ಮಂಗಳೂರು: ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದ (Yakshagana Artist) ಪೆರುವೋಡಿ ನಾರಾಯಣ ಭಟ್ (Peruvodi Narayana Bhat) ಮಂಗಳವಾರ ನಿಧನರಾದರು. ಅವರಿಗೆ 95 ವರ್ಷ ಆಗಿತ್ತು. ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಪದ್ಯಾಣದಲ್ಲಿ 1927ರಲ್ಲಿ ಜನಿಸಿದ ಪೆರುವೋಡಿ ಅವರು ಸದಭಿರುಚಿಯ ಭಾಷೆ ಮತ್ತು ಸ್ವಂತಿಕೆಯಿಂದ ಗಮನ ಸೆಳೆದವರು.
ಪೆರುವೋಡಿಯವರು ಆರಂಭದಲ್ಲಿ ಪ್ರಸಿದ್ಧ ಧರ್ಮಸ್ಥಳ ಮೇಳಕ್ಕೆ (Dharmastala Mela) ಸೇರಿ ಬಳಿಕ ಅಳದಂಗಡಿ, ಮೂಲ್ಕಿ ಸೇರಿದಂತೆ ಹಲವಾರು ಮೇಳಗಳಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ಯಕ್ಷಗಾನ ಹಾಸ್ಯಕ್ಕೆ ಮಾನ ತಂದ ಹಾಸ್ಯಗಾರರು ಇವರು. ತೆಂಕುತಿಟ್ಟಿನ ಪ್ರಾತಿನಿಧಿಕ ಹಾಸ್ಯಗಾರರು. ಉಭಯ ತಿಟ್ಟುಗಳಲ್ಲೂ ಇವರು ಮನ್ನಣೆ ಹೊಂದಿದ್ದರು.
ಪಾಪಣ್ಣ ಭಟ್ರು ಎಂದೇ ಖ್ಯಾತಿ ಪಡೆದ ನಾರಾಯಣ ಭಟ್ ಅವರು ಯಕ್ಷಗಾನದ ಹಾಸ್ಯ ಪಾತ್ರಗಳಿಗೆ ವಿಶೇಷ ಮಾನ, ಮಾನ್ಯತೆ ತಂದು ಕೊಟ್ಟಿದ್ದಾರೆ. ‘ಪಾಪಣ್ಣ ವಿಜಯ’ ಪ್ರಸಂಗದ ಪಾಪಣ್ಣ ಪಾತ್ರದ ವಿನ್ಯಾಸ ಹಾಗೂ ಪಾತ್ರಾಭಿವ್ಯಕ್ತಿಯ ಮೂಲಕ ತಮ್ಮ ಕಲ್ಪನಾಶಕ್ತಿಯನ್ನು ಪ್ರದರ್ಶಿಸಿ ಜನಮನ್ನಣೆ ಗಳಿಸಿದ್ದಾರೆ.
ದಮಯಂತಿ ಪುನರ್ ಸ್ವಯಂವರ ಪ್ರಸಂಗದ ಬಾಹುಕ ಪಾತ್ರಕ್ಕೆ ಹೊಸ ರೂಪ ನೀಡಿದ್ದು ಪೆರುವೋಡಿಯವರು. ಪೌರಾಣಿಕ ಪ್ರಸಂಗದ ಬಹುತೇಕ ಎಲ್ಲಾ ಪಾತ್ರಗಳಲ್ಲೂ ಸ್ವಂತಿಕೆಯ ಮೇಲ್ಮೆ ಅವರದಾಗಿದ್ದು, ತುಳು ಪ್ರಸಂಗಗಳಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
‘ಪಾಪಣ್ಣ, ಬಾಹುಕ..’ ಪಾತ್ರಗಳ ಮೂಲಕ ಗಮನ ಸೆಳೆದ ಇವರು ಕೃಷ್ಣಲೀಲೆ ಪ್ರಸಂಗದ ‘ವಿಜಯ’, ಕೃಷ್ಣಾರ್ಜುನ ಕಾಳಗದ ‘ಮಕರಂದ’, ದೇವ ದೂತ, ರಾಕ್ಷಸದೂತ.. ಹೀಗೆ ಪ್ರತೀ ಪಾತ್ರಗಳಿಗೂ ಪ್ರತ್ಯಪ್ರತ್ಯೇಕವಾದ ಅಭಿವ್ಯಕ್ತಿ. ನಿರ್ವಹಿಸಿದ ಎಲ್ಲಾ ಪಾತ್ರಗಳಲ್ಲೂ ಮಿಂಚಿದ್ದರು.
ವಿವಿಧ ಮೇಳಗಳಲ್ಲಿ ತಿರುಗಾಟ ಮಾಡಿದ ಅನುಭವಿ. ಮೂಲ್ಕಿ ಮೇಳದ ಯಜಮಾನಿಕೆ ನಡೆಸಿದ್ದ ಸಂಘಟನಾ ಚತುರರೂ ಹೌದು. ಪೆರುವೋಡಿಯವರ ಕಲಾ ಬದುಕಿನ ಚಿತ್ರಣ-ಹಾಸ್ಯಗಾರನ ಅಂತರಂಗ ಪುಸ್ತಕವನ್ನು ಪುತ್ತೂರಿನ ಕರ್ನಾಟಕ ಸಂಘ ಪ್ರಕಟಿಸಿದೆ. ಹಲವಾರು ಸಂಘ ಸಂಸ್ಥೆಗಳ ವಿವಿಧ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು.