Site icon Vistara News

Village life : ಎಂಟೆಕ್‌ ಓದಿದ್ದರೂ ಕೃಷಿಕನಾದ ಯುವಕ, ಫ್ಲ್ಯಾಟ್‌ನಿಂದ ಹಳ್ಳಿಗೆ ಬಂದ ಯುವತಿ

village life

#image_title

ಬೆಂಗಳೂರು: ಸಾಮಾನ್ಯವಾಗಿ ಹಳ್ಳಿಗಳಲ್ಲಿ ಯುವ ಜನತೆ ಉಳಿಯುತ್ತಿಲ್ಲ, ಅವುಗಳು ವೃದ್ಧಾಶ್ರಮಗಳಾಗುತ್ತಿವೆ. ಈಗಿನ ಹುಡುಗ-ಹುಡುಗಿಯರೆಲ್ಲ ನಗರ, ಪಟ್ಟಣ ಸೇರುತ್ತಿದ್ದಾರೆ. ಓದಿ ಯಾವುದಾದರೂ ಕಂಪನಿಯಲ್ಲಿ ಕೆಲಸಕ್ಕೆ ಸೇರಿ ಅಲ್ಲಿಯೇ ಲೈಫ್ಟ್‌ ಸೆಟ್ಲ್‌ ಮಾಡಿಕೊಳ್ಳುತ್ತಾರೆ. ಇದರ ಪರಿಣಾಮ ಹಳ್ಳಿಗಳಲ್ಲಿ (Village life) ಯುವ ಜನತೆಯನ್ನೇ ಕಾಣಲು ಸಿಗುತ್ತಿಲ್ಲ. ಹಳ್ಳಿಗಳಲ್ಲೂ ಯುವ ರೈತರಿಗೆ ಸ್ಥಿತಿವಂತರಾಗಿದ್ದರೂ ಮದುವೆಯಾಗಲು ಹೆಣ್ಣು ಕೊಡುವವರಿಲ್ಲ ಎಂಬ ಅಳಲು ಸಾಮಾನ್ಯ. ಆದರೆ ಪ್ರವಾಹದ ವಿರುದ್ಧ ಈಜುವವರೂ ಇದ್ದಾರೆ.

ಇದು ಅಂಥ ಒಂದು ಉದಾಹರಣೆ. ಈ ಬಗ್ಗೆ ಲೇಖಕ ಹಾಗೂ ಸಾಮಾಜಿಕ ಚಿಂತಕ ಮಹೇಶ್‌ ಪುಚ್ಚಪ್ಪಾಡಿ ಅವರು ಜಾಲತಾಣದಲ್ಲೊಂದು ಪೋಸ್ಟ್‌ ಮಾಡಿದ್ದಾರೆ. ಅವರ ಸ್ನೇಹಿತ ಸುಬ್ರಹ್ಮಣ್ಯ ಪ್ರಸಾದ ಎಂಬವರ ವಿವಾಹ ಇತ್ತೀಚೆಗೆ ನೆರವೇರಿತು. ವಿಶೇಷ ಎಂದರೆ ಎಂಟೆಕ್‌ ಓದಿರುವ ಸುಬ್ರಹ್ಮಣ್ಯ ಪ್ರಸಾದ ಅವರು ಆಧುನಿಕ ಕೃಷಿಯ ಬಗ್ಗೆ ಅಪಾರ ಆಸಕ್ತಿ, ಒಲವು ಹೊಂದಿರುವವರು. ಕೃಷಿ ಸಂಸ್ಕೃತಿಯನ್ನು ಉಳಿಸಬೇಕು ಎಂಬ ತುಡಿತ ಇರುವವರು. ಎಲ್ಲರೂ ವಿದ್ಯಾವಂತರಾಗಿ ನಗರಕ್ಕೆ ತೆರಳಿದರೆ ಸುಬ್ರಹ್ಮಣ್ಯ ಪ್ರಸಾದ ಅವರು ನಗರದಿಂದ ಹಳ್ಳಿಗೆ ಮರಳಿದ್ದಾರೆ. ಪತ್ನಿಯೂ ನಗರ ಬಿಟ್ಟು ಹಳ್ಳಿಗೆ ಮರಳಿದ್ದಾರೆ.

