ಬೆಂಗಳೂರು: ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸೂಚನೆಯಂತೆ ಸರ್ಕಾರದ ಅಧೀನ ಕಾರ್ಯದರ್ಶಿ ಜೇಮ್ಸ್ ತಾರಕನ್ ಅವರು ನೀಡಿದ ಖಡಕ್ ಆದೇಶ ಸ್ವಲ್ಪ ಮಟ್ಟಿಗೆ ಕೆಲಸ ಮಾಡಿದೆ. ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ಫೇಸ್ ಬುಕ್‌ನಲ್ಲಿ ಹಾಕಿದ್ದ ಭಾರಿ ಚರ್ಚೆಗೆ ಕಾರಣವಾದ ʻSo Madly Madly beautiful’ ಎಂಬ ಬರಹವಿರುವ ಪೋಸ್ಟನ್ನು (Sindhuri Vs Roopa) ಡಿಲೀಟ್ ಮಾಡಲಾಗಿದೆ.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿದ ಡಿ. ರೂಪಾ ಅವರು ಸೋಮವಾರ ಮಧ್ಯಾಹ್ನದ ಹೊತ್ತಿಗೆ ಒಂದು ಪೋಸ್ಟ್ ಹಾಕಿದ್ದರು. ರೋಹಿಣಿ ಸಿಂಧೂರಿ ಅವರ ಖಾಸಗಿ ನಂಬರ್‌ನಿಂದ ಯಾರಿಗೋ ಮೆಸೇಜ್ ಕಳುಹಿಸಿದ್ದು ಅದನ್ನು ಬಳಿಕ ಡಿಲೀಟ್ ಮಾಡಲಾಗಿತ್ತು. ಸುಮಾರು ೧೦ರಷ್ಟು ಮೆಸೇಜ್‌ಗಳನ್ನು ಡಿಲೀಟ್ ಮಾಡಲಾಗಿದೆ. ಅದರ ಕೊನೆಯಲ್ಲಿ ʻಸೋ ಮ್ಯಾಡ್ಲಿ ಮ್ಯಾಡ್ಲಿ ಬ್ಯೂಟಿಫುಲ್ʼ ಎಂಬ ಪ್ರತಿಕ್ರಿಯೆ ನೀಡಲಾಗಿತ್ತು.
ಹೀಗೆ ಡಿಲೀಟ್ ಮಾಡಲಾದ ಮೆಸೇಜ್‌ಗಳಲ್ಲಿ ಫೋಟೊಗಳಿದ್ದವು, ಅದರಲ್ಲೂ ಮುಖ್ಯವಾಗಿ ನಗ್ನ ಫೋಟೊಗಳಿದ್ದವು ಎಂಬರ್ಥ ಬರುವಂತೆ ಡಿ. ರೂಪಾ ವಿವರಣೆ ನೀಡಿದ್ದರು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಈ ನಡುವೆ ಸೋಮವಾರ ಸಂಜೆಯ ವೇಳೆಗೆ ಸರ್ಕಾರ ಈ ಇಬ್ಬರ ಜಗಳವನ್ನು ಗಂಭೀರವಾಗಿ ತೆಗೆದುಕೊಂಡಿತ್ತು. ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮೂಲಕ ಎಚ್ಚರಿಕೆಯನ್ನು ಕೊಡಿಸಿತ್ತು. ಅದರ ಜತೆಗೆ ʻʻಯಾವುದೇ ಕಾರಣಕ್ಕೂ ಇನ್ನು ಮುಂದೆ ಸಾರ್ವಜನಿಕವಾಗಿ, ಸಾಮಾಜಿಕ ಜಾಲತಾಣ, ಮಾಧ್ಯಮಗಳಿಗೆ ಈ ವಿಚಾರದಲ್ಲಿ ಹೇಳಿಕೆ ನೀಡುವಂತಿಲ್ಲʼʼ ಎಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ, ಐಪಿಎಸ್ ಅಧಿಕಾರಿ ಡಿ. ರೂಪಾ ಅವರಿಗೆ ಸಿಬ್ಬಂದಿ ಮತ್ತು ಆಡಳಿತ ಇಲಾಖೆಯಿಂದ ನೋಟಿಸ್ ನೀಡಲಾಯಿತು.
ʻʻಇನ್ನೊಬ್ಬ ಸರ್ಕಾರ ಅಧಿಕಾರಿಯ ವಿರುದ್ಧ ಹೇಳಿಕೆ ನೀಡಲು ನೀವು ಮಾಧ್ಯಮಗಳನ್ನು ಬಳಸಿದ್ದೀರಿ. ನಿಮಗೆ ಆರೋಪ ಮಾಡಲು ಸೂಕ್ತ ವೇದಿಕೆ ಇದೆ. ಆದರೆ ಅದನ್ನು ಬಿಟ್ಟು ನೀವು ಮಾಧ್ಯಮ ಮುಂದೆ ಹೋಗಿದ್ದೀರಿ. ಈ ನಡೆ ರಾಜ್ಯ ಸರ್ಕಾರಕ್ಕೆ ಮುಜುಗರ ತಂದಿದೆ. ಇದು ಭಾರತೀಯ ಸೇವಾ ನಿಯಮಗಳ ಉಲ್ಲಂಘನೆಯಾಗಿದೆ. ನಿಮ್ಮ ಆರೋಪಗಳನ್ನು ಸಕ್ಷಮ ಪ್ರಾಧಿಕಾರದ ಮುಂದೆ ಮಾಡಬಹುದು. ಮಾಧ್ಯಮಗಳ ಮುಂದೆ ಆರೋಪ ಮಾಡಿರುವುದು ಸರಿಯಲ್ಲ. ಹೀಗಾಗಿ ನೀವು ಇನ್ನು ಮುಂದೆ ಮಾಧ್ಯಮಗಳ ಹೋಗಬಾರದುʼʼ ಎಂದು ಖಡಕ್ ಸೂಚನೆ ನೀಡಲಾಗಿತ್ತು.
ಇದೀಗ ಡಿ. ರೂಪಾ ಅವರು ಈ ಒಂದು ಪೋಸ್ಟನ್ನು ಡಿಲೀಟ್ ಮಾಡಿದ್ದಾರೆ.
ಇದನ್ನೂ ಓದಿ : Sindhuri Vs Roopa : ಸಿಂಧೂರಿ, ರೂಪಾ ಬೀದಿ ಜಗಳಕ್ಕೆ ಬ್ರೇಕ್ ; ಬಹಿರಂಗ ಹೇಳಿಕೆ ನೀಡದಂತೆ ಸರ್ಕಾರ ಆರ್ಡರ್