Site icon Vistara News

ಅಷ್ಟಮಂಗಲ ಪ್ರಶ್ನೆಯಲ್ಲಿ ಹೇಳಿದಂತೇ ನಡೆದ ಪವಾಡ! ನೆಲ ಅಗೆದಾಗ ಶಿವಲಿಂಗ ಪತ್ತೆ

ashtamangala prashna

ಮಂಗಳೂರು: ʻಅಷ್ಟಮಂಗಲ ಪ್ರಶ್ನೆʼಯಲ್ಲಿ ಹೇಳಿದಂತೆಯೇ ಆದ ಪವಾಡಸದೃಶ ಘಟನೆಯೊಂದು ನಡೆದಿದೆ. ದೈವಜ್ಞರು ಸೂಚಿಸಿದ ಕಡೆ ನೆಲ ಅಗೆದಾಗ ಪುರಾತನ ಕಾಲದ ಶಿವಲಿಂಗವೊಂದು ಪತ್ತೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಉಜಿರೆ ಬಳಿಯ ಪೆರ್ಲದಲ್ಲಿ ಈ ಘಟನೆ ನಡೆದಿದೆ. ಗ್ರಾಮಸ್ಥರಿಂದ ಪುರಾತನ ಶ್ರೀ ಲಕ್ಷ್ಮಿ ಜನಾರ್ದನ ದೇವಸ್ಥಾನದ ನವೀಕರಣಕ್ಕಾಗಿ ಅಷ್ಟಮಂಗಲ ಪ್ರಶ್ನೆ ಇಡಲಾಗಿತ್ತು. ದೈವಜ್ಞರಾದ ನೆಲ್ಯಾಡಿ ಶ್ರೀಧರ ಗೋರೆ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನೆ ಕಳೆದ ಎರಡು ದಿನಗಳಿಂದ ನಡೆಯುತ್ತಿತ್ತು. ಈ ವೇಳೆ ಅಷ್ಟಮಂಗಲ ಪ್ರಶ್ನೆಯಲ್ಲಿ ಇದು ಶಿವಲಿಂಗ ಇರುವ ಜಾಗ, ಈ ಪರಿಸರದಲ್ಲಿ ಶಿವನ ಸಾನಿಧ್ಯ ಇದೆ ಎಂದು ದೈವಜ್ಞರು ಸೂಚನೆ ನೀಡಿದ್ದರು. ಅವರು ಸೂಚಿಸಿದ ಜಾಗದಲ್ಲಿ ಅಗೆದಾಗ ಮಣ್ಣಿನ ಅಡಿ ಪುರಾತನ ಶಿವಲಿಂಗ ಪತ್ತೆ‌ಯಾಗಿದೆ.

ಎರಡರಿಂದ ಮೂರು ಅಡಿ ಉದ್ದದ, ಪಾಣಿಪೀಠ ಹೊಂದಿರುವ ಶಿವಲಿಂಗ ಇದಾಗಿದ್ದು, ಸುಮಾರು 400-500 ವರ್ಷ ಹಳೆಯದು ಎಂದು ಭಾವಿಸಲಾಗಿದೆ. ಶಿವಲಿಂಗ ಪ್ರತಿಷ್ಠಾಪನೆ ಆಗಬೇಕು ಎಂದು ಪ್ರಶ್ನೆಯಲ್ಲಿ ಕಂಡುಬಂದಿದೆ.

ದೇವಸ್ಥಾನಗಳು ಹಾಗೂ ಧಾರ್ಮಿಕ ತಾಣಗಳ ಪುನರುಜ್ಜೀವನದ ಕುರಿತಾದ ಸಂದಿಗ್ಧಗಳನ್ನು ಪರಿಹರಿಸಲು ದೈವಜ್ಞರ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನೆಯನ್ನು ನೆರವೇರಿಸಲಾಗುತ್ತದೆ.

Exit mobile version