ಮಂಗಳೂರು: ಕಾರು ಹಾಗೂ ಸ್ಕೂಟರ್ ನಡುವೆ ಅಪಘಾತ (road accident) ನಡೆದು ಬಾಲಕನೊರ್ವ ಮೃತಪಟ್ಟಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿ ಕಳಾರ ಮಸೀದಿ ಬಳಿ ಈ ದುರ್ಘಟನೆ ನಡೆದಿದೆ. ಕಳಾರ ಎಂಬಲ್ಲಿನ ಬಿಪಿನ್ (13) ಮೃತ ದುರ್ದೈವಿ.
ಡಿ.15ರ ತಡರಾತ್ರಿಯಲ್ಲಿ ಈ ಅಪಘಾತ ಸಂಭವಿಸಿದೆ. ಶಾಲೆಯಲ್ಲಿ ಕಾರ್ಯಕ್ರಮ ಮುಗಿಸಿ ತಂದೆಯೊಟ್ಟಿಗೆ ಅಣ್ಣ-ತಂಗಿ ಇಬ್ಬರು ವಾಪಸ್ ಆಗುತ್ತಿದ್ದರು. ಈ ವೇಳೆ ಎದುರಾಗಿ ರಭಸವಾಗಿ ಬಂದ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಬಿಪಿನ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರೆ, ತಂದೆ ಚಂದ್ರಶೇಖರ ಮತ್ತು ತಂಗಿ ಗಾಯಗೊಂಡಿದ್ದಾರೆ.
ಬಿಪಿನ್ ಸರಸ್ವತಿ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಮನೆ ಸಮೀಪದಲ್ಲೇ ಈ ಅಪಘಾತ ನಡೆದಿದ್ದು, ಗಾಯಾಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಬಿಪಿನ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಉಪ್ಪಿನಂಗಡಿ ಕಡೆಯಿಂದ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಅಪಘಾತ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕಾರಿನಲ್ಲಿ ಮದ್ಯದ ಬಾಟಲಿ, ಸಿಗರೇಟ್ ಪ್ಯಾಕ್‌ಗಳು ಪತ್ತೆಯಾಗಿದೆ. ಸ್ಥಳಕ್ಕಾಗಮಿಸಿರುವ ಕಡಬ ಪೊಲೀಸರು ಪರಿಶೀಲನೆ ನಡೆಸಿ, ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಮರಳು ತುಂಬಿದ ಟಿಪ್ಪರ್ ಹರಿದು ಯುವಕ ಸಾವು!
ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರಿಕುರ್ವಾದಲ್ಲಿ ಮರಳು ತುಂಬಿದ ಟಿಪ್ಪರ್ ಹರಿದು ಯುವಕನೊರ್ವ ದಾರುಣವಾಗಿ ಮೃತಪಟ್ಟಿದ್ದಾನೆ. ಮಾವಿನಕುರ್ವಾದ ದರ್ಶನ್ ಗೌಡ ಮೃತ ದುರ್ದೈವಿ.
ತಡರಾತ್ರಿ ಅಕ್ರಮ ಮರಳು ಸಾಗಾಟ ಮಾಡುವ ವೇಳೆ ದುರ್ಘಟನೆ ನಡೆದಿದೆ ಎನ್ನಲಾಗಿದೆ. ದರ್ಶನ್ ಗೌಡ ಮರಳು ತೆಗೆಯುವ ಕಾರ್ಮಿಕನಾಗಿ ಕೆಲಸ ನಿರ್ವಹಿಸುತಿದ್ದ. ರಾತ್ರಿ ಶರಾವತಿ ನದಿ ಭಾಗದ ಮರಳು ದಿಬ್ಬದ ಬಳಿ ಮಲಗಿದ್ದಾಗ ಈ ಅವಘಡ ಸಂಭವಿಸಿದೆ. ಮಾವಿನಕುರ್ವಾದ ದಯಾ ಗೌಡ ಎಂಬುವವರಿಗೆ ಸೇರಿದ ಟಿಪ್ಪರ್ ಎಂದು ತಿಳಿದು ಬಂದಿದೆ. ಹೊನ್ನಾವರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕಂಟ್ರೋಲ್ ತಪ್ಪಿದ ಚಾಲಕ!
ಚಾಲಕನ ನಿಯಂತ್ರಣ ತಪ್ಪಿ ಬಿಎಂಡಬ್ಲೂ ಕಾರೊಂದು ಎಲೆಕ್ಟ್ರಿಕ್ ಪೋಲ್‌ಗೆ ಗುದ್ದಿದೆ. ಬೆಂಗಳೂರಿನ ಜಯನಗರ ಆರ್.ವಿ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿ ಇದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಕಾರು ಫುಟ್ ಪಾತ್‌ಗೆ ನುಗ್ಗಿದೆ. ಮಹಾರಾಷ್ಟ್ರ ನೋಂದಣಿಯ ಕಾರು ಇದಾಗಿದ್ದು, ಸಂಪೂರ್ಣ ಜಖಂಗೊಂಡಿದೆ.
ಸ್ಥಳಕ್ಕೆ ಬಸವನಗುಡಿ ಸಂಚಾರ ಪೊಲೀಸರಿಂದ ಪರಿಶೀಲನೆ ನಡೆಸಿದ್ದಾರೆ. ರಾತ್ರಿಯಾಗಿದ್ದರಿಂದ ಜನ ಸಂಚಾರ ಕಡಿಮೆ ಇತ್ತು. ಹೀಗಾಗಿ ಯಾವುದೇ ಅನಾಹುತ ಸಂಭವಿಸಿಲ್ಲ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