Site icon Vistara News

Road Accident : ಡಿವೈಡರ್‌ಗೆ ಕಾರು ಡಿಕ್ಕಿ; ದುಬೈನಲ್ಲಿ ನಡೆದ ಅಪಘಾತದಲ್ಲಿ ಉಳ್ಳಾಲದ ಯುವತಿ ಮೃತ್ಯು

Woman from Ullal dies in car accident in Dubai

ಮಂಗಳೂರು/ ಉಳ್ಳಾಲ: ಮಂಗಳೂರು ತಾಪಂ ಮಾಜಿ ಉಪಾಧ್ಯಕ್ಷೆ ರಾಜೀವಿ ಕೆಂಪುಮಣ್ಣು ಇವರ ಪುತ್ರಿ ದುಬೈನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕೋಟೆಕಾರಿನ ಬೀರಿಯ ಕೆಂಪುಮಣ್ಣು ನಿವಾಸಿ ವಿದಿಶಾ (28) ಕಾರು ಅಪಘಾತದಲ್ಲಿ ದಾರುಣವಾಗಿ (Road Accident) ಮೃತಪಟ್ಟಿದ್ದಾರೆ.

ಮಂಗಳೂರು ತಾ.ಪಂ ಮಾಜಿ ಉಪಾಧ್ಯಕ್ಷೆ ರಾಜೀವಿ ಕೆಂಪುಮಣ್ಣು ಮತ್ತು ವಿಠಲ್ ಕುಲಾಲ್ ಕೆಂಪುಮಣ್ಣು ಅವರ ಏಕೈಕ ಪುತ್ರಿ ವಿದಿಶಾ ದುಬೈನಲ್ಲಿ ವಾಸವಿದ್ದರು. ಪ್ರತಿ ದಿನ ಕಂಪೆನಿಗೆ ಕ್ಯಾಬ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಆದರೆ ನಿನ್ನೆ ಗುರುವಾರ ಕ್ಯಾಬ್ ತಪ್ಪಿದ ಕಾರಣಕ್ಕೆ ತಮ್ಮದೇ ಕಾರನ್ನು ತೆಗೆದುಕೊಂಡಿದ್ದಾರೆ.

ಈ ವೇಳೆ ಕಾರಿನ ನಿಯಂತ್ರಣ ತಪ್ಪಿದ್ದು ಡಿವೈಡ‌ರ್‌ಗೆ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ವಿದಿಶಾ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪ್ರತಿಭಾನ್ವಿತರಾಗಿದ್ದ ವಿದಿಶಾ ವಿದ್ಯಾರ್ಥಿ ದಿಸೆಯಲ್ಲೇ ರೋಟರಿ ಸೇರಿದಂತೆ ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.

Woman from Ullal dies in car accident in Dubai

ಇದನ್ನೂ ಓದಿ: Road Accident : ಟಂಟಂ ಪಲ್ಟಿಯಾಗಿ ವೃದ್ಧೆ ಸಾವು; ಐವರು ಗಂಭೀರ ಗಾಯ

ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ವ್ಯವಹಾರ ಆಡಳಿತ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ಒಂದು ವರ್ಷ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸಿದ್ದರು. 2019ರಲ್ಲಿ ದುಬೈಗೆ ತೆರಳಿ ಅಲ್ಲಿನ ಏರ್‌ಪೋರ್ಟ್‌ನಲ್ಲಿ ಅಧಿಕಾರಿಯಾಗಿ ಕಳೆದ ಐದು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು.

ಹೊಸ ಕಾರು ಖರೀದಿಸಿದ್ದ ವಿದಿಶಾ, ದುಬೈಯಲ್ಲಿ ಡ್ರೈವಿಂಗ್‌ ಲೈಸನ್ಸ್‌ ಅನ್ನು ಹೊಂದಿದ್ದರು. ಪೋಷಕರು ವಿದಿಶಾಳ ಮದುವೆಯ ಸಿದ್ಧತೆ ನಡೆಸುತ್ತಿರುವಾಗಲೇ ಈ ದುರಂತ ನಡೆದಿದೆ. ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version