ಬೆಂಗಳೂರು: ಈಗ ಮುಜರಾಯಿ ಇಲಾಖೆಯ ಕಮಿಷನರ್ ಆಗಿರುವ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ. ರೂಪಾ ನಡುವಿನ ಜಗಳ ವಿಪರೀತದ ಹಂತಕ್ಕೇರಿದೆ. ಮೈಸೂರಿನ ಕೆ.ಆರ್. ನಗರ ಶಾಸಕ ಸಾ.ರಾ. ಮಹೇಶ್ ಅವರ ಜತೆ ರೋಹಿಣಿ ಅವರು ಸಂಧಾನ ಮಾಡಿಕೊಂಡಿದ್ದಾರೆ ಎಂಬ ಅಂಶವನ್ನು ಇಟ್ಟುಕೊಂಡು ಐಎಎಸ್ ಅಧಿಕಾರಿಯ ನಡೆಗಳನ್ನು ತೀವ್ರ ವಿಮರ್ಶೆಗೆ ಒಳಪಡಿಸಿರುವ ಡಿ.ರೂಪಾ ಅವರು ಹಲವಾರು ಖಾಸಗಿ ವಿಚಾರಗಳನ್ನು ಕೂಡಾ ಪ್ರಸ್ತಾಪಿಸಿದ್ದಾರೆ. ರೋಹಿಣಿ ಸಿಂಧೂರಿ (D Roopa IPS) ತಮ್ಮ ಖಾಸಗಿಯಾಗಿರುವ, ಅಷ್ಟೇನೂ ಸಭ್ಯವಲ್ಲದ ಫೋಟೊಗಳನ್ನು ಐಎಎಸ್ ಅಧಿಕಾರಿಗಳಿಗೆ ಕಳುಹಿಸುತ್ತಿದ್ದರು ಎಂದು ರೂಪಾ ಆರೋಪಿಸಿದ್ದಾರೆ. ಮಾತ್ರವಲ್ಲ ಅದಕ್ಕೆ ಪೂರಕವಾಗಿ ಫೋಟೊ ದಾಖಲೆಗಳನ್ನು ನೀಡಿದ್ದಾರೆ. ರೂಪಾ ಅವರ ಆರೋಪಗಳನ್ನು ನಿರಾಕರಿಸಿರುವ ರೋಹಿಣಿ ಸಿಂಧೂರಿ ಅವರು ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ. ಹಾಗಾದರೆ ಡಿ. ರೂಪಾ ಅವರ ಹಿನ್ನೆಲೆ ಏನು? ಅವರು ನಡೆದು ಬಂದ ಹಾದಿಯ ಹಿನ್ನೋಟ ಇಲ್ಲಿದೆ.
ಯಾರಿವರು ಡಿ. ರೂಪಾ?
ಈಗ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ (Karnataka state handicrafts development corporation ltd) ವ್ಯವಸ್ಥಾಪಕ ನಿರ್ದೇಶಕರಾಗಿರುವ ಡಿ. ರೂಪಾ ಅವರು ಮೂಲತಃ ದಾವಣಗೆರೆಯವರು. ಐಪಿಎಸ್ ಅಧಿಕಾರಿ. ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (IGP), ಮಾಜಿ ಗೃಹ ಕಾರ್ಯದರ್ಶಿ. ರಾಷ್ಟ್ರಪತಿಯವರ ಪೊಲೀಸ್ ಪದಕ ಪುರಸ್ಕೃತರು. ಹಿರಿಯ ಐಎಎಸ್ ಅಧಿಕಾರಿ ಮೌನೀಶ್ ಮೌದ್ಗಿಲ್ ಇವರ ಪತಿ. ಬರವಣಿಗೆ, ಸಂಗೀತ ಅವರ ಹವ್ಯಾಸ.
ಕಿರಣ್‌ಬೇಡಿ ಅವರಿಂದ ಶಹಬ್ಬಾಸ್ ಗಳಿಸಿದ್ದು ಏಕೆ?
