ಮಂಗಳೂರು: ಹಿಂದೂಗಳು ಒಂದೋ ಎರಡೋ ಮಕ್ಕಳು ಮಾಡ್ಕೊಂಡ್ರೆ ಆಗಲ್ಲ, ಹೀಗಾದ್ರೆ ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ (Muslim Population) ಹಿಂದೂಗಳನ್ನು ಮೀರಿಸಲಿದೆ (Hindu population) ಎಂದು ಎಚ್ಚರಿಕೆ ನೀಡಿದ್ದಾರೆ ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ (BJP MLA Harish Poonja). ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ತುಳುವಿನಲ್ಲಿ ಮಾತನಾಡಿದ ಅವರು ಹಿಂದೂ ಮುಸ್ಲಿಂ ಜನಸಂಖ್ಯೆಯನ್ನು ಹೋಲಿಸಿ ಅಪಾಯದ ಕರೆಗಂಟೆ ಬಾರಿಸಿದ್ದಲ್ಲದೆ, ಸಲಹೆಯನ್ನೂ ನೀಡಿದರು!
ಬೆಳ್ತಂಗಡಿ ತಾಲೂಕಿನ ಪೆರಾಡಿಯಲ್ಲಿ ಜ.7ರಂದು ನಡೆದ ಅಯ್ಯಪ್ಪ ದೀಪೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ʻʻದೇಶದಲ್ಲಿ ಹಿಂದುಗಳ ಜನಸಂಖ್ಯೆ 80 ಕೋಟಿ ಇದೆ. ಮುಸ್ಲಿಮರು ಇರುವುದು ಕೇವಲ 20 ಕೋಟಿ ಎಂದು ಕೆಲವರು ಯೋಚಿಸುತ್ತಾರೆ. ಆದರೆ, ಇನ್ನೊಂದು ದಿಕ್ಕಿನಲ್ಲೂ ಯೋಚನೆ ಮಾಡಿʼʼ ಎಂದು ಹರೀಶ್ ಪೂಂಜಾ ಅವರು ಲೆಕ್ಕಾಚಾರವೊಂದನ್ನು ನೀಡಿದ್ದಾರೆ.
ʻʻಮುಸ್ಲಿಮರು ಕಡಿಮೆ ಜನಸಂಖ್ಯೆ ಇದ್ದಾರೆ. ನಾವು ಜಾಸ್ತಿ ಇದ್ದೇವೆ, ಏನಾಗುತ್ತದೆ ಅನ್ನೋದು ನಮ್ಮ ಭಾವನೆ. ಆದ್ರೆ ಮುಸ್ಲಿಮರಿಗೆ ನಾಲ್ಕು-ನಾಲ್ಕು ಮಕ್ಕಳು. ನಮಗೆ ಒಂದೊಂದೇ ಮಕ್ಕಳು. ತಪ್ಪಿದರೆ ಎರಡು ಮಕ್ಕಳು. ಮನೆಯಲ್ಲಿ ಕುಳಿತು ಯೋಚನೆ ಮಾಡಿ, ದೇಶದಲ್ಲಿರುವ 20 ಕೋಟಿ ಮುಸ್ಲಿಮರಿಗೆ ನಾಲ್ಕು ನಾಲ್ಕು ಮಕ್ಕಳು ಆದ್ರೆ ಎಷ್ಟಾಗುತ್ತೆ?ʼʼ ಎಂದು ಕೇಳಿದ ಅವರು, ಅವರ ಜನಸಂಖ್ಯೆ 80 ಕೋಟಿ ಆಗುತ್ತದೆ. ನಮ್ಮ ಜನಸಂಖ್ಯೆ 20 ಕೋಟಿ ಆಗುತ್ತದೆ ಎಂದರು.
ಮುಸ್ಲಿಮರ ಜನಸಂಖ್ಯೆ 80 ಕೋಟಿ ಆಗಿ ಹಿಂದುಗಳ ಜನಸಂಖ್ಯೆ ಕಡಿಮೆ ಆದ್ರೆ ನಮ್ಮ ದೇಶದಲ್ಲಿ ಹಿಂದುಗಳ ಪರಿಸ್ಥಿತಿ ಹೇಗಿರುತ್ತದೆ ಎಂದು ಯೋಚನೆ ಮಾಡಿ. ಭಾರತದಲ್ಲಿ ಮುಸ್ಲಿಂಮರ ಜನಸಂಖ್ಯೆ ಹೆಚ್ಚಾದ್ರೆ ಹಿಂದುಗಳ ಪರಿಸ್ಥಿತಿ ಏನಾಗಬಹುದು ಎಂದು ಮನೆಯಲ್ಲಿ ಕುಳಿತು ಯೋಚನೆ ಮಾಡಿ ಎಂದು ಅವರು ಎಚ್ಚರಿಸಿದರು.
