Site icon Vistara News

Chandrayaan 3 : ಮಿಷನ್‌ ಚಂದ್ರಯಾನ 3 ಯಶಸ್ಸಿನಲ್ಲಿ ಒಂದೇ ಊರಿನ ಮೂವರು ವಿಜ್ಞಾನಿಗಳು ಭಾಗಿ!

IRSO Scientists from Sullia

ಸುಳ್ಯ (ದಕ್ಷಿಣ ಕನ್ನಡ): ಭಾರತದ ಗೌರವವನ್ನು ಗಗನದಲ್ಲೂ ಎತ್ತಿ ಹಿಡಿದ ಚಂದ್ರಯಾನ 3 (Chandrayaan 3) ನಮ್ಮ ತಾಕತ್ತನ್ನು ಎಲ್ಲೆಡೆ ಋಜುವಾತುಪಡಿಸಿದೆ. ಈ ಮಹಾ ಸಾಹಸ ಯಶಸ್ಸಿನ ಅತಿ ದೊಡ್ಡ ಕ್ರೆಡಿಟ್‌ ಸಲ್ಲಬೇಕಾಗಿರುವುದು ಇಸ್ರೋದ ವಿಜ್ಞಾನಿಗಳಿಗೆ (ISRO Scientists). ಯಾಕೆಂದರೆ ಚಂದ್ರಯಾನದ ಯಶಸ್ಸಿಗೆ ನೂರಾರು ವಿಜ್ಞಾನಿಗಳು, ಎಂಜಿನಿಯರ್‌ಗಳು ಅಹರ್ನಿಶಿ ದುಡಿದಿದ್ದಾರೆ. ಇವರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮೂವರು ವಿಜ್ಞಾನಿಗಳು (Three Scientists from sullia) ಇದ್ದರು ಎನ್ನುವುದು ಆ ತಾಲೂಕಿನ ಹೆಮ್ಮೆ.

ಸುಳ್ಯ ತಾಲೂಕಿನವರಾದ ಶಂಭಯ್ಯ ಕೊಡಪಾಲ, ವೇಣುಗೋಪಾಲ ಉಬರಡ್ಕ ಹಾಗೂ ದುಗ್ಗಲಡ್ಕದ ಮಾನಸ ಜಯಕುಮಾರ್ ಚಂದ್ರಯಾನ ಯಶಸ್ಸಿನಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಶಂಭಯ್ಯ ಕೆ. ಇಸ್ರೋದಲ್ಲಿ ಹಿರಿಯ ವಿಜ್ಞಾನಿ

ನೆಲ್ಲೂರು ಕೆಮ್ರಾಜೆ ಗ್ರಾಮದ ಕೊಡಪಾಲದವರಾದ ಶಂಭಯ್ಯ ಕೆ ಅವರು ಇಸ್ರೊದಲ್ಲಿ ಹಿರಿಯ ವಿಜ್ಞಾನಿಯಾಗಿದ್ದಾರೆ. ಚಂದ್ರಯಾನ್ ಮಿಷನ್‌ನಲ್ಲಿ ಎಲ್‌ಪಿಎಸ್(ಲಿಕ್ವಿಡ್ ಪ್ರೊಪಲ್ಶನ್‌ ಸಿಸ್ಟಮ್) ವಿಭಾಗದ ಯೂನಿಟ್ ಹೆಡ್ ಆಗಿ ಕಾರ್ಯನಿರ್ವಹಿಸಿದ್ದರು. ಬೊಳ್ಳಾಜೆ ಪ್ರಾಥಮಿಕ ಶಾಲೆ, ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಮುಗಿಸಿ ಮೈಸೂರಿನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆದು 1989ರಿಂದ ಇಸ್ರೊದಲ್ಲಿ ವಿಜ್ಞಾನಿಯಾಗಿದ್ದಾರೆ. ಚಂದ್ರಯಾನ 3ಯ ಎಲ್‌ಪಿಎಸ್ ಯೂನಿಟ್ ಹೆಡ್‌ ಆಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಉಬರಡ್ಕದ ವೇಣುಗೋಪಾಲ ಉಬರಡ್ಕ

