Site icon Vistara News

Tipu Cutout: ಮತ್ತೆ ಧರ್ಮ ದಂಗಲ್;‌ ಮಂಗಳೂರಿನಲ್ಲಿ ಟಿಪ್ಪು ಕಟೌಟ್‌ ವಿವಾದ

tipu cutout in konaje

ಮಂಗಳೂರು: ಜೆರೋಸಾ ಶಾಲೆಯ (Saint Zerosa school) ಪ್ರಕರಣ ಮರೆಗೆ ಸರಿಯುವ ಮುನ್ನವೇ ಮಂಗಳೂರಿನಲ್ಲಿ ಇನ್ನೊಂದು ಮತೀಯ ವಿವಾದ ಶುರುವಾಗಿದೆ. ಇದೀಗ ಟಿಪ್ಪು ಕಟೌಟ್‌ (Tipu Cutout) ವಿವಾದ ಎಬ್ಬಿಸಿದೆ.

ಡಿವೈಎಫ್ಐ ಕಾರ್ಯಕರ್ತರು (DYFI workers) ಅಳವಡಿಸಿರುವ ಟಿಪ್ಪು ಸುಲ್ತಾನನ ಕಟೌಟ್ ತೆರವಿಗೆ ಪೊಲೀಸರು ಸೂಚನೆ ನೀಡಿದ್ದಾರೆ. ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಹರೇಕಳದಲ್ಲಿ ಟಿಪ್ಪು ಕಟೌಟ್ ಹಾಕಲಾಗಿತ್ತು.

ಫೆಬ್ರವರಿ 27ರಂದು ನಡೆಯಲಿರುವ ಡಿವೈಎಫ್ಐ 17ನೇ ರಾಜ್ಯ ಸಮ್ಮೇಳನದ ಪ್ರಯುಕ್ತ ಡಿವೈಎಫ್ಐ ಕಾರ್ಯಕರ್ತರು ಟಿಪ್ಪು ಕಟೌಟ್ ಹಾಕಿದ್ದರು. ಕಟೌಟ್ ಹಾಕುವಾಗ ಪೊಲೀಸ್ ಅನುಮತಿ ಪಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಟೌಟ್ ತೆರವು ಮಾಡುವಂತೆ ಕೊಣಾಜೆ ಠಾಣಾಧಿಕಾರಿ ಡಿವೈಎಫೈ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.

ಆದರೆ ತಾವು ಟಿಪ್ಪು ಪ್ರತಿಮೆ ತೆಗೆಯುವುದಿಲ್ಲ ಎಂದು ಡಿವೈಎಫ್‌ಐ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ಅನಧಿಕೃತವಾಗಿ ಹಾಕಿರುವ ಟಿಪ್ಪು ಕಟೌಟ್‌ ತೆಗೆಯದಿದ್ದರೆ ತಾವು ಪ್ರತಿಭಟನೆಗೆ ಇಳಿಯುವುದಾಗಿ ಹಿಂದೂ ಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.

ಸಂತ ಜೆರೋಸಾ ಶಾಲೆಯಲ್ಲಿ ಏನಾಗಿತ್ತು?

ಮಂಗಳೂರಿನ ಸಂತ ಜೆರೊಸಾ ಶಾಲೆಯ ಶಿಕ್ಷಕಿ ಪ್ರಭಾ ಅವರು ಪಾಠ ಮಾಡುವ ವೇಳೆ ಹಿಂದೂ ಧರ್ಮದ ಅವಹೇಳನ ಮಾಡಿದ್ದಾರೆ ಎಂಬ ಪ್ರಕರಣಕ್ಕೆ (Mangalore Issue) ಸಂಬಂಧಿಸಿ ಶಾಲೆಯ ಮುಖ್ಯೋಪಾಧ್ಯಾಯಿನಿ (Jerosa High School head Mistress) ಪತ್ರಿಕಾ ಪ್ರಕಟಣೆಯೊಂದನ್ನು ನೀಡಿದ್ದಾರೆ. ಇದರಲ್ಲಿ ಪ್ರಭಾ ಅವರು ಕ್ಲಾಸಿನಲ್ಲಿ ಮಾಡಿದ ಪಾಠ ಯಾವುದು, ಅದರಲ್ಲಿ ಅವರು ನೀಡಿದ ವಿವರಣೆ ಏನು ಮತ್ತು ಒಟ್ಟಾರೆ ಪ್ರಕರಣದಲ್ಲಿ ಶಾಸಕ ವೇದವ್ಯಾಸ ಕಾಮತ್‌ (MLA Vedavyasa Kamath) ಅವರ ಪಾತ್ರವೇನು ಎಂಬ ವಿವರಣೆಯನ್ನು ನೀಡಲಾಗಿದೆ.

