ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಸರಕಾರಿ ಕಾಲೇಜಿನಲ್ಲಿ (Kadaba Government College) ಮೂವರು ಹೆಣ್ಮಕ್ಕಳ ಮೇಲೆ ದುಷ್ಟನೊಬ್ಬ ಆ್ಯಸಿಡ್ (Acid attack) ದಾಳಿ ಮಾಡಿದ ಘಟನೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ ಮಂಜುಳಾ (BJP Leader C Manjula) ಅವರು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರ ಮೇಲೆ ದಾಳಿ ಮಾಡಿದ್ದಾರೆ.
ಈ ವಿದ್ಯಾರ್ಥಿನಿಯರು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲೆಂದು ಬೆಳಗ್ಗೆ ಕಾಲೇಜಿಗೆ ಬಂದು ಸಿದ್ಧತೆ ನಡೆಸುತ್ತಿದ್ದರು. ಧ್ವಜ ಕಟ್ಟೆಯ ಮೇಲೆ ಕುಳಿತು ಓದಿಕೊಳ್ಳುತ್ತಿದ್ದರು. ಆಗ ಅಲ್ಲಿಗೆ ಬಂದ ಅಬೀನ್ ಎಂಬಾತ ಬಂದು ದಾಳಿ ಮಾಡಿದ್ದಾನೆ. ಕೇರಳದ ಮಲಪುರಂ ಜಿಲ್ಲೆಯ ನೆಲಂಬೂರು ನಿವಾಸಿ ಅಬೀನ್ ತಲೆಗೆ ಹ್ಯಾಟ್ ಮತ್ತು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದು ಅಟ್ಯಾಕ್ ಮಾಡಿದ್ದಾನೆ. ವಿದ್ಯಾರ್ಥಿನಿಯರು ಕಿರುಚಿಕೊಂಡು ಅಲ್ಲಿಂದ ಓಡಿದ್ದು, ಆರೋಪಿಯನ್ನು ಅಕ್ಕಪಕ್ಕದಲ್ಲಿದ್ದ ಇತರರು ಹಿಡಿದು ಹಾಕಿದ್ದಾರೆ. ವಿದ್ಯಾರ್ಥಿನಿಯರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ಮುಬೀನ್ ಅಲಿನಾಳನ್ನು ಟಾರ್ಗೆಟ್ ಮಾಡಿ ಈ ದಾಳಿ ಮಾಡಿದ್ದಾನೆ ಎನ್ನಲಾಗಿದೆ. ಆಕೆಯ ಮೇಲೆ ದಾಳಿ ಮಾಡಿದಾಗ ಅದು ಇತರ ಇಬ್ಬರು ವಿದ್ಯಾರ್ಥಿನಿಯರಿಗೆ ಸಿಡಿದು ಗಾಯಗಳಾಗಿವೆ. ಮುಬೀನ್ ಅಲೀನಾಗಳನ್ನು ಪ್ರೀತಿಸುತ್ತಿದ್ದು, ಆಕೆ ಆತನ ಪ್ರೇಮವನ್ನು ನಿರಾಕರಿಸಿದ್ದಳು ಎನ್ನಲಾಗಿದೆ. ಈ ಸಿಟ್ಟಿನಿಂದ ಆತ ಪರೀಕ್ಷೆಯ ವೇಳೆ ನೋಡಿಕೊಂಡು ದಾಳಿ ಮಾಡಿದ್ದಾನೆ ಎನ್ನಲಾಗಿದೆ.
ಸಿಡಿದೆದ್ದ ಬಿಜೆಪಿ ನಾಯಕಿ ಮಂಜುಳಾ
ಮೂವರು ಕಾಲೇಜು ವಿದ್ಯಾರ್ಥಿನಿಯರ ಮೇಲೆ ನಡೆದ ಈ ಆಸಿಡ್ ದಾಳಿಯನ್ನು ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ ಮಂಜುಳಾ ಅವರು ತೀವ್ರವಾಗಿ ಖಂಡಿಸಿದ್ದಾರೆ. ಜತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಮೇಲೂ ಅಟ್ಯಾಕ್ ಮಾಡಿದ್ದಾರೆ.
ʻʻಮಂಗಳೂರಿನಲ್ಲಿ ಯುವತಿಯರ ಮೇಲೆ ಆಸಿಡ್ ದಾಳಿಯಾಗಿದೆ. ಇದು ಆಕೆಯನ್ನು ಶಾಶ್ವತವಾಗಿ ಮುಗಿಸುವ ಕೆಲಸ. ಇಂಥ ಘಟನೆ ನಡೆದಿದೆ ಎಂದರೆ ಅದಕ್ಕೆ ಹೊಣೆ ಹೊತ್ತು ಗೃಹ ಸಚಿವರು ಆ ಸ್ಥಾನದಲ್ಲಿ ಉಳಿಯಬಾರದು. ರಾಜೀನಾಮೆ ನೀಡಬೇಕುʼʼʼ ಎಂದು ಅವರು ಒತ್ತಾಯಿಸಿದರು.