ವೇಣುಗೋಪಾಲ ಉಬರಡ್ಕ ಅವರು ಇಸ್ರೊದಲ್ಲಿ ವಿಜ್ಞಾನಿಯಾಗಿದ್ದಾರೆ. ಚಂದ್ರಯಾನ್ 3 ರಲ್ಲಿ ಪಿಸಿಬಿ ಡಿಸೈನಿಂಗ್ ಟೀಂ ಸ್ಯಾಟಲೈಟ್‌ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದರು. ಇಸ್ರೊದಲ್ಲಿ ಡಿಜಿಟಲ್ ಸ್ಟ್ರಕ್ಚರ್ ಡಿಸೈನ್ ವಿಭಾಗದಲ್ಲಿ ಕಾರ್ಯನಿರ್ವಹಿಸುವ ವೇಣುಗೋಪಾಲ್ ಅವರು ಸುಳ್ಯದಲ್ಲಿ ಪಾಲಿಟೆಕ್ನಿಕ್ ತಾಂತ್ರಿಕ ಶಿಕ್ಷಣ ಪಡೆದು ಬೆಂಗಳೂರಿನಲ್ಲಿ ಬಿಇ, ಎಂಇ ಶಿಕ್ಷಣ ಪಡೆದು ಇಸ್ರೊದಲ್ಲಿ ವಿಜ್ಞಾನಿಯಾಗಿದ್ದಾರೆ.

ಇದನ್ನೂ ಓದಿ: Chandrayaan 3 : ಚಂದ್ರಲೋಕದಲ್ಲಿ ಲ್ಯಾಂಡರ್‌ ಇಳಿಸಿದ ಸಾಹಸಿಗರ ಪಟ್ಟಿಯಲ್ಲಿ ಮುಂಡರ್ಗಿಯ ಮೇಸ್ತ್ರಿ ಮಗನೂ ಇದ್ರು!

ಮಾನಸ ಜಯಕುಮಾರ್‌

ಕಳೆದ ಹಲವು ವರ್ಷಗಳಿಂದ ಇಸ್ರೊದಲ್ಲಿ ಡಿಜಿಟಲ್ ಸ್ಟ್ರಕ್ಚರ್ ಡಿಸೈನ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಳ್ಯ ದುಗಲಡ್ಕದ ಮಾನಸ ಜಯಕುಮಾರ್ ಅವರು ಮಂಗಳೂರು ವಿವಿಯಲ್ಲಿ ಮಂಗಳಗ್ರಹದ ವಿಚಾರವಾಗಿ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದಾರೆ. ಮಾರ್ಚ್ ತಿಂಗಳಲ್ಲಿ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದ ಚಂದ್ರಯಾನ – 3 ಪ್ರಾಜೆಕ್ಟ್ ವರ್ಕ್ ಶಾಪ್‌ನಲ್ಲಿ ಕರ್ನಾಟಕದಿಂದ ಆಯ್ಕೆಯಾಗಿ ಭಾಗವಹಿಸಿ ಚಂದ್ರಯಾನ -3 ಉಪಗ್ರಹದ ಆ್ಯಂಟನಾ ತಯಾರಿಕೆಯ 5 ಜನರ ತಂಡದಲ್ಲಿ ಮಾನಸ ಕೂಡಾ ಒಬ್ಬರಾಗಿದ್ದರು.

ಮಂಡೆಕೋಲು ಗ್ರಾಮದ ಜಾಲಬಾಗಿಲು ಬಾಲಕೃಷ್ಣ – ಕುಸುಮಾವತಿ ದಂಪತಿಯ ಪುತ್ರಿಯಾಗಿರುವ ಮಾನಸ, ಸುಳ್ಯ ದುಗಲಡ್ಕ ಜಯಕುಮಾರ್ ಬಿ.ಎಸ್. ರವರ ಪತ್ನಿ.‌ ಮಾನಸ ಮಂಡೆಕೋಲು ಶಾಲೆಗಳಲ್ಲಿ ಪ್ರಾಥಮಿಕ, ಅಜ್ಜಾವರ ದಲ್ಲಿ ಪ್ರೌಢಶಿಕ್ಷಣ, ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ, ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ, ಮಂಗಳೂರು‌ ವಿವಿಯಲ್ಲಿ ಎಂಎಸ್ಸಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

Exit mobile version