ಉಪ್ಪಿನಂಗಡಿ (ದಕ್ಷಿಣ ಕನ್ನಡ): ಹಿಜಾಬ್ ವಿವಾದದ ವರದಿ ಮಾಡಲು ಹೋದ ಪತ್ರಕರ್ತರ ಮೇಲೆ ವಿದ್ಯಾರ್ಥಿಗಳೇ ದೌರ್ಜನ್ಯ ನಡೆಸಿದರೂ ಪೊಲೀಸರು ಮಾಧ್ಯಮ ಪ್ರತಿನಿಧಿಗಳ ವಿರುದ್ಧವೇ ಪ್ರಕರಣ ದಾಖಲಿಸಿಕೊಂಡಿರುವುದನ್ನು ಖಂಡಿಸಿ ಶನಿವಾರ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಯಿತು.
ಜಿಲ್ಲಾ ಮಟ್ಟ ಮತ್ತು ತಾಲೂಕು ಮಟ್ಟಗಳಲ್ಲಿ ಪತ್ರಕರ್ತರು ಪ್ರತಿಭಟನೆ ನಡೆಸಿ ಪತ್ರಕರ್ತರ ಮೇಲೆ ಹಾಕಲಾಗಿರುವ ಪ್ರಕರಣಗಳನ್ನು ಕೈಬಿಡಬೇಕು ಮತ್ತು ಗೂಂಡಾ ಪ್ರವೃತ್ತಿ ತೋರಿದ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಉಪ್ಪಿನಂಗಡಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಆರು ಮಂದಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರಿಂದ ಅವರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಈ ಬಗ್ಗೆ ವರದಿ ಮಾಡಲೆಂದು ಕಾಲೇಜಿನ ಪ್ರಿನ್ಸಿಪಾಲ್ ಚೇಂಬರ್‌ಗೆ ಮೂವರು ಪತ್ರಕರ್ತರು ಹೋಗಿದ್ದರು. ಅದೇ ವೇಳೆ ಪ್ರತಿಭಟನಾ ನಿರತ ವಿದ್ಯಾರ್ಥಿನಿಯರ ಚಿತ್ರ ಮತ್ತು ವಿಡಿಯೊ ತೆಗೆದಿದ್ದರು. ಅವರು ಕಚೇರಿಯಿಂದ ಮರಳಿ ಬರುವ ಹೊತ್ತಿನಲ್ಲಿ ವಿದ್ಯಾರ್ಥಗಳ ತಂಡವೊಂದು ಅವರನ್ನು ಅಡ್ಡಗಟ್ಟಿತು. ಪತ್ರಕರ್ತರಿಗೆ ದಿಗ್ಬಂಧನ ಹಾಕಿದ್ದಲ್ಲದೆ, ಅವರ ಕ್ಯಾಮೆರಾ ಕಿತ್ತುಕೊಂಡು ವಿಡಿಯೊ, ಫೋಟೊಗಳನ್ನು ಡಿಲೀಟ್ ಮಾಡಿತ್ತು.
ಪತ್ರಕರ್ತರ ಮೇಲೆಯೇ ಕೇಸು
ಈ ನಡುವೆ ವಿದ್ಯಾರ್ಥಿನಿಯರು ಪತ್ರಕರ್ತರು ತಮ್ಮ ಹಿಜಾಬ್ ಎಳೆಯಲು ಬಂದರು, ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದೆಲ್ಲ ಆರೋಪಿಸಿ ದೂರು ನೀಡಿದ್ದರು. ಇದನ್ನೇ ಪರಿಗಣಿಸಿದ ಉಪ್ಪಿನಂಗಡಿ ಪೊಲೀಸರು ಪತ್ರಕರ್ತರ ವಿರುದ್ಧ IPC ಸೆಕ್ಷನ್ 447, 354, 504, 506 ಕೇಸ್ ದಾಖಲಿಸಿಕೊಂಡಿದ್ದಾರೆ. ಇವೆಲ್ಲವೂ ಧರ್ಮ ನಿಂದನೆ, ಅಸಭ್ಯ ವರ್ತನೆ ಮತ್ತಿತರ ದೂರಿಗೆ ಸಂಬಂಧಿಸಿದ್ದಾಗಿದೆ.
ಅನ್ಯಾಯದ ವಿರುದ್ಧ ಪ್ರತಿಭಟನೆ
ಮೂವರು ಪತ್ರಕರ್ತರ ವಿರುದ್ಧದ ದೂರನ್ನು ಸರಿಯಾಗಿ ಪರಿಶೀಲಿಸದೆ ಉಪ್ಪಿನಂಗಡಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಇದು ಸುಳ್ಳು ಕೇಸು ಎಂದು ಪತ್ರಕರ್ತರ ಸಂಘಟನೆಗಳು ಹೇಳಿವೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ದೂರು ನೀಡಿ ಕೇಸು ವಾಪಸ್ ಪಡೆಯುವಂತೆ ಮನವಿ ಮಾಡಲಾಗಿದೆ. ಸುಳ್ಳು ಕೇಸಿನ ಬಗ್ಗೆ ತನಿಖೆ ನಡೆಸಬೇಕು, ಕಾಲೇಜಿನ ಸಿಸಿ ಟಿವಿಯನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಲಾಗಿದೆ. ಎಸ್‌ಪಿ ಅವರೂ ಸಮಗ್ರ ತನಿಖೆಯ ಭರವಸೆ ನೀಡಿದ್ದಾರೆ.
ಇದನ್ನೂ ಓದಿ| HIJAB | ಹಿಜಾಬ್ ಧರಿಸಲು ಅವಕಾಶ ನೀಡದಿದ್ದರೆ ಪ್ರತಿಭಟನೆ ಎಂದ ವಿದ್ಯಾರ್ಥಿನಿಯರು
ಇದನ್ನೂ ಓದಿ| ಮತ್ತೆ ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು