ಮಂಗಳೂರು: ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಅನಿಲ್ ಜಾನ್ ಸಿಕ್ವೇರಾ (Anil John Sequeira) ಎಂಬುವವರು 25ನೇ ವಯಸ್ಸಿಗೆ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ರಾಜ್ಯದ ಅತ್ಯಂತ ಕಿರಿಯ ನ್ಯಾಯಾಧೀಶ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಕಿರಿಯ ಸಿವಿಲ್ ನ್ಯಾಯಧೀಶರಾಗಿ ಸೇವೆ ಸಲ್ಲಿಸಲಿರುವ ಅನಿಲ್ ಜಾನ್ ಸಿಕ್ವೇರಾ, ಪ್ರಿಲಿಮ್ಸ್, ಮೇನ್ಸ್ ಹಾಗೂ ಸಂದರ್ಶನ ಹೀಗೆ 2023ರ ಕರ್ನಾಟಕ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕರ್ನಾಟಕದ ನ್ಯಾಯಾಂಗ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ.
ಇದನ್ನೂ ಓದಿ: Kodagu News : ಮಸೀದಿಯಲ್ಲಿ ನಮಾಜ್ ಮಾಡಿದ ಮಹಿಳೆಗೆ ಗ್ರಾಮದಿಂದಲೇ ಬಹಿಷ್ಕಾರ; ಪತಿ ಅಂತ್ಯಕ್ರಿಯೆಗೂ ನಕಾರ
ಕೃಷಿಕರಾದ ಎವರೆಸ್ಟ್ ಸಿಕ್ವೇರಾ ಮತ್ತು ಐವಿ ಸಿಕ್ವೇರಾ ದಂಪತಿಯ ಮೂವರು ಮಕ್ಕಳಲ್ಲಿ ಕಿರಿಯ ಮಗನಾಗಿರುವ ಅನಿಲ್ ಚಿಕ್ಕಂದಿನಿಂದಲೂ ಪ್ರತಿಭಾನ್ವಿತ ವಿದ್ಯಾರ್ಥಿ ಆಗಿದ್ದರು. ಪುತ್ತೂರು ಸಂತ ಫಿಲೋಮಿನಾ ಕಾಲೇಜು ಮತ್ತು ಎಸ್‌ಡಿಎಂ ಕಾನೂನು ಕಾಲೇಜಿನ ಹಳೇಯ ವಿದ್ಯಾರ್ಥಿ ಆಗಿದ್ದಾರೆ. ತಮ್ಮ 25ನೇ ವಯಸ್ಸಿನಲ್ಲಿ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಕರ್ನಾಟಕದ ಅತ್ಯಂತ ಕಿರಿಯ ನ್ಯಾಯಾಧೀಶರಾಗಿದ್ದಾರೆ.
ಅನಿಲ್ ಜಾನ್ ಸಿಕ್ವೇರಾರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಎಂದು ಮಂಗಳೂರಿನ ನ್ಯಾಯವಾದಿ ದೀಪಕ್ ಡಿಸೋಜ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ದೀಪಕ್ ಡಿಸೋಜರ ಬಳಿಯೇ ಮಂಗಳೂರಿನಲ್ಲಿ ಅನಿಲ್ ತರಬೇತಿ ಪಡೆಯುತ್ತಿದ್ದರು. ಮಂಗಳೂರು ಬಾರ್ ಅಸೋಸಿಯೇಶನ್‌ನ ಸದಸ್ಯರೂ ಆಗಿದ್ದ ಅನಿಲ್ ಶಾಲಾ ದಿನದಲ್ಲೇ ಉತ್ತಮ ನಾಯಕತ್ವ ಗುಣಗಳನ್ನು ಹೊಂದಿದ್ದರು.
ಪ್ರೌಢ ಶಿಕ್ಷಣದಲ್ಲಿ ಇದ್ದಾಗಲೇ ಪೀಪಲ್ ಲೀಡರ್ ಆಗಿದ್ದರು. ಕಾಲೇಜಿನಲ್ಲೂ ವಿದ್ಯಾರ್ಥಿ ನಾಯಕರಾಗಿ ಸೇವೆ ಸಲ್ಲಿಸಿದ್ದ ಅನಿಲ್ ವಿವಿಧ ಸಮಿತಿಗಳ ಪ್ರಮುಖ ಸದಸ್ಯರಾಗಿ ಮಂಗಳೂರಿನಲ್ಲಿ ಗುರುತಿಸಿಕೊಂಡಿದ್ದರು. ಇಷ್ಟೇ ಅಲ್ಲದೇ 2022ರ ಜುಲೈ 25ರಂದು ಮಂಗಳೂರಿನ ಧರ್ಮಪ್ರಾಂತ್ಯದ ಇಂಡಿಯನ್ ಕ್ಯಾಥೋಲಿಕ್ ಯೂತ್ ಮೂವ್‌ಮೆಂಟ್ ( ICMY) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