ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವೀಕೆಂಡ್ ಹಬ್ಬವಾಗಿ ಬೆಂಗಳೂರು ಕಂಬಳ ಕಳೆಕಟ್ಟಿಕೊಟ್ಟಿದೆ. ಎಲ್ಲಿ ನೋಡಿದರೂ ಜನವೇ ಜನ. ಕರಾವಳಿಯ ಸಾಂಪ್ರದಾಯಿಕ ಕಲೆಗೆ (Traditional art of the coastal Karnataka) ಬೆಂಗಳೂರಿಗರು ಅಕ್ಷರಶಃ ಮಾರು ಹೋಗಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಜನಸಾಗರವೇ ಸೇರಿದೆ. ಬೆಂಗಳೂರು ಕಂಬಳದ (Bangalore Kambala) ಉತ್ಸವಕ್ಕೆ ಉತ್ಸಾಹದಿಂದ ಭಾಗಿಯಾಗುತ್ತಿದ್ದಾರೆ. ಇಲ್ಲಿರುವ ತುಳುನಾಡಿನ ಬಹುತೇಕ ಮಂದಿ ಇದು ನಮ್ಮ ಹಬ್ಬ ಎಂಬಂತೆ ಭೇಟಿ ನೀಡುತ್ತಿದ್ದಾರೆ. ಕೋಣಗಳ ಓಟವನ್ನು ನೋಡಿ ಖುಷಿ ಪಡುತ್ತಿದ್ದಾರೆ. ಖಾದ್ಯಗಳನ್ನು ಸವಿದು ಆನಂದಿಸುತ್ತಿದ್ದಾರೆ. ಬೆಂಗಳೂರಿನಲ್ಲಿದ್ದುಕೊಂಡೇ ಕಂಬಳದ ಅಲೆಯಲ್ಲಿ ಒಮ್ಮೆ ಕರಾವಳಿಗೆ ಹೋಗಿ ಬಂದಿದ್ದಾರೆ! ಎರಡನೇ ದಿನವಾದ ಭಾನುವಾರವೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನ ಸೇರಿರುವುದು ಕಂಬಳದ ಸಂಭ್ರಮವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ.
ಭಾನುವಾರ ಬೆಳಗ್ಗೆಯಿಂದಲೇ ವಿವಿಧ ಕಾರ್ಯಕ್ರಮಗಳು ಆರಂಭವಾಗಿವೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Union Minister Shobha Karandlaje), ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (Former Prime Minister HD DeveGowda) ಸೇರಿದಂತೆ ಹಿರಿಯ ರಾಜಕಾರಣಿಗಳು, ಅಧಿಕಾರಿಗಳು ಭಾಗಿಯಾಗಿದ್ದರು. ಕರಾವಳಿಯ ಸಂಭ್ರಮವನ್ನು ಬೆಂಗಳೂರಿಗರಿಗೆ ತೋರಿಸುತ್ತಿರುವುದು ನಿಜಕ್ಕೂ ಖುಷಿಯ ವಿಚಾರ. ಇದು ಪ್ರತಿ ವರ್ಷವೂ ಆಗಬೇಕು. ನಾವು ಬಾಲ್ಯದಲ್ಲಿ ಕಂಬಳವನ್ನು ನೋಡಲು ಹೋಗುತ್ತಿದ್ದವು ಎಂದು ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳು
ವೇದಿಕೆ 2ರಲ್ಲಿ ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕರಂಗೋಲು ನೃತ್ಯ, ಯಕ್ಷಗಾನ, ಆಟಿ ಕಳಂಜ, ಆಕ್ಸಿಜನ್ ಡ್ಯಾನ್ಸ್ ಟೀಮ್, ಮಂಗಳೂರು ಕಾಮಿಡಿ ಕಲಾವಿದರಿಂದ ವಿಶೇಷ ಪ್ರದರ್ಶನವಿದೆ. ಮಿಮಿಕ್ರಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜನಮನ ಸೆಳೆಯುತ್ತಿವೆ. ಸಂಜೆ 4 ಗಂಟೆಗೆ ಕಂಬಳ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಗಿದೆ.
ಗಾರುಡಿ ಬೊಂಬೆಗಳ ಕುಣಿತಕ್ಕೆ ಜನರು ಫಿದಾ
ಒಂದೆಡೆ ಕಂಬಳದ ಕಂಪು, ಮತ್ತೊಂದೆಡೆ ನೃತ್ಯದ ಅಬ್ಬರ ಗಮನ ಸೆಳೆಯುತ್ತಿದೆ. ಕಂಬಳದ ಸಾಂಸ್ಕೃತಿಕ ವೇದಿಕೆಯಲ್ಲಿ ಕೀಲು ಕುದುರೆ, ಗಾರುಡಿ ಬೊಂಬೆಗಳ ಕುಣಿತಕ್ಕೆ ಜನರು ಫಿದಾ ಆಗಿದ್ದಾರೆ. ಲಯಬದ್ಧ ಮ್ಯೂಸಿಕ್ ಜತೆ ಹೆಜ್ಜೆ ಕಲಾವಿದರು ಹೆಜ್ಜೆ ಹಾಕಿದ್ದು, ನೋಡುಗರ ಕಣ್ಮನವನ್ನು ಸೆಳೆಯುತ್ತಿದೆ.
