ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಅವರ ಮಂಗಳೂರು ಭೇಟಿ ರದ್ದಾಗಿದೆ. ಅವರು ಇಂದು (ಜುಲೈ 21) ಜಿಲ್ಲೆಯ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಪ್ರವಾಸ ರದ್ದಾಗಿದೆ ಎಂದು ಮೂಲಗಳು ತಿಳಿಸಿವೆ (Karnataka Rain).
ಬೆಂಗಳೂರು ಏರ್‌ಪೋರ್ಟ್ ರೋಡ್ ಬ್ಲಾಕ್ ಆದ ಹಿನ್ನೆಲೆಯಲ್ಲಿ ದಿನೇಶ್ ಗುಂಡೂರಾವ್ ಅವರ ಜಿಲ್ಲಾ ಭೇಟಿ ರದ್ದುಗೊಳಿಸಲಾಗಿದೆ. ಅವರು ಇಂದು ಅದ್ಯಪಾಡಿ, ಕೆತ್ತಿಕಲ್, ಪಾಣೆಮಂಗಳೂರು ಪ್ರದೇಶಗಳಿಗೆ ಭೇಟಿ ನೀಡಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು ಪರಿಶೀಲನೆ ನಡೆಸಬೇಕಿತ್ತು. ಮಳೆ ಹಾನಿ, ಪರಿಹಾರ ಕಾರ್ಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಿಗದಿಯಾಗಿತ್ತು. ಇದಕ್ಕಾಗಿ ಸಿದ್ಧತೆಯನ್ನೂ ಕೈಗೊಳ್ಳಲಾಗಿತ್ತು. ಆದರೆ ಇದೀಗ ಡಿಢೀರ್ ಆಗಿ ಭೇಟಿ ರದ್ದಾಗಿದೆ.
ಉಡುಪಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ
ಉಡುಪಿ: ಜಿಲ್ಲೆಗೆ ಕೊನೆಗೂ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಗಮಿಸಿದ್ದಾರೆ. ಎರಡು ವಾರಗಳಿಂದ ಭಾರೀ ಮಳೆಗೆ ತುತ್ತಾಗಿದ್ದ ಉಡುಪಿ ಜಿಲ್ಲೆಯಲ್ಲಿ ಸದ್ಯ ಮಳೆಗೆ ಕೊಂಚ ವಿರಾಮ ಸಿಕ್ಕಿದೆ. ಎರಡು ವಾರಗಳಿಂದ ಭಾರಿ ಮಳೆಗೆ ತುತ್ತಾಗಿದ್ದ ಜಿಲ್ಲೆಗೆ ಸಚಿವೆ ಆಗಮಿಸದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತವಾಗಿತ್ತು.
ನೆರೆ, ಪ್ರವಾಹ ಕಡಿಮೆ ಆಗುತ್ತಲೇ ಉಡುಪಿಗೆ ಸಚಿವೆ ಆಗಮಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಟ್ಟುನಿಟ್ಟಿನ ಸೂಚನೆ ಬೆನ್ನಲ್ಲೇ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿದ್ದಾರೆ. ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಉಡುಪಿ ನಗರ ಸೇರಿದಂತೆ ಹಲವೆಡೆ ಹಾನಿಯಾಗಿವೆ. ಬೈಂದೂರು ತಾಲೂಕಿನಲ್ಲಿ ಸಾವಿರಕ್ಕೂ ಅಧಿಕ ಮರಗಳು ಧರಶಾಹಿಯಾಗಿವೆ. ನದಿಗಳು ಅಪಾಯ ಮಟ್ಟವನ್ನು ಮೀರಿ ಕೃತಕ ನೆರೆ ಸೃಷ್ಟಿಯಾಗಿದೆ. ಕಡಲ್ಕೊರೆತವೂ ತೀವ್ರವಾಗಿದೆ. ಇದರಿಂದ ನೂರಾರು ಮಂದಿ ತೊಂದರೆಗೆ ಒಳಗಾಗಿದ್ದಾರೆ.