ಮಹೇಶ್‌ ಪುಚ್ಚಪ್ಪಾಡಿ ಹೀಗೆ ವಿವರಿಸಿದ್ದಾರೆ- ನನ್ನ ಮಿತ್ರ, ಹಿತೈಷಿ ನನ್ನೂರಿನ ಸುಬ್ರಹ್ಮಣ್ಯ ಪ್ರಸಾದ ಅವರ ವಿವಾಹ ಕಾರ್ಯಕ್ರಮ. ಹುಡುಗ ಎಂಟೆಕ್‌ ಪದವೀಧರ. ಕೆಲವು ಸಮಯ ಉಪನ್ಯಾಸಕನಾಗಿ ಕೆಲಸ ಮಾಡಿದ್ದ. ಕೃಷಿ ಭೂಮಿ ಉಳಿಸಬೇಕು, ಬೆಳೆಸಬೇಕು ಎಂದು ಕೃಷಿಗೆ ಬಂದ. ಎಲ್ಲೇ ಕೃಷಿ ಕಾರ್ಯಕ್ರಮ ಇರಲಿ ಅಲ್ಲಿನ ಮಾಹಿತಿ ಪಡೆಯುತ್ತಾನೆ ಆಧುನಿಕ ಕೃಷಿಯ ಬಗ್ಗೆ ಅಧ್ಯಯನ ಮಾಡುತ್ತಾನೆ. ಕೃಷಿ, ಭಾರತೀಯ ಸಂಪ್ರದಾಯ, ಪರಂಪರೆ ಎಂಬ ಸಿದ್ಧಾಂತದ ಅನುಯಾಯಿಯೂ ಆಗಿದ್ದ. ಕೃಷಿಯಲ್ಲಿ ತೊಡಗಿಸಿಕೊಂಡ ಕೆಲ ಸಮಯದ ಬಳಿಕ ವೈವಾಹಿಕ ಬದುಕಿಗೆ ಕಾಲಿಡುತ್ತಿದ್ದಾನೆ. ಎಷ್ಟೇ ವಿದ್ಯಾವಂತನಾದರೂ ಕೃಷಿಯಲ್ಲಿ ಸಾಕಷ್ಟು ಆದಾಯ ಇದ್ದರೂ ಕೃಷಿಕನ ಕಡೆಗೆ ಮನಸ್ಸು ಮಾಡದ ಸಮಾಜ ಇದು. ಈ ಎಲ್ಲಾ ಸವಾಲುಗಳ ನಡುವೆ ಈತನಿಗೆ ಮಂಗಳೂರು ನಗರದಲ್ಲಿರುವ ಯುವತಿಯ ಜೊತೆ ವಿವಾಹ.