ʻʻವಿಧಾನಸೌಧದಲ್ಲೇ ಪಾಕಿಸ್ತಾನ ಪರ ಘೋಷಣೆ ಕೂಗಿದರೂ ಅದನ್ನು ಲಘುವಾಗಿ ಪರಿಗಣಿಸಿದ್ದಾರೆ. ತಿಪ್ಪೆ ಸಾರಿಸುವ ಕೆಲಸ ಮಾಡಲಾಗಿದೆ. ಪಿಎಫ್‌ಐ ಸಂಘಟನೆಗಳ ಮೇಲಿನ 153 ಕೇಸ್ ವಾಪಸ್ ಪಡೆದಿದ್ದಾರೆ. ಅವರ ಬೆಳವಣಿಗೆಗೆ ಇಲ್ಲಿ ರೆಡ್ ಕಾರ್ಪೆಟ್ ಹಾಸಲಾಗಿದೆ. ರಾಮೇಶ್ವರ ಕೆಫೆಗೆ ಹೋದ ಮಹಿಳೆಯರಿಗೆ ಮಾರಣಾಂತಿಕ ಗಾಯವಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ತಿಪ್ಪೆ ಸಾರಿಸುವ ಕೆಲಸ ಮಾಡಿದ್ದಾರೆ. ಈ ಕಾಂಗ್ರೆಸ್ ಸರ್ಕಾರ ಭಂಡರು, ಪುಂಡ ಪೋಕರಿಗೆ ಅಧಿಕಾರ ಕೊಟ್ಟಿದೆʼʼ ಎಂದು ಹೇಳಿರುವ ಮಂಜುಳಾ ಅವರು, ಈ ಪ್ರಕರಣಗಳನ್ನು ನಿಭಾಯಿಸಲು ವಿಫಲರಾಗಿರುವ ಗೃಹ ಸಚಿವರು ರಾಜೀನಾಮೆ ಕೊಟ್ಟು ಹೊರಗೆ ಹೋಗಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ : Acid attack : ಕಡಬದಲ್ಲಿ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ!
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಏನು ಮಾಡುತ್ತಿದ್ದಾರೆ?
ʻʻಕಡಬದಲ್ಲಿ ಮೂವರು ಯುವತಿಯ ಮೇಲೆ ಆಸಿಡ್ ಹಾಕಲಾಗಿದೆ. ಕೇರಳದಿಂದ ಬಂದವನು ದಾಳಿ ಮಾಡಿದ್ದಾನೆ ಎನ್ನುವ ಮಾಹಿತಿ ಇದೆ. ಕೇರಳದವರಿಗೆ ಇಲ್ಲಿ ಯಾಕೆ ರೆಡ್ ಕಾರ್ಪೆಟ್ ಹಾಸಲಾಗುತ್ತಿದೆ. ಮಹಿಳಾ ಆಯೋಗ ಸ್ಥಳಕ್ಕೆ ಹೋಗಿ ವಿಚಾರಿಸಬೇಕು. ಅವರಿಗೆ ಆ ಎಲ್ಲಾ ಅಧಿಕಾರ ಇದೆʼʼ ಎಂದು ಹೇಳಿದ ಮಂಜುಳಾ ಅವರು, ʻʻಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಏನು ಮಾಡ್ತಿದ್ದಾರೆ.?ʼʼ ಎಂದು ಕೇಳಿದರು.
ʻʻನಿಮಗೆ ಅಲ್ಲಿ ಕೆಲಸ ಮಾಡಲು ಆಗಲ್ಲ ಅಂದ್ರೆ, ಬಿಟ್ಟು ಹೋಗಿ. ನಿಮ್ಮ ಪುರುಷ ಸಚಿವರು ಕೆಲಸ ಮಾಡಲು ಬಿಡದಿದ್ರೆ ಹೊರಗೆ ಬನ್ನಿʼ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಮೇಲೆ ದಾಳಿ ಮಾಡಿದ ಅವರು, ಮಹಿಳೆಯರು ಈ ಸರ್ಕಾರದ ವಿರುದ್ಧ ಜಾಗೃತವಾಗಬೇಕು. ಅದೊಂದೇ ಪರಿಹಾರ ಎಂದರು.