Site icon Vistara News

Jai Shri Ram : ಜೈ ಶ್ರೀರಾಮ್‌ ಅಂದವರಿಗೆ FIR, ರಾಮನ ಅವಹೇಳನ ಮಾಡಿದವ್ರಿಗೆ ಏನೂ ಇಲ್ಲ; ಇದೇನಾ ಕಾನೂನು?

Jai Shri Ram Sister Prabha MLA Bharath Shetty

ವಿಧಾನಸಭೆ: ಯಾರು ಜೈ ಶ್ರೀರಾಮ್‌ (Jai Shri Ram) ಎಂದು ಘೋಷಣೆ ಕೂಗಿದರೋ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಆದರೆ, ಯಾರು ಶ್ರೀರಾಮನ ಅವಹೇಳನ ಮಾಡಿದ್ದ ರೋ, ರಾಮ ದೇವರಲ್ಲ, ಬರೀ ಕಲ್ಲು ಎಂದಿದ್ದರೋ, ಯಾರು ಹಿಂದು ಧರ್ಮಕ್ಕೆ ಅಸ್ತಿತ್ವವೇ ಇಲ್ಲ ಎಂದಿದ್ದರೋ ಅವರ ವಿರುದ್ಧ ಯಾವ ಕ್ರಮವೂ ಇಲ್ಲ. ಇದುವೇನಾ ಕಾನೂನು?- ಹೀಗೆಂದು ಪ್ರಶ್ನೆ ಮಾಡಿದ್ದಾರೆ ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಭರತ್‌ ಶೆಟ್ಟಿ (BJP MLA Bharath Shetty).

ಮಂಗಳೂರಿನ ಸೈಂಟ್‌ ಜೆರೋಸಾ ಹೈಸ್ಕೂಲ್‌ನ ಶಿಕ್ಷಕಿ (Jerosa High School Mangalore) ಹಿಂದು ಧರ್ಮ, ದೇವರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿಯಾಗಿ (Insulting Hindu Dharma) ಮಾತನಾಡಿದ್ದು ಮತ್ತು ಅದರ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿ ಮಂಗಳೂರಿನ ಇಬ್ಬರು ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತ್‌ ಹಾಗೂ ಭರತ್‌ ಶೆಟ್ಟಿ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಪ್ರಕರಣ (FIR Against BJP MLAs) ರಾಜ್ಯ ವಿಧಾನಸಭೆಯಲ್ಲಿ (Budget Session 2024) ಪ್ರಸ್ತಾಪವಾಯಿತು. ಗುರುವಾರ ಸ್ಥಳದಲ್ಲೇ ಇಲ್ಲದ ತಮ್ಮಿಬ್ಬರ ಮೇಲೆ ಕೇಸು ದಾಖಲಿಸಲಾಗಿದೆ ಎಂದು ಶಾಸಕ ಭರತ್‌ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದರು. ಹಿಂದು ಧರ್ಮವನ್ನು ಅವಹೇಳನ ಮಾಡಿದ ಕ್ರಿಶ್ಚಿಯನ್‌ ಶಿಕ್ಷಕಿಯ ಮೇಲೆ ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

ಮಂಗಳೂರಿನ ಜೆರೋಸಾ ಶಾಲೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡುವ ವೇಳೆ ಶಿಕ್ಷಕಿ ಪ್ರಭಾ ಅವರು ಹಿಂದು ಧರ್ಮ ಅಸ್ತಿತ್ವದಲ್ಲೇ ಇಲ್ಲ, ಶ್ರೀರಾಮ ಬರೀ ಕಲ್ಲು ಎಂದೆಲ್ಲ ಮಾತನಾಡಿದ್ದರು ಎಂದು ಮಕ್ಕಳು ಮನೆಯಲ್ಲಿ ಹೇಳಿದ ಹಿನ್ನೆಲೆಯಲ್ಲಿ ಪೋಷಕರು ಪ್ರತಿಭಟನೆ ನಡೆಸಿದ್ದರು. ಅದಕ್ಕೆ ಹಿಂದು ಸಂಘಟನೆಗಳು ಬೆಂಬಲ ನೀಡಿದ್ದವು. ಕೊನೆಗೆ ಎಲ್ಲರ ಒತ್ತಡಕ್ಕೆ ಮಣಿದು ಶಿಕ್ಷಕಿಯನ್ನು ಅಮಾನತು ಮಾಡಲಾಗಿತ್ತು.

