Site icon Vistara News

Narayana Guru: 10ನೇ ತರಗತಿ ಪುಸ್ತಕದಿಂದ ನಾರಾಯಣಗುರು ಪಾಠವೂ ಕಟ್!

ಮಂಗಳೂರು: ಹತ್ತನೇ ತರಗತಿಯ ಪಠ್ಯದಿಂದ ಸಮಾಜ ಸುಧಾರಕ ನಾರಾಣಗುರು ಅವರ ಕುರಿತ ಪಾಠವನ್ನು ಕೈ ಬಿಡಲಾಗಿದೆ. ಭಗತ್‌ ಸಿಂಗ್‌ ಪಠ್ಯವನ್ನು ತೆಗೆದು ಆರ್‌ಎಸ್‌ಎಸ್‌ ಸಂಸ್ಥಾಪಕ ಡಾ. ಹೆಡಗೇವಾರ್‌ ಅವರ ಕುರಿತಾದ ಪಠ್ಯವನ್ನು ಸೇರಿಸಿರುವುದು ಈಗಾಗಲೇ ವಿವಾದದ ಕಿಡಿ ಹಾರಿಸಿದೆ. ಈ ನಡುವೆ, ರಾಜ್ಯ ಪಠ್ಯಪುಸ್ತಕ ಪರಿಶೀಲನಾ ಸಮಿತಿಯು ನಾರಾಯಣಗುರುಗಳಿಗೆ ಸಂಬಂಧಿಸಿದ ಪಾಠವನ್ನು ಪಠ್ಯದಿಂದ ತೆಗೆದು ಹಾಕಿರುವುದು ಮತ್ತೊಂದು ಎಡವಟ್ಟು ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಈ ಬಾರಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ನಾರಾಯಣಗುರುಗಳ ಸ್ತಬ್ಧಚಿತ್ರವನ್ನು ಪ್ರಸ್ತುತಪಡಿಸಲು ಕೇರಳ ಸರ್ಕಾರ ಪ್ರಸ್ತಾಪ ಸಲ್ಲಿಸಿತ್ತು. ಆದರೆ ಸ್ತಬ್ಧಚಿತ್ರ ಆಯ್ಕೆ ಮಾಡುವ ಕೇಂದ್ರ ಸಮಿತಿಯು ಇದನ್ನು ತಿರಸ್ಕರಿಸಿತ್ತು. ಇದು ಕೇಂದ್ರದ ಬಿಜೆಪಿ ಸರ್ಕಾರದ ಕಿತಾಪತಿ ಎಂದು ಕೇರಳದ ಕಮ್ಯುನಿಸ್ಟ್‌ ಸರ್ಕಾರ ಆರೋಪಿಸಿತ್ತು. ಇದರಲ್ಲಿ ತನ್ನ ಪಾತ್ರ ಏನೂ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿತ್ತು. ಕೇರಳ ಹಾಗೂ ಕರ್ನಾಟಕದ ಕರಾವಳಿ ಭಾಗದಲ್ಲಿ ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ನಾರಾಯಣಗುರು ಅವರ ಪಠ್ಯವನ್ನು ಹತ್ತನೇ ತರಗತಿಯ ಪುಸ್ತಕದಿಂದ ತೆಗೆದಿರುವುದರಿಂದ ಮತ್ತೊಮ್ಮೆ ವಿವಾದ ಭುಗಿಲೇಳುವ ಸಾಧ್ಯತೆ ಇದೆ.

ನಾರಾಯಣಗುರುಗಳು ದಕ್ಷಿಣ ಭಾರತದಲ್ಲಿ ಸಾಮಾಜಿಕ ಕ್ರಾಂತಿ ಮಾಡುವ ಮೂಲಕ ದೇಶಸೇವೆ ಮಾಡಿದವರು. ಅವರ ಬಗ್ಗೆ 10ನೇ ತರಗತಿಯ ಸಮಾಜ ವಿಜ್ಞಾನ ವಿಷಯದಲ್ಲಿ ಒಂದು ಪಾಠವಿತ್ತು. ಬ್ರಹ್ಮ ಸಮಾಜ, ಆರ್ಯ ಸಮಾಜ, ವಿವೇಕಾನಂದರ ಪಠ್ಯದ ಜೊತೆ ನಾರಾಯಣಗುರುಗಳ ಜೀವನ ಚರಿತ್ರೆಯೂ ಇತ್ತು.

ನಾರಾಯಣಗುರು

ʼಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿʼ ಎಂಬ ಅಧ್ಯಾಯದಲ್ಲಿ ನಾರಾಯಣಗುರು ಅವರ ಜೀವನ ಚರಿತ್ರೆಯ ಸಾರ ಇತ್ತು. ಆದರೆ ಅದಕ್ಕೆ ಈಗ ಕೊಕ್‌ ನೀಡಲಾಗಿದೆ. ಇದರ ಜತೆಗೆ ಪೆರಿಯಾರ್‌ ಅವರ ಬಗ್ಗೆ ಇದ್ದ ಗದ್ಯವನ್ನೂ ತೆಗೆಯಲಾಗಿದೆ ಎಂದು ತಿಳಿದು ಬಂದಿದೆ. ನಾರಾಯಣಗುರು ಪಠ್ಯ ತೆಗೆದಿದ್ದಕ್ಕೆ ಅವರ ಅನುಯಾಯಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಯಾರೆಷ್ಟೇ ವಿರೋಧಿಸಿದರೂ ಹೆಡಗೇವಾರ್ ‌ಪಾಠ ಸೇರ್ಪಡೆ ಖಚಿತ ಎಂದ ಬಿ.ಸಿ. ನಾಗೇಶ್

Exit mobile version