ಮಂಗಳೂರು: ಭಕ್ತಿ ಅಥವಾ ಪರವಶತೆಯ ಪರಾಕಾಷ್ಠೆಯಲ್ಲಿದ್ದಾಗ (Peak of Devotion) ದೈವದ ಆವಾಹನೆಯಾಗುತ್ತದೆ (Daiva Avahane) ಎನ್ನುವುದು ಕಾಲಾತೀತ ಸತ್ಯ. ಕಾಂತಾರ ಸಿನಿಮಾವನ್ನು (Kantara Movie) ನೋಡಿದವರಿಗೆ ಈ ಕಾರಣಿಕ ಅತ್ಯಂತ ಸ್ಪಷ್ಟವಾಗಿ ಅರ್ಥವಾಗಿರುತ್ತದೆ. ದುಷ್ಟ ಶಕ್ತಿಗಳ ವಿರುದ್ಧ ಕೈ ಸೋತ ಶಿವ ಅವರ ಹೊಡೆತಗಳಿಗೆ ತತ್ತರಿಸಿ ಧರಾಶಯಿಯಾದಾಗ ಪಂಜುರ್ಲಿ ದೈವ (Panjurli daiva) ಅವನ ಕಿವಿ ಬಳಿ ಬಂದು ಅಬ್ಬರದ ಘರ್ಜನೆ ಮಾಡುತ್ತದೆ. ಈ ಘರ್ಜನೆ ಅವನೊಳಗಿನ ಸಮರ್ಥ ಶಕ್ತಿಯನ್ನು ಜಾಗೃತಗೊಳಿಸುತ್ತದೆ. ಮುಂದೆ ಶಿವ ಅತಿಮಾನುಷ ಶಕ್ತಿಯೊಂದಿಗೆ ಎದ್ದು ನಿಂತು ದುಷ್ಟರು ದಿಕ್ಕೆಡುವಂತೆ ಮಾಡುತ್ತಾನೆ. ಸಿನಿಮಾದಲ್ಲಿ ತೋರಿಸಿದಷ್ಟು ಅಲ್ಲವಾದರೂ ವ್ಯಕ್ತಿಯೊಬ್ಬ ಆವಾಹನೆಯಾದಾಗ ಅತೀಂದ್ರಿಯ ಶಕ್ತಿಯನ್ನು ಪಡೆದುಕೊಳ್ಳುತ್ತಾನೆ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳು ಇವೆ. ಮಂಗಳೂರಿನಲ್ಲಿ ಮಂಗಳವಾರ ಇಂಥಹುದೇ ಆವಾಹನೆಯೊಂದು ಕಂಡುಬಂತು.
ಇಲ್ಲಿ ಆವಾಹನೆಯಾಗಿದ್ದು ಹುಲಿವೇಷ ಧರಿಸಲು (Tiger Dance) ಸಿದ್ಧವಾಗುತ್ತಿದ್ದ ಯುವಕನಿಗೆ. ಮಂಗಳೂರಿನ ಬೊಕ್ಕಪಟ್ಣದಲ್ಲಿ ಬೊಕ್ಕಪಟ್ಣ ಶಿವ ಫ್ರೆಂಡ್ಸ್ ತಂಡ ಹುಲಿ ವೇಷ ಹಾಕಲು ಸಿದ್ಧವಾಗುತ್ತಿತ್ತು. ಆಗ ಊದು ಹಾಕೋ ಕಾರ್ಯಕ್ರಮವೊಂದು ನಡೆಯುತ್ತದೆ. ಹುಲಿ ವೇಷ ಹಾಕೋ ಮೊದಲು ನಡೆಯುವ ದೇವರ ಆರಾಧನೆ ಇದು.
ಈ ವೇಳೆ ಹುಲಿವೇಷ ಹಾಕಲು ತಯಾರಾಗಿದ್ದ ವೇಷಧಾರಿಗೆ ದೈವ ಆವಾಹನೆಯಾಗಿದೆ. ಒಮ್ಮಿಂದೊಮ್ಮೆಗೇ ಮೈಯ ನರಗಳನ್ನು ಹುರಿಗೊಳಿಸುತ್ತಾ, ಘರ್ಜಿಸಿದ ಯುವಕನನ್ನು ಹತ್ತಾರು ಯುವಕರು ಹಿಡಿದು ನಿಲ್ಲಿಸಬೇಕಾಯಿತು. ಆದರೂ ಅವರನ್ನು ತಳ್ಳುವಷ್ಟು ಸಾಮರ್ಥ್ಯ ಪ್ರದರ್ಶಿಸಿದ ಈ ಯುವಕ.