ಭ್ರಷ್ಯಾಚಾರ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದ ಶಶಿಕಲಾ ಅವರಿಗೆ ವಿಶೇಷ ಆತಿಥ್ಯವನ್ನು ನೀಡುತ್ತಿದ್ದ ಬಗ್ಗೆ ತನಿಖೆ ನಡೆಸಿ ಬಯಲಿಗೆಳೆದಿದ್ದವರು ಐಪಿಎಸ್ ಅಧಿಕಾರಿ ಡಿ. ರೂಪಾ. ಶಶಿಕಲಾ ಅವರಿಗೆ ಸಲ್ಲಿಕೆಯಾಗಿದ್ದ ವಿಶೇಷ ಆತಿಥ್ಯದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು. ಬಳಿಕ ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆದಿತ್ತು. ಆಗ ಕಿರಣ್ ಬೇಡಿ ಅವರು ನಮಗೆ ಇಂಥ ಐಪಿಎಸ್ ಅಧಿಕಾರಿಗಳು ಬೇಕು ಎಂದು ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಡಿ. ರೂಪಾ ಅವರು ದಾವಣಗೆರೆಯಲ್ಲಿ ಜನಿಸಿದರು. ತಂದೆ ಜೆ.ಎಸ್ ದಿವಾಕರ್. ನಿವೃತ್ತ ಎಂಜಿನಿಯರ್. ತಾಯಿ ಹೇಮಾವತಿ. ಕಿರಿಯ ಸೋದರಿ ರೋಹಿಣಿ ದಿವಾಕರ್. ಚಿಕ್ಕಂದಿನಲ್ಲೂ ಪ್ರತಿಭಾವಂತೆಯಾಗಿದ್ದ ರೂಪಾ ಅವರು ಕಲಿಕೆಯಲ್ಲೂ ಮುಂದಿದ್ದರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕದೊಂದಿಗೆ ಪದವಿ ಗಳಿಸಿದ ಬಳಿಕ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಶಾಲಾ ಕಾಲೇಜುಗಳಲ್ಲಿ ಎನ್‌ಸಿಸಿಯಲ್ಲಿ ಸಕ್ರಿಯರಾಗಿದ್ದರು. 2003ರಲ್ಲಿ ಮೌನಿಶ್ ಮೌದ್ಗಿಲ್ ಅವರನ್ನು ವಿವಾಹವಾದರು. ಪತಿ ಐಐಟಿ ಬಾಂಬೆಯ ಹಳೆ ವಿದ್ಯಾರ್ಥಿ. ಐಎಎಸ್ ಅಧಿಕಾರಿ. ದಂಪತಿಗೆ ಅನಘಾ ಮತ್ತು ರುಶಿಲ್ ಎಂಬ ಇಬ್ಬರು ಮಕ್ಕಳಿದ್ದಾರೆ.
ಕರಿಯರ್ ಹೇಗಿತ್ತು?