ಘಟನೆಯ ಕುರಿತು ಪತ್ರಿಕಾ ಪ್ರಕಟನೆ ನೀಡಿದ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಅನಿತಾ ಅವರು, ಶಾಸಕ ವೇದವ್ಯಾಸ ಕಾಮತ್ ಅವರ ಮೇಲೆ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಠಾಗೋರ್‌ ಹಾಡಿನ ಪಾಠ ಮಾಡಿದ್ದರು ಶಿಕ್ಷಕಿ ಪ್ರಭಾ

ಶಿಕ್ಷಕಿ ಪ್ರಭಾ ಅವರು ಏಳನೇ ತರಗತಿಯ ಮಕ್ಕಳಿಗೆ ಶಾಲಾ ಪಠ್ಯದಲ್ಲೇ ಉಲ್ಲೇಖಿತವಾಗಿರುವ ರವೀಂದ್ರನಾಥ ಠಾಗೋರ್‌ ಅವರು ಬರೆದಿರುವ Work is Worship ಎಂಬ ಪಾಠವನ್ನು ಮಾಡಿದ್ದಾರೆ. ಇದೊಂದು ಗೀತೆಯಾಗಿದ್ದು ಅದರಲ್ಲಿ ಉಲ್ಲೇಖಿತವಾಗಿರುವ ಅಂಶಗಳನ್ನು ಆಧರಿಸಿಯೇ ಕೆಲವೊಂದು ವಿವರಣೆಗಳನ್ನು ನೀಡಿದ್ದಾರೆ ಎಂದು ಹಾಡಿನ ವಿವರಣೆಯನ್ನು ಪತ್ರಿಕಾ ಹೇಳಿಕೆಯಲ್ಲಿ ನೀಡಿದ್ದಾರೆ.

ದೇವಾಲಯ, ಚರ್ಚ್‌, ಮಸೀದಿಗಳೆಲ್ಲವೂ ಕೇವಲ ಕಟ್ಟಡಗಳು. ದೇವರು ವಾಸಿಸುವುದು ಮನುಷ್ಯನ ಹೃದಯಗಳಲ್ಲಿ. ಹೀಗಾಗಿ ದೇವರ ಹೆಸರಿನಲ್ಲಿ ಮನುಷ್ಯರನ್ನು ಕೊಲ್ಲುವುದು ಸರಿಯಲ್ಲ. ನಾವು ಕಾಯಕವನ್ನು ಗೌರವಿಸಬೇಕು. ಮತ್ತು ಮನುಷ್ಯರನ್ನು ಗೌರವಿಸಬೇಕು, ಅವರಲ್ಲಿ ದೇವರನ್ನು ಕಾಣಬೇಕು. ದೇವರು ಕಟ್ಟಡಗಳಲ್ಲಿ ವಾಸಿಸುವುದಿಲ್ಲ. ಮನುಷ್ಯನ ಹೃದಯಗಳಲ್ಲಿ ನೆಲೆಯಾಗಿರುತ್ತಾನೆ. ಹೀಗಾಗಿ ನಾವೆಲ್ಲರೂ ದೇವರ ಆಲಯಗಳು. ಇಷ್ಟೇ ವಿಚಾರಗಳನ್ನು ಶಿಕ್ಷಕಿ ಹೇಳಿದ್ದಾರೆ. ಯಾವುದೇ ಧರ್ಮವನ್ನು ಅವಹೇಳನ ಮಾಡಿಲ್ಲ, ಕವನದ ಅರ್ಥವನ್ನಷ್ಟೇ ಹೇಳಿದ್ದಾರೆ ಎಂದು ಮುಖ್ಯ ಶಿಕ್ಷಕಿ ಅನಿತಾ ಹೇಳಿದ್ದಾರೆ.