ಪ್ರವಾಹದ ವಿರುದ್ಧದ ಆಯ್ಕೆ ಇಬ್ಬರದೂ. ಎಲ್ಲರೂ ವಿದ್ಯಾವಂತರಾಗಿ ನಗರಕ್ಕೆ ತೆರಳಿದರೆ, ಸುಬ್ರಹ್ಮಣ್ಯ ಪ್ರಸಾದ ಕಲಿತು ಕೃಷಿಗೆ ಬಂದ. ಹಳ್ಳಿಯಿಂದ ನಗರದ ಪ್ಲಾಟ್‌ ಗೆ ತೆರಳುವ ಹುಡುಗಿಯರು ಹೆಚ್ಚಾಗಿರುವಾಗ ಪ್ಲಾಟ್‌ ನಿಂದ ಹಳ್ಳಿಗೆ ಬಂದ ಯುವತಿ. ಇಬ್ಬರ ಆಯ್ಕೆಯೂ ಪ್ರವಾಹದ ವಿರುದ್ಧ. ಸವಾಲುಗಳ ನಡುವೆಯೂ ಹಳ್ಳಿಯಲ್ಲಿ ಬದುಕು ಕಟ್ಟಿಕೊಳ್ಳುವುದು ಸುಲಭ. ಸುಬ್ರಹ್ಮಣ್ಯ ಪ್ರಸಾದ ಈ ಸವಾಲನ್ನು ಮೊದಲೇ ತೆಗೆದುಕೊಂಡಿದ್ದಾನೆ. ಅದು ಅವನಿಗೆ ಅನಿವಾರ್ಯವೂ ಆಗಿರಬಹುದು. ಆದರೆ ಎಂಟೆಕ್‌ ಪದವಿಯಾಗಿ ಹಳ್ಳಿಯಲ್ಲಿ ನಿಲ್ಲುವ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳುವುದು ಸುಲಭ ಅಲ್ಲ. ಅವನ ಹುಡುಗಿಯೂ ಅಂತಹದ್ದೇ ನಿರ್ಧಾರ ತೆಗೆದುಕೊಂಡಿರಬೇಕು.

ಈಗ ಸಮಾಜ ಮಾಡಬೇಕಾದ್ದು ಇಷ್ಟೇ, ಅವರ ಜೊತೆ ಮಾತನಾಡುವಾಗ, ನೀನೇನು ಹಳ್ಳಿಗೆ ಬಂದೆ , ನೀನೇನು ಹಳ್ಳಿಯಲ್ಲಿ ಉಳಿದೆ, ಎಂತ ಕೆಲಸ , ಕಷ್ಟ ಆಗಲಿಕ್ಕಿಲ್ಲವಾ ? ಹೀಗೇ ಹತ್ತಾರು ಪ್ರಶ್ನೆ ಕೇಳಿ ಅವರನ್ನು ಮಾನಸಿಕವಾಗಿ ಸೋಲಿಸಬೇಡಿ. ಅವರ ಇಬ್ಬರ ಆಯ್ಕೆ ಸರಿಯಾಗಿದೆ. ನಾವೆಲ್ಲಾ ಇದನ್ನು ಆದರ್ಶ ಎಂದು ಹೇಳಬೇಕಾಗಿಲ್ಲ, ಮಾದರಿ ಅಂತ ಹೇಳೋಣ ಅಷ್ಟೇ. ಆದರ್ಶ ಏಕೆ ಅಲ್ಲ ಅಂದರೆ, ಎಲ್ಲರೂ ಈ ರೀತಿ ಮಾಡಲಾರರು. ಮಾದರಿ ಏಕೆಂದರೆ ಸವಾಲನ್ನು ಮೆಟ್ಟಿ ಅವರು ಕೈಗೊಂಡ ನಿರ್ಧಾರ. ಗ್ರಾಮೀಣ ಭಾರತದಲ್ಲಿ ಇಂತಹ ಯುವ ಮನಸ್ಸುಗಳು ಹೆಚ್ಚಾಗಲಿ ಎನ್ನುವ ಆಶಯ ವ್ಯಕ್ತಪಡಿಸೋಣ. ಹೀಗೆ ವಿವರಿಸಿದ್ದಾರೆ ಲೇಖಕ ಮಹೇಶ್‌ ಪುಚ್ಚಪ್ಪಾಡಿ.

ಇದನ್ನೂ ಓದಿ:ಗೋ ಸಂಪತ್ತು: ದುಡಿಮೆಗೆ ಮತ್ತು ಉತ್ಕೃಷ್ಟ ಹಾಲಿಗೆ ಹೆಸರಾದ ಹಳ್ಳಿಕಾರ್‌

Exit mobile version