ರೂಪಾ ಅವರು 2000ರಲ್ಲಿ ಯುಪಿಎಸ್‌ಸಿ ಪರೀಕ್ಷೆಯನ್ನು ಅಖಿಲ ಭಾರತ ಮಟ್ಟದಲ್ಲಿ 43ನೇ ರ‍್ಯಾಂಕ್‌ನೊಂದಿಗೆ ಉತ್ತೀರ್ಣರಾದರು. ಹೈದರಾಬಾದ್‌ನ ಸರ್ದಾರ್ ವಲ್ಲಭಭಾಯ್ ಪಟೇಲ್ ನ್ಯಾಷನಲ್ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಗಳಿಸಿದರು. ತರಬೇತಿ ಪಡೆದ ಬಳಿಕ ಧಾರವಾಡ ಜಿಲ್ಲೆಯಲ್ಲಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಎಸ್ಪಿ) ಆಗಿದ್ದರು. ಧಾರವಾಡದಲ್ಲಿ ಕರಿಯರ್ ಆರಂಭವಾಯಿತು. ಗದಗ ಜಿಲ್ಲೆಯಲ್ಲೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು. ಬೀದರ್, ಯಾದಗಿರಿಯಲ್ಲಿ ವೃತ್ತಿಯ ಜತೆಗೆ ಸಂಗೀತಾಭ್ಯಾಸವನ್ನು ಮುಂದುವರಿಸಿದರು. ಸೇವೆಯ ಬಳಿಕ ಬೆಂಗಳೂರಿಗೆ ಸ್ಥಳಾಂತರವಾದರು. ಹೊಸತಾಗಿ ರಚನೆಯಾದ ಯಾದಗಿರಿ ಜಿಲ್ಲೆಯ ಮೊದಲ ಎಸ್ಪಿಯೂ ಅವರೇ ಆಗಿದ್ದರು. 2016ರ ಜನವರಿ 26ರಂದು ರಾಷ್ಟ್ರಪತಿಯವರ ಪೊಲೀಸ್ ಪದಕಕ್ಕೆ ಪಾತ್ರರಾಗಿದ್ದರು.
ರೂಪಾ ಅವರು 2013ರಲ್ಲಿ ಸೈಬರ್ ಕ್ರೈಮ್ ಪೊಲೀಸ್ ವಿಭಾಗದ ಮೊದಲ ಮಹಿಳಾ ಪೊಲೀಸ್ ಮುಖ್ಯಸ್ಥರಾಗಿದ್ದರು. ಬೆಂಗಳೂರಿನಲ್ಲಿ ನಗರ ಸಶಸ್ತ್ರ ಮೀಸಲು ಪಡೆಯ ಡಿಸಿಪಿ ಆಗಿದ್ದಾಗ 81 ರಾಜಕಾರಿಗಳು ಅಕ್ರಮವಾಗಿ ಇಟ್ಟುಕೊಂಡಿದ್ದ ಹೆಚ್ಚುವರಿ 216 ಗನ್ ಮ್ಯಾನ್‌ಗಳ ಸೇವೆಯನ್ನು ಹಿಂತೆಗೆದುಕೊಂಡಿದ್ದರು. 2017ರಲ್ಲಿ ಬಂದಿಖಾನೆ ಇಲಾಖೆಯ ಡಿಐಜಿಯಾಗಿ ಸುಧಾರಣೆಗೆ ಯತ್ನಿಸಿದರು. ಎಐಎಡಿಎಂಕೆ ನಾಯಕಿ ವಿಕೆ ಶಶಿಕಲಾ ಜೈಲಿನಲ್ಲಿ ಅಕ್ರಮವಾಗಿ ಪಡೆಯುತ್ತಿದ್ದ ವಿಶೇಷ ಸೌಲಭ್ಯಗಳ ಬಗ್ಗೆ ಗಮನ ಸೆಳೆದಿದ್ದರು.
