ಷಕ್ಕೆ ಏನೆಲ್ಲ ಅನುಕೂಲ ಆಗುತ್ತೋ ಅದು ಚರ್ಚೆ ಆಗುತ್ತದೆ ಎಂದರು.
ಪಠ್ಯ ಪುಸ್ತಕ ಪ್ರತಿ ಹರಿದ ವಿಚಾರದ ಬಗ್ಗೆ ಸ್ಪಂದಿಸಿದ ಅವರು, ಇದು ಹೊಸ ಸಂಸ್ಕೃತಿಯಲ್ಲ, ಸಂವಿಧಾನ ಶಿಲ್ಪಿ ಅಂಬೇಡ್ಕರ್, ಬಸವಣ್ಣ ಅವರಗೆ ಮಾಡಿದ ಅಪಮಾನ ಸಹಿಸಿಕೊಂಡು ಇರುವುದಕ್ಕೆ ಆಗಲ್ಲ. ಬಿ.ಸಿ ನಾಗೇಶ್ ಮನೆಯಲ್ಲಿ ಶಂಕರಾಚಾರ್ಯರ ಪೋಟೋ ಇಟ್ಟುಕೊಂಡಿದ್ದಾರೆ. ಶಂಕರಾ, ಸಂಕರಾ ಅಂತ ಬರೆದುಕೊಂಡಿದ್ದಾರೆ. ಶಂಕರಚಾರ್ಯರು ಎಂತಹ ಕೊಡುಗೆ ನೀಡಿದ್ದಾರೆ. ಕುವೆಂಪು, ನಾರಾಯಣಗುರು, ಭಗತ್‌ಸಿಂಗ್‌ಗೆ ಅವಮಾನ ಮಾಡಿದ್ದಾರೆ. ವೇದಿಕೆಯಲ್ಲಿ ಸ್ವಾಮೀಜಿಗಳು ಇದ್ದರು ಅದಕ್ಕೆ ಹರಿದು ಹಾಕಿದೆ, ಇಲ್ಲದಿದ್ದರೆ ಸುಟ್ಟು ಹಾಕುತ್ತಿದ್ದೆ ಎಂದು ಹೇಳಿದರು.
ಚುನಾವಣೆಯನ್ನು ಹೇಗೆ ಎದುರಿಸಬೇಕೆಂದು ಚರ್ಚೆ: ಪರಮೇಶ್ವರ್
ಚುನಾವಣೆಯನ್ನು ಹೇಗೆ ಎದುರಿಸಬೇಕು ಎಂದು ಕಾಂಗ್ರೆಸ್ ನವ ಸಂಕಲ್ಪ ಸಭೆಯಲ್ಲಿ ಚರ್ಚೆ ನಡೆಯುತ್ತದೆ. 6 ತಿಂಗಳ ಮುಂಚೆಯೇ ಟಿಕೆಟ್ ಕೊಡಿ ಎಂದು ಕೆಲ ಮುಖಂಡರು ಕೇಳಿದ್ದಾರೆ. ಮುಂಚೆ ಕೊಟ್ಟರೆ ಪರಿಣಾಮಕಾರಿ ಕೆಲಸ ಮಾಡುತ್ತಾರೆ. ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಕೊನೆ ಕ್ಷಣದಲ್ಲಿ ಟಿಕೆಟ್ ಹಂಚಿಕೆ ಮಾಡಿ ಎಂದಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಪ್ರಣಾಳಿಕೆ ಮಾಡಬೇಕಿದ್ದು, ಸಲಹೆಗಳನ್ನ ಸಂಗ್ರಹಿಸಲಾಗುತ್ತದೆ ಎಂದು ಶಾಸಕ ಜಿ.ಪರಮೇಶ್ವರ್ ಹೇಳಿದರು.
ಕಾಂಗ್ರೆಸ್ ಸಭೆಗೆ ಸಿದ್ದರಾಮಯ್ಯ ಗೈರು ವಿಚಾರ ಪ್ರತಿಕ್ರಿಯಿಸಿದ ಅವರು, ಅವರಿಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮವಿದೆ. ಹೀಗಾಗಿ ಎಲ್ಲರನ್ನು ಸೇರಿ ಕಾರ್ಯಕ್ರಮ ಮಾಡಿ ಎಂದಿದ್ದಾರೆ. ದಲಿತ ಸಿಎಂ ಕೂಗು ವಿಚಾರದ ಬಗ್ಗೆ ಚರ್ಚೆ ನಡೆಯಲ್ಲ ಎಂದರು.
ಬಿಬಿಎಂಪಿ ವಾರ್ಡ್ ವಿಂಗಡಣೆ ವಿಚಾರ ಪ್ರತಿಕ್ರಿಯಿಸಿದ ಜಿ. ಪರಮೇಶ್ವರ್ ಬಿಜೆಪಿಗೆ ಅನುಕೂಲವಾಗುವಂತೆ ವಾರ್ಡ್ ವಿಂಗಡಣೆ ಮಾಡಲಾಗಿದೆ. ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಉದ್ದೇಶಪೂರ್ವಕಾಗಿಯೇ ಈ ರೀತಿ ವಿಂಗಡಣೆ ಮಾಡಿದ್ದಾರೆಯೇ ಎಂಬ ಅನುಮಾನ ಮೂಡಿದೆ. ಯಾರಾದರೂ ಕೋರ್ಟ್‌ಗೆ ಹೋಗಲು ಈ ರೀತಿ ಮಾಡಿದ್ದಾರೆಯೇ ಎಂದು ನೋಡಬೇಕಾಗಿದೆ ಎಂದರು.