ಈ ನಡುವೆ, ಹಿಂದು ಸಂಘಟನೆಗಳು ಹಾಗೂ ಸ್ಥಳೀಯ ಶಾಸಕರು ಹಿಂದು-ಕ್ರಿಶ್ಚಿಯನ್ನರ ನಡುವೆ ಕೋಮು ದ್ವೇಷ ಸೃಷ್ಟಿಸಲು ಈ ಸಂಚು ರೂಪಿಸಿದ್ದಾರೆ, ಶಾಲೆಯ ಆವರಣದಲ್ಲಿ ಜನ ಸೇರಿ ಗಲಾಟೆ ಮಾಡಿಸಿದ್ದಾರೆ ಎಂದು ಕಾಂಗ್ರೆಸ್‌ ದೂರು ಸಲ್ಲಿಸಿತ್ತು. ಇದರಂತೆ ಹಿಂದೂ ಸಂಘಟನೆಗಳ ನಾಯಕರು ಹಾಗೂ ಇಬ್ಬರು ಶಾಸಕರ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಇದನ್ನು ಸದನದಲ್ಲಿ ಪ್ರಸ್ತಾಪಿಸಿದ ಭರತ್‌ ಶೆಟ್ಟಿ ಶ್ರೀರಾಮನ ಅವಹೇಳನವನ್ನು ವಿರೋಧಿಸಿದವರು, ಜೈಶ್ರೀರಾಮ್‌ ಘೋಷಣೆ ಕೂಗಿದವರು ಈಗ ಪೊಲೀಸರ ಕ್ರಮ ಎದುರಿಸಬೇಕಾಗಿದೆ. ಆದರೆ, ಮೂಲದಲ್ಲಿ ತಪ್ಪು ಮಾಡಿದ ಶಿಕ್ಷಕರಿಗೆ ಯಾವುದೇ ಶಿಕ್ಷೆ ಇಲ್ಲ ಎಂದರು.

Budget session 2024 : ಮಕ್ಕಳ ಮೇಲೆ ಎಫ್‌ಐಆರ್‌, ಶಿಕ್ಷಕಿ ಮೇಲೆ ಯಾವುದೇ ಕ್ರಮವಿಲ್ಲ!

ವಿಧಾನಸಭೆ ಅಧಿವೇಶನದಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಮಂಗಳೂರು ಉತ್ತರ ಶಾಸಕ ಭರತ್‌ ಶೆಟ್ಟಿ ಅವರು, ಶಿಕ್ಷಕಿ ಹಿಂದೂ ಮೂರ್ತಿಗಳು ಮತ್ತು ರಾಮನ ಬಗ್ಗೆ ಅವಹೇಳನ ಮಾಡಿ‌ ಪಾಠ ಮಾಡಿದ್ದಾರೆ. ಇದರ ವಿರುದ್ಧ ಮಕ್ಕಳು ಜೈ ಶ್ರೀರಾಮ್‌ ಎಂದು ಘೋಷಣೆ ಕೂಗಿದ್ದಾರೆ. ಇದೀಗ ಮಕ್ಕಳ‌ ಮೇಲೆ ಎಫ್ ಐಆರ್ ಹಾಕಿದ್ದಾರೆ. ಆದರೆ, ವಿವಾದದ ಕೇಂದ್ರ ಬಿಂದುವಾದ ಶಿಕ್ಷಕಿ ಮೇಲೆ ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ಹೇಳಿದರು.

ನಾನು ಆವತ್ತು ಶಾಲೆಯ ಪರಿಸರದಲ್ಲೇ ಇರಲಿಲ್ಲ. ಆದರೂ ನನ್ನ‌ ಮೇಲೆ ಎಫ್ ಐಆರ್ ಹಾಕಿದ್ದಾರೆ. ನನ್ನ‌ ಮೇಲೆ ಹೇಗೆ ಎಫ್ ಐಆರ್ ಹಾಕಿದರು ಎಂದು ಬಿಜೆಪಿ ಶಾಸಕ ಭರತ್ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು. ಅವರಿಗೆ ಬಿಜೆಪಿ ಶಾಸಕ ಅರವಿಂದ ಬೆಲ್ಲದ್‌ ಬೆಂಬಲ ನೀಡಿದರು. ಈ ನಡುವೆ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂ ರಾವ್‌ ಅವರು ಶಾಸಕರು ಕೋಮು ಪ್ರಚೋದನೆಯ ಕೆಲಸ ಮಾಡಿದ್ದಾರೆ ಎಂದೂ ಆರೋಪಿಸಿದರು.

