ಮಂಗಳೂರು: ದಿನೇ ದಿನೇ ಕಾಡು ನಾಶ ಆಗುತ್ತಾ ಇದ್ದು, ಕಾಡಿನ ಪ್ರಾಣಿಗಳು ನಾಡಿನತ್ತ ಆಗಮಿಸುತ್ತಿವೆ. ಆಹಾರವನ್ನು ಅರಸಿ ನಾಡಿನತ್ತ ಬರುವ ಕಾಡು ಪ್ರಾಣಿಗಳು ಬೆಳೆ ನಾಶ ಮಾಡುವ ಪ್ರಸಂಗಗಳು ಹೆಚ್ಚಾಗುತ್ತಿವೆ. ಇದನ್ನು ತಪ್ಪಿಸಲು ಅರಣ್ಯ ಇಲಾಖೆ ಹೊಸ ಯೋಜನೆ ರೋಪಿಸಿದ್ದು, ಕಾಡಿನಲ್ಲೇ ಹಣ್ಣಿನ ಗಿಡಗಳನ್ನು ಬೆಳೆಯುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಬೆಳ್ತಂಗಡಿ ತಾಲೂಕಿನ ಬಡಕೋಡಿ ಎಂಬ ಗ್ರಾಮದಲ್ಲಿ ಸಚಿವ ಉಮೇಶ್ ಕತ್ತಿ ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಅರಣ್ಯ ಜನಸ್ನೇಹಿಯಾಗಿ ಜನರೊಂದಿಗೆ ಸೇರಿ ಅರಣ್ಯ ಬೆಳೆಸಬೇಕು. ಕಾಡು ಪ್ರಾಣಿಗಳಿಗೆ ಅರಣ್ಯದಲ್ಲಿ ಹಣ್ಣು ಹಂಪಲು ಗಿಡ ನೆಟ್ಟು ಪ್ರಾಣಿಗಳಿಗೆ ಆಹಾರ ದಾನ ಮಾಡುವ ಮೂಲಕ ಪ್ರಾಣಿಗಳು ಮನುಷ್ಯರ ಮೇಲೆ ನಡೆಸುವ ದಾಳಿಯನ್ನು ತಡೆಯಬಹುದು ಎಂದು, ಸಮಾರಂಭದಲ್ಲಿ ಭಾಗವಹಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಸಚಿವ ಉಮೇಶ್ ಕತ್ತಿ ಮಾತನಾಡಿ, ಮಾನವ ಮತ್ತು ಪ್ರಾಣಿ ಸಂಘರ್ಷ ತಪ್ಪಿಸಲು ಹಣ್ಣಿನ ಗಿಡಗಳ ಕಾಡಿನ ನಿರ್ಮಾಣ ಮತ್ತು ಸಂರಕ್ಷಣೆಯ ಅಗತ್ಯ ಇದೆ. ಪಶ್ಚಿಮ ಘಟ್ಟ ಅರಣ್ಯ ವ್ಯಾಪ್ತಿಯ ವೇಣೂರು ವಲಯದ ಅರಣ್ಯದಲ್ಲಿ ದಶಲಕ್ಷ ಹಣ್ಣಿನ ಗಿಡಗಳ ನಾಟಿ ಮಾಡಲಾಗುತ್ತದೆ. ಕಳೆದ ವರ್ಷ ಪ್ರಾಣಿಗಳಿಂದ ಆಗಿರುವ ಬೆಳೆ ಹಾನಿ ಹಾಗೂ ಮಾನವ ಜೀವ ಹಾನಿಯಿಂದ ಸರ್ಕಾರ 20 ಕೋಟಿ ರೂ. ಪರಿಹಾರ ನೀಡಬೇಕಾಗಿ ಬಂತು. ಹೀಗಾಗಿ ಇದೊಂದು ಅಗತ್ಯದ ಯೋಜನೆ ಎಂದು ಹೇಳಿದರು.
ಇದನ್ನೂ ಓದಿ: ಆಮ್ಲಜನಕ ನೀಡುವ ಕಾಡನ್ನು ಉಳಿಸುವ ಪಣ ತೊಡಿ: ಅರಣ್ಯ ಅಭಿವೃದ್ದಿ ನಿಗಮ ಅಧ್ಯಕ್ಷೆ ತಾರಾ ಅನುರಾಧ