ಬೈಂದೂರು ಭಾಗದಲ್ಲಿ ಸೇತುವೆಗಳಿಲ್ಲದೇ ಹಲವು ರೀತಿಯ ಸಂಕಷ್ಟ ಎದುರಾಗಿದೆ. ಪಡುಬಿದ್ರಿ, ಮಲ್ಪೆ ಕಡಲ್ಕೊರೆತಕ್ಕೆ ಸಿಕ್ಕಿ ಅಪಾರ ಪ್ರಮಾಣದಲ್ಲಿ ಹಾನಿಗೊಳಗಾಗಿದೆ. ಇಷ್ಟಾಗಿಯೂ ಉಸ್ತುವಾರಿ ಸಚಿವೆ ಭೇಟಿಯಾಗದಿರುವ ಬಗ್ಗೆ ಭಾರಿ ವಿರೋಧ ಕೇಳಿ ಬಂದಿತ್ತು. ಇದೀಗ ಕೊನೆಗೂ ಇಂದು ಉಡುಪಿ ಜಿಲ್ಲೆಗೆ ಸಚಿವೆ ಆಗಮಿಸಿದ್ದಾರೆ.
ಕೃಷಿ ಭೂಮಿಗೆ ಹಾನಿ
ವಾರಗಳ ಕಾಲ ನಿರಂತರವಾಗಿ ಸುರಿದ ಭಾರಿ ಮಳೆ ಹಿನ್ನೆಲೆಯಲ್ಲಿ ಬ್ರಹ್ಮಾವರ ತಾಲೂಕಿನ ಕೃಷಿ ಭೂಮಿಗಳು ಜಲಾವೃತಗೊಂಡಿವೆ. ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿನ ಭತ್ತದ ಗದ್ದೆಗಳು ನೀರಿನಲ್ಲಿ ಕೊಳೆಯುತ್ತಿವೆ. ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಾರ್ಕಡ, ಪಾರಂಪಳ್ಳಿ, ಗುಂಡ್ಮಿ ಭಾಗದಲ್ಲಿ ನೆರೆ ಕಾಣಿಸಿಕೊಂಡಿದೆ. ಸದ್ಯ ಮಳೆ ಕಡಿಮೆಯಾಗಿರುವ ಹಿನ್ನಲೆಯಲ್ಲಿ ನೀರಿನ ಮಟ್ಟ ನಿಧಾನವಾಗಿ ಇಳಿಯುತ್ತಿರುವುದು ಸ್ಥಳೀಯರಿಗೆ ಸಮಾಧಾನ ತಂದಿತ್ತಿದೆ.
ಶಿರೂರು ಗುಡ್ಡಕುಸಿತ ಪ್ರಕರಣ; ಇಂದು ಮುಖ್ಯಮಂತ್ರಿ ಭೇಟಿ
ಕಾರವಾರ: ಅಂಕೋಲಾ ಶಿರೂರು ಗುಡ್ಡ ಕುಸಿದ ಜಾಗಕ್ಕೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಭೂ ಕುಸಿತದಿಂದ ದುರಂತ ಸಂಭವಿಸಿದ ಸ್ಥಳ ಪರಿಶೀಲನೆ ನಡೆಸಲಿರುವ ಸಿದ್ಧರಾಮಯ್ಯ, ಮೃತಪಟ್ಟ ಸಂತ್ರಸ್ತರ ಕುಟುಂಬಗಳನ್ನ ಭೇಟಿಯಾಗಲಿದ್ದಾರೆ. ಸದ್ಯ 6ನೇ ದಿನಕ್ಕೆ ಮಣ್ಣು ತೆರವು ಕಾರ್ಯ ಕಾಲಿಟ್ಟಿದೆ. ಮಳೆ ಕೊಂಚ ಕಡಿಮೆಯಿರುವ ಹಿನ್ನಲೆಯಲ್ಲಿ ಕಾರ್ಯಾಚರಣೆ ಭರದಿಂದ ಸಾಗಿದೆ. 6 ಹಿಟಾಚಿಗಳ ಮೂಲಕ ಮಣ್ಣು ತೆರವು ಕಾರ್ಯ ನಡೆಯುತ್ತಿದೆ. ಒಂದು ಬದಿ ರಸ್ತೆ ಮಣ್ಣು ತೆರವು ಕಾರ್ಯ ಬಹುತೇಕ ಪೂರ್ಣಗೊಂಡಿದೆ.
ಇದನ್ನೂ ಓದಿ: Karnataka Rain: ರಾಜ್ಯದ ವಿವಿಧೆಡೆ ಮುಂದುವರಿದ ಮಳೆಯ ಅಬ್ಬರ; ಮನೆ ಕುಸಿದು ಬಿದ್ದು ನಾಲ್ವರಿಗೆ ಗಾಯ