ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುಣಚ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿದ್ದ (Bridge collapse) ಸೇತುವೆ ಕುಸಿದಿದೆ. ಪರಿಣಾಮ 7 ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ.
ಪುಣಚ ಗ್ರಾಮದ ಬರೆಂಜ-ಕುರುಡಕಟ್ಟೆ ಸಂಪರ್ಕ ರಸ್ತೆಯ ಮಲ್ಲಿಪ್ಪಾಡಿಯಲ್ಲಿ ಸೇತುವೆಯ ಕೊನೆಯ ಹಂತದ ಕಾರ್ಯವಾಗಿ ಕಾಂಕ್ರೀಟ್ ಮಿಕ್ಸ್ ಹಾಕುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಕಾಂಕ್ರೀಟ್ ಮಿಕ್ಸ್ ಹಾಕುವಾಗ ತಳಭಾಗದ ರಾಡ್ ಜಾರಿ ಮೇಲ್ಭಾಗದ ಸಂಪೂರ್ಣ ಕಾಂಕ್ರೀಟ್ ಸ್ಲ್ಯಾಬ್ ಕುಸಿದಿದೆ. ಪರಿಣಾಮ ಸೇತುವೆ ಸಾಮಾಗ್ರಿಯ ಮಧ್ಯೆ ಓರ್ವ ಕಾರ್ಮಿಕ ಸಿಲುಕಿ ಗಂಭೀರ ಗಾಯಗೊಂಡಿದ್ದಾರೆ. ಉಳಿದ ಆರು ಮಂದಿಯನ್ನು ಸ್ಥಳೀಯರು ರಕ್ಷಿಸಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಇದನ್ನೂ ಓದಿ: Accident Case : ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಬಿದ್ದ; ಎರಡು ಹೋಳಾಯ್ತು ತಲೆ ಬುರುಡೆ
ಶಾರ್ಟ್ ಸಕ್ಯೂರ್ಟ್‌ನಿಂದ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ; 4 ವರ್ಷದ ಮಗು ಉಸಿರುಗಟ್ಟಿ ಸಾವು
ಬೆಂಗಳೂರು: ಅಪಾರ್ಟ್‌ಮೆಂಟ್‌ವೊಂದರಲ್ಲಿ ಶಾರ್ಟ್ ಸಕ್ಯೂರ್ಟ್‌ನಿಂದ ಬೆಂಕಿ ಹಾಗೂ ದಟ್ಟ ಹೊಗೆ ಆವರಿಸಿದ್ದರಿಂದ 4 ವರ್ಷದ ಮಗುವೊಂದು ಉಸಿರುಗಟ್ಟಿ (Fire Accident) ಮೃತಪಟ್ಟಿದೆ. ಈ ಹೃದಯವಿದ್ರಾವಕ ಘಟನೆ ಬೆಂಗಳೂರಿನ ಆರ್.ಟಿ.ನಗರದ ಪೊಲೀಸ್ ಠಾಣಾ ವ್ಯಾಪ್ತಿಯ ಸುಲ್ತಾನ್ ಪಾಳ್ಯದಲ್ಲಿ ಭಾನುವಾರ (ಏ.16) ಸಂಜೆ ಸಂಭವಿಸಿದೆ. ಅನೂಪ್ (4 ವರ್ಷ) ಮೃತ ದುರ್ದೈವಿ.
ಸುಲ್ತಾನ್ ಪಾಳ್ಯ ಬಳಿಯಿರುವ ವುಡ್ ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಲ್ಲಿರುವ ಮನೆಯೊಂದರಲ್ಲಿ ಶಾರ್ಟ್ ಸಕ್ಯೂರ್ಟ್ ಆಗಿದೆ. ಕುರಾನ್ ಖಂಡಕ್, ಲಕ್ಷ್ಮಿ ದಂಪತಿಯ 4 ವರ್ಷದ ಗಂಡು ಮಗು ಅನೂಪ್ ಮೃತಪಟ್ಟಿದ್ದಾನೆ. ಕುರಾನ್ ಖಂಡಕ್, ಲಕ್ಷ್ಮಿ ದಂಪತಿ ನೇಪಾಳ ಮೂಲದವರಾಗಿದ್ದು, ಕೆಲ ವರ್ಷಗಳ ಹಿಂದೆ ಬೆಂಗಳೂರಿನಲ್ಲೇ ವಾಸವಾಗಿದ್ದರು. ಇನ್ನೂ ಇದೇ ವುಡ್ ಅಪಾರ್ಟ್‌ಮೆಂಟ್‌ನಲ್ಲಿ ಮಗುವಿನ ತಂದೆ ಕುರಾನ್ ಖಂಡಕ್ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದರೆ, ತಾಯಿ ಲಕ್ಷ್ಮಿ ಹೌಸ್ ಕೀಪಿಂಗ್ ಆಗಿ ಕೆಲಸ ಮಾಡುತ್ತಿದ್ದರು.
ದಂಪತಿ ವಾಸ್ತವ್ಯಕ್ಕಾಗಿ ನಾಲ್ಕನೇ ಮಹಡಿಯಲ್ಲಿರುವ ಸಣ್ಣ ಕೊಠಡಿಯಲ್ಲಿ ಮನೆ ನೀಡಲಾಗಿತ್ತು. ಗಂಡ-ಹೆಂಡತಿ ಕೆಲಸ ಮಾಡುವುದರಿಂದ ಮಗುವಿನ ಲಾಲನೆ-ಪಾಲನೆ ಕಷ್ಟವಾಗಿತ್ತು. ಹೀಗಾಗಿ ಪ್ರತಿದಿನ ಮಧ್ಯಾಹ್ನ ಮಗುವನ್ನು ಮಲಗಿಸಿ ಡೋರ್ ಲಾಕ್ ಹಾಕಿಕೊಂಡು ತಮ್ಮ ಹೊರಗಿನ ಕೆಲಸ ಮಾಡುತ್ತಿದ್ದರು.
ನಿನ್ನೆ ಭಾನುವಾರ ಸಹ ಮಗು ಮಲಗಿಸಿ ಫ್ಯಾನ್ ಹಾಕಿ ಡೋರ್ ಲಾಕ್ ಮಾಡಿಕೊಂಡು ಬಂದಿದ್ದರು. ಕೆಲಸ ಮುಗಿಸಿಕೊಂಡು ಪೋಷಕರು ಮನೆಗೆ ಹೋದಾಗ ದುರಂತ ಸಂಭವಿಸಿದೆ. ಮಗು ಮಲಗಿದ್ದಾಗ ಸಂಜೆ ವೇಳೆ ಎಲೆಕ್ಟ್ರಿಕಲ್ ಶಾರ್ಟ್ ಸಕ್ಯೂರ್ಟ್ ಕಾಣಿಸಿಕೊಂಡು ದಟ್ಟ ಹೊಗೆ ಕಾಣಿಸಿಕೊಂಡಿದೆ.
ಇತ್ತ ಎಂದಿನಂತೆ ಕೆಲಸ ಮುಗಿಸಿಕೊಂಡು ಬಂದಾಗ ಮನೆಯಿಂದ ಹೊಗೆ ಬರುತ್ತಿರುವುದನ್ನು ಕಂಡು ಪೋಷಕರು ಕೂಡಲೇ ಅಗ್ನಿಶಾಮಕದಳಕ್ಕೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಸಿಬ್ಬಂದಿ ಅಗ್ನಿ ನಂದಿಸಿದರೂ ಅಷ್ಟೊತ್ತಿಗಾಗಲೇ ಉಸಿರುಗಟ್ಟಿ ಮಗುವಿನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಆರ್ ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರಂತ ನಡೆದಿದೆ.
ಯಾದಗಿರಿಯಲ್ಲಿ ಬೆಂಕಿಗೆ ತುತ್ತಾದ ಅಂಗಡಿ
ಯಾದಗಿರಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಂಗಡಿಯೊಂದು ಹೊತ್ತಿ ಉರಿದಿದೆ. ಯಾದಗಿರಿ ನಗರದ ಹೊಸಳ್ಳಿ ಕ್ರಾಸ್ ಬಳಿ ಇರುವ ನಿಸ್ಸಿ ಪ್ಲೈವುಡ್ ಶಾಪ್ ಧಗಧಗನೇ ಹೊತ್ತಿ ಉರಿದಿದ್ದು, ಬೆಂಕಿ ಅವಘಡದಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.
ಅಂದಾಜು 25 ಲಕ್ಷ ಮೌಲ್ಯದ ಮಷೀನ್‌ಗಳು ಬೆಂಕಿಗಾಹುತಿಯಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