ಮಕ್ಕಳನ್ನು ಹೆಚ್ಚಿಸಲು ಸಲಹೆ ನೀಡಿದ್ದು ಪೂಂಜಾ ಒಬ್ಬರೇ ಅಲ್ಲ!
ಹಿಂದುಗಳು ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕು, ಇಲ್ಲದಿದ್ದರೆ ಉಳಿಗಾಲವಿಲ್ಲ ಎಂದು ಹೇಳಿದ್ದು ಕೇವಲ ಹರೀಶ್ ಪೂಂಜಾ ಅವರೊಬ್ಬರೇ ಅಲ್ಲ. ಹಿಂದೆ ಹಲವು ಹಿಂದೂ ನಾಯಕರು ಈ ಹೇಳಿಕೆ ನೀಡಿದ್ದಾರೆ. ಆರೆಸ್ಸೆಸ್ ನಾಯಕ ಕಲ್ಲಡ್ಕ ಪ್ರಭಾಕರ ಭಟ್ ಅವರು ಹಿಂದಿನಿಂದಲೇ ಇದನ್ನು ಪ್ರತಿಪಾದಿಸುತ್ತಾ ಬಂದಿದ್ದಾರೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪನವರು, ದೇಶ ಉಳಿಬೇಕು ಅಂದರೆ ಎರಡು ಮಕ್ಕಳು ಸಾಕಾಗಲ್ಲ, ನನ್ನ ತರಹ ಕನಿಷ್ಠ ಐದು ಮಕ್ಕಳಾದರೂ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದರು.
ಹಿಂದೂ ದಂಪತಿ ನಾಲ್ಕು ಮಕ್ಕಳಿಗೆ ಜನ್ಮ ನೀಡಬೇಕು. ಈ ಪೈಕಿ ಎರಡು ಮಕ್ಕಳನ್ನು ಆರ್‌ಎಸ್ಎಸ್ ಅಥವಾ ವಿಶ್ವ ಹಿಂದೂ ಪರಿಷತ್, ಬಜರಂಗದಳ ಅಥವಾ ಯಾವುದಾದರೂ ಹಿಂದೂ ಪರ ಸಂಘಟನೆಗೆ ನೀಡಬೇಕು ಎಂದು ಸಾಧ್ವಿ ರಿತಂಬರಾ ಹೇಳಿದ್ದರು.
ಇದನ್ನೂ ಓದಿ: Moral Policing: ಬೆಳಗಾವಿಯಲ್ಲಿ ನೈತಿಕ ಪೊಲೀಸ್‌ಗಿರಿ; ಅಕ್ಕ-ತಮ್ಮ ಅಂದ್ರೂ ಬಿಡದೆ ಹೊಡೆದರು ಯುವಕರು!
ಧಾರ್ಮಿಕ ಭಾಷಣದಲ್ಲಿ ಹರೀಶ್ ಪೂಂಜಾ ಹೇಳಿದ್ದೇನು?
ಭಾರತದ ಈಗಿನ ಜನಸಂಖ್ಯೆ ಎಷ್ಟು?
2024ರ ಜನವರಿ 9ಕ್ಕೆ ಅನ್ವಯವಾಗುವಂತೆ ಭಾರತದ ಜನಸಂಖ್ಯೆ 1,435,505,751 ಅಂದರೆ 143.5 ಕೋಟಿ ಇದೆ. ಈ ನಿಟ್ಟಿನಲ್ಲಿ ನಾವು ಚೀನಾವನ್ನು ಮೀರಿಸಿದ್ದೇವೆ. ಚೀನಾದ ಈಗಿನ ಜನಸಂಖ್ಯೆ 1,425,413,552 ಅಂದರೆ 142.5 ಕೋಟಿ.
ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ 2011ರ ಜನಗಣತಿ ಪ್ರಕಾರ 17.2 ಕೋಟಿ ಇತ್ತು. ಅಂದರೆ ಅಂದಿನ ಜನಸಂಖ್ಯೆಗೆ ಹೋಲಿಸಿದರೆ 14.2 ಶೇಕಡಾ ಇತ್ತು. 2023ರ ಲೆಕ್ಕಾಚಾರದ ಪ್ರಕಾರ ಮುಸ್ಲಿಮರ ಜನಸಂಖ್ಯೆ 19.7 ಕೋಟಿಗೆ ಏರಿದೆ. ಅಂದರೆ ಒಟ್ಟಾರೆ ಜನಸಂಖ್ಯೆಯ 14.2 ಶೇಕಡಾ ಪ್ರಮಾಣದಲ್ಲೇ ಇದೆ.