ಸಂಜೆ 7ರಿಂದ ಸೆಲೆಬ್ರಿಟಿಗಳ ಸಂಗೀತ ಸಂಜೆ
ಭಾನುವಾರ ಸಂಜೆ 7ರಿಂದ ಸೆಲೆಬ್ರಿಟಿಗಳ ಸಂಗೀತ ಸಂಜೆ ಆರಂಭವಾಗಲಿದೆ. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಸಂಗೀತ ರಸ ಸಂಜೆಯನ್ನು ನಡೆಸಿಕೊಡಲಿದ್ದಾರೆ. ಬಳಿಕ ನಾಗರಾಜ್ ಅವರ ಮ್ಯೂಸಿಕಲ್ ಪ್ರೋಗ್ರಾಂ ಇದೆ. ಅದಾದ ಮೇಲೆ ಖ್ಯಾತ ಗಾಯಕಿ ಶಮಿತಾ ಮಲ್ನಾಡ್ ಅವರಿಂದ ಸಂಗೀತ ಕಾರ್ಯಕ್ರಮ ಇದೆ.
ತುಳುನಾಡಿನ ಸಂಸ್ಕೃತಿ ಅನಾವರಣ
ಕಂಬಳದ ಅಂಗಳದಲ್ಲಿ ತುಳುನಾಡಿನ ಸಂಸ್ಕೃತಿ ಅನಾವರಣಗೊಂಡಿದೆ. ದೈವಕೋಲದ ವಸ್ತುಗಳು, ಪ್ರಾಚೀನ ಕಾಲದ ವಸ್ತುಗಳ ಅನಾವರಣ ಇಲ್ಲಾಗುತ್ತಿದೆ. ಕಾಂತಾರ ಸಿನಿಮಾ ಬಳಿಕ ದೈವರಾಧನೆ ಬಗ್ಗೆ ಜನರಿಗೆ ಹೆಚ್ಚಿನ ಒಲವು ಹಾಗೂ ಕುತೂಹಲ ಇದೆ. ಈ ಹಿನ್ನೆಲೆಯಲ್ಲಿ ದೈವರಾಧನೆಗೆ ಬಳಕೆಯಾಗುವ ಸಾಮಗ್ರಿಗಳನ್ನು ಜನರು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.
ಕಳೆದ 30 ವರ್ಷಗಳಿಂದ ಸುಧಾಕರ್ ಶೆಟ್ಟಿ ಎಂಬ ದಂಪತಿ ಇದನ್ನು ಸಂಗ್ರಹ ಮಾಡಿಕೊಂಡು ಬಂದಿದ್ದಾರೆ. ಇತಿಹಾಸ ಉಪನ್ಯಾಸಕರಾಗಿರುವ ಸುಧಾಕರ್ ಶೆಟ್ಟಿ ಅವರು ಈ ಅಪರೂಪದ ವಸ್ತುಗಳನ್ನು ಇಂತಹ ಉತ್ಸವಗಳಲ್ಲಿ ಪ್ರದರ್ಶನ ಮಾಡುತ್ತದೆ. ಅಲ್ಲದೆ, ಹಿಂದಿನ ಕಾಲದ ಗೃಹಬಳಕೆ ವಸ್ತುಗಳು, ಪೂಜಾ ಸಾಮಗ್ರಿಗಳು, ದೇಶ-ವಿದೇಶದ ಕರೆನ್ಸಿಗಳು ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿವೆ.
ಇದನ್ನೂ ಓದಿ: Bangalore Kambala : ಬೆಂಗಳೂರು ಕಂಬಳಕ್ಕೆ ಬಂದ ಕೋಣಗಳಿಗೆ ಕುಡಿಯಲು ಮಂಗಳೂರಿಂದಲೇ ನೀರು; ಯಾಕೆ?
ಎರಡನೇ ದಿನದ ಕಂಬಳಕ್ಕೂ ಭರ್ಜರಿ ರೆಸ್ಪಾನ್ಸ್
ಹಗ್ಗದ ಕಿರಿಯ, ಹಗ್ಗದ ಹಿರಿಯ ಪಂದ್ಯಗಳನ್ನು ಸಾರ್ವಜನಿಕರು ವೀಕ್ಷಿಸುತ್ತಿದ್ದಾರೆ. ಕರೆಯ ಸುತ್ತ ಕಂಬಳದ ಕೋಣಗಳಿಗೆ ಪ್ರೋತ್ಸಾಹದ ಕೂಗುಗಳು ಕೇಳಿ ಬರುತ್ತಲಿವೆ. ಸಿಲಿಕಾನ್ ಸಿಟಿ ಮಂದಿ ಕೋಣಗಳ ಓಟವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.