ಇದನ್ನೂ ಓದಿ: ಕ್ರೈಸ್ತ ಶಿಕ್ಷಕಿಯಿಂದ ರಾಮನ ಅವಹೇಳನ ಕೇಸ್‌; ವಿವಾದ ನಿರ್ವಹಣೆಯಲ್ಲಿ ವಿಫಲವಾದ ಡಿಡಿಪಿಐ ವರ್ಗಾವಣೆ

ಜಾಮೀನು ಪಡೆಯಲ್ಲ, ಏನ್ಮಾಡ್ತಾರೆ ನೋಡೋಣ ಎಂದ ಭರತ್‌ ಶೆಟ್ಟಿ

ಈ ನಡುವೆ, ವಿಧಾನಸೌಧದ ಕೆಂಗಲ್‌ ಗೇಟ್‌ ಬಳಿ ಮಾತನಾಡಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಅವರು, ʻʻನನ್ನ ಮೇಲೆ ದುರುದ್ದೇಶದಿಂದ ಎಫ್‌ಐಆರ್‌ ಹಾಕಿದ್ದಾರೆ. ಈ ಮೊದಲು ಹರೀಶ್ ಪೂಂಜಾ ಮೇಲೆ ಕೇಸ್ ಹಾಕಿದರು. ಈಗ ನನ್ನ ಹಾಗೂ ವೇದವ್ಯಾಸ ಕಾಮತ್ ಮೇಲೆ ಕೇಸ್ ಹಾಕಿದ್ದಾರೆ. ಜೈ ಶ್ರೀರಾಮ್ ಎನ್ನುವರ ಮೇಲೆ ಕೇಸ್ ಹಾಕುತ್ತಿದ್ದಾರೆ. ರಾಮನನ್ನು ಅವಹೇಳನ ಮಾಡಿದವರ ಮೇಲೆ ಯಾವುದೇ ಕೇಸಿಲ್ಲ, ಅವರನ್ನು ಹಂಗೇ ಬಿಡುತ್ತಿದ್ದಾರೆ ಎಂದು ಹೇಳಿದರು.

ʻʻನಾವು ಇದನ್ನು ಫೇಸ್ ಮಾಡುತ್ತೇವೆ. .ನಾವು ಇಬ್ಬರು ಶಾಸಕರು ಜಾಮೀನು ಪಡೆಯೋದಿಲ್ಲ. ಈ ಪ್ರಕರಣವನ್ನು ಎದರಿಸುತ್ತೇವೆʼʼ ಎಂದು ಹೇಳಿದ ಭರತ್‌ ಶೆಟ್ಟಿ ಅವರು, ಸದನದ ಶೂನ್ಯ ವೇಳೆಯಲ್ಲಿ ಪ್ರಸ್ತಾಪ ಮಾಡಿದ್ದೇನೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಸರಿಯಾಗಿ ಉತ್ತರ ಕೊಟ್ಟಿಲ್ಲ. ಸಂಜೆ ಗೃಹ ಸಚಿವರು ಉತ್ತರಿಸಬಹುದು. ನಾವು ಇದನ್ನ ಮತ್ತೆ ಪ್ರಸ್ತಾಪ ಮಾಡ್ತೇವೆ ಎಂದರು.

ʻʻನಾನು ಶಾಲೆಗೆ ಹೋಗೇ ಇರಲಿಲ್ಲ. ಡಿಡಿಪಿಐ ಕಚೇರಿಗೆ ಮಾತ್ರ ಹೋಗಿದ್ದೆ‌. ಆದ್ರೆ ಗಲಾಟೆ ಮಾಡಿದ್ದಾರೆ ಎಂದು ಕೇಸ್ ಹಾಕಿದ್ದಾರೆ. ಇದು ದುರದ್ದೇಶದಿಂದ ಹಾಕಿರುವ ಕೇಸ್ʼʼ ಎಂದು ಹೇಳಿದರು.

ರಾಮನ ಅವಹೇಳನ ಮಾಡಿದ ಶಿಕ್ಷಕಿಯ ಮೇಲೆ ಪೋಷಕರೇ ದೂರು ನೀಡಿದ್ದಾರೆ‌. ಆದರೆ, ಅವರ ಮೇಲೆ ಕೇಸು ಹಾಕಿಲ್ಲ. ಅದಕ್ಕೆ ಬದಲಾಗಿ ‌ ಡಿಡಿಪಿಐಯನ್ನು ವರ್ಗಾವಣೆ ಮಾಡಿದ್ದಾರೆ. ಅವರು ತನಿಖೆ ಮಾಡಿದರೆ ಸತ್ಯ ಗೊತ್ತಾಗುತ್ತೆ ಅಂತ ಅವರನ್ನು ಎತ್ತಂಗಡಿ ಮಾಡಿದ್ದಾರೆ ಎಂದು ಭರತ್‌ ಶೆಟ್ಟಿ ಹೇಳಿದರು.

Exit mobile version