ಜೈಲಿನಲ್ಲಿ ಶಶಿಕಲಾಗೆ ವಿಐಪಿ ಆತಿಥ್ಯ ನೀಡಿದ್ದನ್ನು ಬಯಲಿಗೆಳೆದಿದ್ದರು
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ೨೦೧೭ರಲ್ಲಿ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರ ಆಪ್ತೆ ಶಶಿಕಲಾ ಅವರಿಗೆ ವಿಶೇಷ ಆತಿಥ್ಯ ನೀಡುತ್ತಿದ್ದುದನ್ನು ರೂಪಾ ಬಯಲಿಗೆಳೆದಿದ್ದರು. ಬಳಿಕ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆದಿತ್ತು. ಈ 295 ಪುಟಗಳ ವರದಿಯು ಜೈಲಿನಲ್ಲಿ ಶಶಿಕಲಾ ಅವರಿಗೆ ಅಕ್ರಮವಾಗಿ ವಿಶೇಷ ಸೌಲಭ್ಯಗಳನ್ನು ಕೊಟ್ಟಿದ್ದುದನ್ನು ದೃಢಪಡಿಸಿತ್ತು ಎಂದು ಆರ್‌ಟಿಐ ಕಾರ್ಯಕರ್ತ ನರಸಿಂಹ ಮೂರ್ತಿ ಎಂಬುವರು ತಿಳಿಸಿದ್ದರು. ಎಚ್‌ಎನ್ ಸತ್ಯನಾರಾಯಣ ರಾವ್ ಬಂಧಿಖಾನೆ ಡಿಜಿಪಿ ಆಗಿದ್ದಾಗ ಅಕ್ರಮ ನಡೆಸಿದ್ದರು ಹಾಗೂ ಶಶಿಕಲಾಗೆ ವಿಐಟಿ ಟ್ರೀಟ್‌ಮೆಂಟ್ ಸಿಗುವಲ್ಲಿ ನಡೆದ ಭ್ರಷ್ಟಾಚಾರದಲ್ಲಿ ಅವರೂ ಪಾಲುದಾರರು ಎಂದು ರೂಪಾ ಅವರು ಆರೋಪಿಸಿದ್ದರು.
ಉಮಾಭಾರತಿಯವರನ್ನು ಬಂಧಿಸಿದ್ದರು
ಧಾರವಾಡದಲ್ಲಿ ರೂಪಾ ಅವರು ಎಸ್ಪಿಯಾಗಿದ್ದಾಗ ಮಧ್ಯಪ್ರದೇಶ ಸಿಎಂ ಆಗಿದ್ದ ಉಮಾಭಾರತಿಯವರನ್ನು ಅರೆಸ್ಟ್ ಮಾಡಬೇಕಾದ ಕರ್ತವ್ಯ ಎದುರಾಗಿತ್ತು. ಹುಬ್ಬಳ್ಳಿ ಕೋರ್ಟ್‌ನಲ್ಲಿ ಅವರಿಗೆ ಜಾಮೀನು ರಹಿತ ಬಂಧನ ಆದೇಶವಾಗಿತ್ತು. ಆದರೆ ಉಮಾಭಾರತಿಯವರು ಕೋರ್ಟ್‌ಗೆ ಬಂದಿರಲಿಲ್ಲ. ಹೀಗಾಗಿ ಬಂಧನದ ಆದೇಶವನ್ನು ಜಾರಿ ಮಾಡುವ ಹೊಣೆಯನ್ನು ರೂಪಾ ಅವರಿಗೆ ವಹಿಸಲಾಗಿತ್ತು.
ಐಎಎಸ್, ಐಪಿಎಸ್ ಮಾಡಬೇಕು ಎಂಬ ಆಸೆ ನನಗಿತ್ತು. ಕಾಲೇಜಿನಲ್ಲಿ ಆರ್ಟ್ಸ್ ತೆಗೆದುಕೊಂಡಾಗ ಹಲವರು ಆಕ್ಷೇಪಿಸಿದ್ದರು. ಆದರೆ ನನಗೆ ವಿಜ್ಞಾನದಲ್ಲಿ ಆಸಕ್ತಿ ಇರಲಿಲ್ಲ. ಐಪಿಎಸ್ ಕನಸು ನನಸಾದಾಗ ಅವಿಸ್ಮರಣೀಯ ಕ್ಷಣವಾಗಿತ್ತು ಎಂದು ಸಂದರ್ಶನವೊಂದರಲ್ಲಿ ರೂಪಾ ಹೇಳಿದ್ದರು.
ಇದನ್ನೂ ಓದಿ : Sindhuri Vs Roopa : ಡಿ. ರೂಪಾ ವಿರುದ್ಧ ಸಿಎಸ್‌ಗೆ ಲಿಖಿತ ದೂರು ನೀಡಿದ ಸಿಂಧೂರಿ, ರೋಹಿಣಿಗೆ ಬಿಗಿ ಭದ್ರತೆ