ನವದೆಹಲಿ: ಐಪಿಎಸ್ ಅಧಿಕಾರಿ ಡಿ. ರೂಪಾ (D Roopa) ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಅವರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ(Defamation case) ವಿಚಾರಣೆಯನ್ನು ಸುಪ್ರೀಂ ಕೋರ್ಟ್ (Supreme Court) ಶುಕ್ರವಾರ ನಡೆಸಿತು. ಈ ವೇಳೆ, ಡಿ ರೂಪಾ ಅವರು ಕ್ಷಮೆ ಕೇಳಲೇಬೇಕು (must apologise) ಎಂದು ರೋಹಿಣಿ ಸಿಂಧೂರಿ ಅವರು ಪಟ್ಟು ಹಿಡಿದರು. ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ವಿರುದ್ಧ ಮಾಡಲಾಗಿರುವ ಎಲ್ಲ ಅವಹೇಳನಕಾರಿ ಪೋಸ್ಟ್ಗಳನ್ನು ತೆಗೆದು ಹಾಕಬೇಕು. ಇದರಿಂದ ನನ್ನ ಕುಟುಂಬಕ್ಕೆ ಘಾಸಿಯಾಗಿದೆ. ಹಾಗಾಗಿ, ಡಿ ರೂಪಾ ಅವರು ಕ್ಷಮೆಯಾಚಿಸಬೇಕು ಎಂದು ರೋಹಿಣಿ ಸಿಂಧೂರಿ ಪರ ವಕೀಲರು ವಾದ ಮಂಡಿಸಿದ್ದಾರೆ(Roopa Vs Sindhuri).
ರೋಹಿಣಿ ಅವರ ವಾದವನ್ನು ತಿರಸ್ಕರಿಸಿದ ಡಿ. ರೂಪಾ ಪರ ವಕೀಲರು, ರೋಹಿಣಿ ಸಿಂಧೂರಿ ಅವರು ರೂಪಾ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ನ್ಯಾಯಾಲಯದ ಗಮನಕ್ಕೆ ತಂದರು. ಡಿ. ರೂಪಾ ಅವರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರೋಹಿಣಿ ಪರ ವಕೀಲರು, ಹೌದು, ಬುದ್ಧಿ ಭ್ರಮಣೆಯಾದವರು ಈ ರೀತಿ ಪೋಸ್ಟ್ ಮಾಡುತ್ತಾರೆಂದು ಹೇಳಿದ್ದೇನೆ. ಹೊರತು ಅವರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಹೇಳಿಲ್ಲ ಎಂದು ತಿಳಿಸಿದರು.
ಈ ಹಂತದಲ್ಲಿ ಮಧ್ಯ ಪ್ರವೇಶಿದ ನ್ಯಾಯಮೂರ್ತಿ ಎ ಎಸ್ ಓಕಾ ಅವರು, ಇಬ್ಬರೂ ಅಧಿಕಾರಿಗಳು ಒಂದು ನಿರ್ಧಾರಕ್ಕೆ ಬರಬೇಕು. ಇದಕ್ಕಾಗಿ ಒಂದು ತಿಂಗಳ ಸಮಯ ನೀಡಲಾಗುವುದು ಎಂದು ತಿಳಿಸಿದರು. ಸೋಶಿಯಲ್ ಮೀಡಿಯಾದಿಂದ ಎಲ್ಲ ಪೊಸ್ಟ್ ಡಿಲಿಟ್ ಮಾಡಬೇಕು. ಈ ರೀತಿಯ ಮಾನಹಾನಿ ಮಾಡಿದರೆ ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುವುದಾದರೂ ಹೇಗೆ ಎಂದ ಸಿಂಧೂರಿ ಪರ ವಕೀಲರು ಹೇಳಿದರು.
ಆಗ ನ್ಯಾಯಮೂರ್ತಿಗಳು, ನಿಮ್ಮಗೆ ಒಳ್ಳೆಯ ಭವಿಷ್ಯವಿದೆ. ಉಜ್ವಲ ಭವಿಷ್ಯದ ಕಾರಣದಿಂದ ಪ್ರಕರಣ ಇತ್ಯರ್ಥಕ್ಕೆ ಯೋಚಿಸಿದ್ದೇವೆ. ಆದರೆ ಭಾವನೆಗಳು ಅಧಿಕವಾಗಿದ್ದರೆ ನಾವು ಒತ್ತಾಯಿಸಲು ಸಾಧ್ಯವಿಲ್ಲ ಎಂದ ನ್ಯಾ. ಓಕಾ ಅವರು ಹೇಳಿದರು.