ಮುಖ್ಯ ಶಿಕ್ಷಕಿ ಅನಿತಾ ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಶಾಸಕ ವೇದವ್ಯಾಸ ಕಾಮತ್‌ ಅವರ ಮೇಲೆ ಹಲವು ಆರೋಪಗಳನ್ನು ಮಾಡಿದ್ದಾರೆ:

ಘಟನೆಯ ಸಂಬಂಧ ಶಿಕ್ಷಕಿ ವಿರುದ್ಧ ಒಬ್ಬ ಹೆತ್ತವರು ದೂರು ನೀಡಿದ್ದು ನಿಜ. ದೂರನ್ನು ಪರಿಶೀಲನೆ ಮಾಡೋದಾಗಿಯೂ ಹೇಳಿದ್ದೆ. ಆದರೆ, ಅಷ್ಟರಲ್ಲಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನೆಯಾಗಿತ್ತು.
ಶಿಕ್ಷಕಿ ಅನಿತಾ ಯಾವುದೇ ಧರ್ಮದ ಅವಹೇಳನದ ಪಾಠ ಮಾಡಿಲ್ಲ. ಆದರೆ, ಶಾಸಕ ವೇದವ್ಯಾಸ ಕಾಮತ್‌ ಅವರು ಶಿಕ್ಷಕಿ ಪ್ರಭಾ ಅವರನ್ನು ಅಮಾನತು ಮಾಡಲು ಒತ್ತಡ ಹೇರಿದರು.

ವೇದವ್ಯಾಸ ಕಾಮತ್ ಜೊತೆ ಶಾಲೆಯ ಬಳಿ ಬಂದ ಹಿಂದೂ ಕಾರ್ಯಕರ್ತರು ಶಾಲೆಯ ವಿರುದ್ಧ ಘೋಷಣೆ ಕೂಗಿದರು. ಶಾಸಕ ವೇದವ್ಯಾಸ ಕಾಮತ್ ಈ ಘೋಷಣೆಯ ನೇತೃತ್ವ ವಹಿಸಿಕೊಂಡಿದ್ದರು. ಅಲ್ಲಿ ಘೋಷಣೆ ಕೂಗಿದ ವಿದ್ಯಾರ್ಥಿಗಳು ಯಾರೂ ಆ ಪಾಠ ಮಾಡಿದಾಗ ಇದ್ದ ತರಗತಿಯ ವಿದ್ಯಾರ್ಥಿಗಳು ಅಲ್ಲ. ಶಿಕ್ಷಣಾಧಿಕಾರಿಗಳ ಸೂಚನೆಯಂತೆ ನಾವು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದೆವು. ಈ ವೇಳೆ ಶಾಸಕ ಕಾಮತ್ ಶಿಕ್ಷಕಿಯನ್ನು ವಜಾ ಮಾಡುವಂತೆ ಬೆದರಿಕೆ ಹಾಕಿದರು. ಶಾಸಕರ ಒತ್ತಡದ ಮೇರೆಗೆ ಶಿಕ್ಷಕಿ ವಜಾ ಆದೇಶವನ್ನು ನೀಡಿದ್ದೇವೆ.

ಶಿಕ್ಷಕಿ ಪ್ರಭಾ ಹದಿನಾರು ವರ್ಷಗಳಿಂದ ಪಾಠ ಮಾಡುತ್ತಿದ್ದಾರೆ. ಜೆರೊಸಾ ಶಾಲೆಯಲ್ಲಿ ಐದು ವರ್ಷದಿಂದ ಶಿಕ್ಷಕಿಯಾಗಿದ್ದಾರೆ. ಈವರೆಗೆ ಇಂತಹ ಪಾಠಗಳನ್ನು ಅವರು ಮಾಡಿಲ್ಲ. ಆಡಿಯೋ ವೈರಲ್ ಮಾಡಿದ ಹೆತ್ತವರ ಉದ್ದೇಶ ನಮ್ಮ ಶಾಲೆಯ ಹೆಸರನ್ನು ಹಾಳು ಮಾಡುವುದಾಗಿದೆ. ಈ ಹೆತ್ತವರು ಯಾವುದೇ ಲಿಖಿತ ದೂರನ್ನು ನೀಡಿಲ್ಲ. ಆಡಿಯೋ ಹರಿಬಿಟ್ಟು ಶಾಲೆಯ ಹೆಸರನ್ನು ಕೆಡಿಸಲು ನೋಡಿದ್ದಾರೆ.

ಇದನ್ನೂ ಓದಿ: Mangalore Issue : ಶಿಕ್ಷಕಿ ಪ್ರಕರಣಕ್ಕೆ ಟ್ವಿಸ್ಟ್‌; ಬಿಜೆಪಿ ಶಾಸಕರ ಮೇಲೆ ಜೆರೋಸಾ ಶಾಲೆ ಚಾರ್ಜ್‌ಶೀಟ್‌

Exit mobile version