ಕೊನೆಗೆ ಅಲ್ಲಿನ ಹಿರಿಯರೊಬ್ಬರು ಆತನನ್ನು ಪಾರಂಪರಿಕ ಮಾತುಗಳೊಂದಿಗೆ ಸಮಾಧಾನ ಮಾಡಿದರು. ಇದು ಈಶ್ವರನ ಕ್ಷೇತ್ರವೊಂದು ನೆನಪಿಸಿ ತೀರ್ಥ ಪ್ರೋಕ್ಷಣೆ ಮಾಡಿದರು. ಬಳಿಕ ಯುವಕ ಸಹಜ ಸ್ಥಿತಿಗೆ ಬಂದ. ಕಾಂತಾರ ಚಿತ್ರದ ಭಾಗವಾಗಿದ್ದ, ಕರಾವಳಿಯ ವಿಶೇಷತೆಗಳನ್ನೇ ಆಧರಿಸಿ ಚಿತ್ರ ನಿರ್ಮಿಸಿ ನಟಿಸುತ್ತಿರುವ ಚಿತ್ರ ನಟ ರಾಜ್ ಬಿ ಶೆಟ್ಟಿ ಅವರ ಸಮ್ಮುಖದಲ್ಲೇ ಈ ಘಟನೆ ನಡೆಯಿತು ಎನ್ನುವುದು ಇನ್ನೊಂದು ವಿಶೇಷ.
ಹುಲಿವೇಷ ಕುಣಿತದ ವೇಳೆ ಆಯ ತಪ್ಪಿ ಬಿದ್ದು ಅನಾಹುತ
ಇತ್ತ ಬೊಕ್ಕಪಟ್ಣದಲ್ಲಿ ಹುಲಿ ವೇಷಧಾರಿ ದೈವ ಆವಾಹನೆಯಿಂದ ಗಮನ ಸೆಳೆದರೆ ಅತ್ತ ಮಂಗಳಾದೇವಿ ದೇವಸ್ಥಾನದ ಸೋಮವಾರ ರಾತ್ರಿ ನಡೆದ ಹುಲಿ ವೇಷ ಪ್ರದರ್ಶನದ ವೇಳೆ ವೇಷಧಾರಿಯೊಬ್ಬ ಆಯ ತಪ್ಪಿ ಬಿದ್ದು ಗಾಯಗೊಂಡಿದ್ದಾನೆ.
ಮುಳಿಹಿತ್ಲು ಫ್ರೆಂಡ್ಸ್ ಹುಲಿವೇಷ ತಂಡದ ಕುಣಿತದ ವೇಳೆ ದುರ್ಘಟನೆ ಸಂಭವಿಸಿದೆ. ಹುಲಿವೇಷಧಾರಿಯೊಬ್ಬ ರಿವರ್ಸ್ ಪಲ್ಟಿ ಹೊಡೆಯುತ್ತಿದ್ದ ವೇಳೆ ಆಯ ತಪ್ಪಿ ತಲೆ ನೆಲಕ್ಕೆ ಬಡಿದು ಅನಾಹುತ ಸಂಭವಿಸಿದೆ.
ಮೂರು ಬಾರಿ ಅತ್ಯಂತ ಶಕ್ತಿಶಾಲಿಯಾಗಿ ಪಲ್ಟಿ ಹೊಡೆದ ಈ ಯುವಕ ಕೊನೆಯ ಬಾರಿ ಜಿಗಿಯುವ ಹೊತ್ತಲ್ಲಿ ತಲೆ ನೆಲಕ್ಕೆ ಬಡಿದಿದೆ. ಈ ಪರಿಣಾಮವಾಗಿ ಕತ್ತು ಉಳುಕಿದೆ.
ಕೂಡಲೇ ಹುಲಿ ವೇಷಧಾರಿಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ಯುವಕ ಸದ್ಯ ಸಣ್ಣ ಗಾಯಗಳೊಂದಿಗೆ ಅಪಾಯದಿಂದ ಪಾಗಿದ್ದಾರೆ. ಈ ಯುವಕನಿಗೆ ನಿರಂತರ ಅಭ್ಯಾಸದ ಜೊತೆಗೆ ಹಲವು ವರ್ಷಗಳಿಂದ ಹುಲಿವೇಷ ಕಸರತ್ತಿನ ಅನುಭವವಿದೆ.
ಇದನ್ನೂ ಓದಿ: Kantara movie: ಕಾಂತಾರ ಸಿನಿಮಾ ಹಾಡಿನ ವೇಳೆ ಪಂಜುರ್ಲಿ ವೇಷಧಾರಿ ವಿದ್ಯಾರ್ಥಿ ಮೈಯಲ್ಲಿ ಆವೇಶ!
ಹುಲಿ ಕುಣಿತ ಎನ್ನುವುದು ಒಂದು ಕಡೆಯಲ್ಲಿ ಸರಳ ಹೆಜ್ಜೆಗಳ ಕುಣಿತವಾದರೆ ಇನ್ನೊಂದು ಕಡೆಯಲ್ಲಿ ಅತ್ಯಂತ ಶಕ್ತಿಶಾಲಿ ಸಾಮರ್ಥ್ಯಗಳ ಪ್ರದರ್ಶನವೂ ಹೌದು. ಇದಕ್ಕೆ ಸಾಕಷ್ಟು ತಾಲೀಮು ನಡೆಸಲಾಗಿರುತ್ತದೆ. ಆದರೂ ಕೆಲವೊಮ್ಮೆ ಅಪಾಯ ಎದುರಾಗುತ್ತದೆ.