ಆದರೆ, ನ್ಯಾಯಮೂರ್ತಿಗಳ ಮಾತನ್ನು ರೋಹಿಣಿ ಪರ ವಕೀಲರು ಒಪ್ಪಿಕೊಳ್ಳಲಿಲ್ಲ. ನಮಗೆ ಉಜ್ವಲ ಭವಿಷ್ಯವಿರಬಹುದು. ಆದರೆ ಈಗ ಜನರು ನನ್ನನ್ನು ನೋಡುವ ರೀತಿಯೇ ಬೇರೆ ಆಗಿದೆ. ನಾನು ಮೌನವಾಗಿರಲು ಸಾಧ್ಯವಿಲ್ಲ ಎಂದು ತಿಳಿಸಿದರು. ಆಗ ನ್ಯಾಯಮೂರ್ತಿ ಎ ಎಸ್ ಓಕಾ, ಮೌನವಾಗಿರಲು ಅಥವಾ ಹಿಂತೆಗೆದುಕೊಳ್ಳುವಂತೆ ನಾವು ನಿಮ್ಮನ್ನು ಒತ್ತಾಯಿಸುತ್ತಿಲ್ಲ ಎಂದು ಹೇಳಿ, ವಿಚಾರಣೆಯನ್ನು ಫೆಬ್ರವರಿ 16ಕ್ಕೆ ಮುಂದೂಡಿದರು.
ಏನಿದು ರೂಪಾ-ರೋಹಿಣಿ ಜಗಳ?
ಕಳೆದ ಫೆಬ್ರವರಿಯಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ ರೂಪಾ ನಡುವಿನ ಜಗಳ ತಾರಕ್ಕೇರಿತು. ರೋಹಿಣಿ ವಿರುದ್ಧ ವೈಯಕ್ತಿಕ ಆರೋಪಗಳನ್ನು ಮಾಡಿದ್ದ ಡಿ ರೂಪಾ ಅವರು ಸೋಷಿಯಲ್ ಮೀಡಿಯಾದಲ್ಲಿ ಅವರ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡಿರುವ ಪೋಸ್ಟ್ ಷೇರ್ ಮಾಡಿದ್ದರು. ಅಲ್ಲದೇ, ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಇದು ಇಬ್ಬರ ನಡುವಿನ ಜಗಳ ಬೀದಿಗೆ ಬರುವಂತೆ ಮಾಡಿತ್ತು. ಅಲ್ಲದೇ, ಸಾಕಷ್ಟು ವಾದ ವಿವಾದಕ್ಕೆ ಕಾರಣವಾಗಿತ್ತು. ಬಳಿಕ, ಐಎಎಸ್ ಅಧಿಕಾರಿ ರೋಹಿಣಿ ಅವರು, ಡಿ ರೂಪಾ ಅವರು ಸೋಷಿಯಲ್ ಮೀಡಿಯಾದಲ್ಲಿ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡಿದ್ದಾರೆ. ಮಾಧ್ಯಮಗಳಲ್ಲೂ ಅವಮಾನಕರ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಿದ್ದರು. ರೂಪಾ ವಿರುದ್ದ 1 ಕೋಟಿ ರೂ. ಕ್ರಿಮಿನಲ್ ಮಾನಹಾನಿ ಕೇಸ್ ದಾಖಲಿಸಿದ್ದರು.
ಈ ಸುದ್ದಿಯನ್ನೂ ಓದಿ: Rohini Sindhuri : 6 ತಿಂಗಳ ಬಳಿಕ ರೋಹಿಣಿ ಸಿಂಧೂರಿಗೆ ಮತ್ತೆ ಸಿಕ್ತು ಹುದ್ದೆ ; ಅವರೀಗ Chief Editor! ರೂಪಾ IPSಗೆ ಇಲ್ವಾ?