ಮಂಗಳೂರು: ಉಡುಪಿ ಜಿಲ್ಲೆಯಲ್ಲಿ ಹುಟ್ಟಿದ ಹಿಜಾಬ್ ವಿವಾದ ಕರ್ನಾಟಕದಾದ್ಯಂತ ಹಬ್ಬಿ , ಕೋರ್ಟ್ ತೀರ್ಪಿನ ಬಳಿಕ ತಣ್ಣಗಾಗಿತ್ತು. ಆದರೆ ಮಂಗಳೂರು ಯೂನಿವರ್ಸಿಟಿ ಕಾಲೇಜಿನಲ್ಲಿ ಮತ್ತೆ ವಿವಾದ ಭುಗಿಲೆದ್ದಿದೆ. ಕಾಲೇಜಿನ ಕ್ಯಾಂಪಸ್ ಒಳಗೆ 12 ವಿದ್ಯಾರ್ಥಿಗಳು ಸೋಮವಾರ ಹಿಜಾಬ್ ಧರಿಸಿ ಬಂದ ಕಾರಣ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ವಾಪಸ್ ಕಳಿಸಿದ್ದಾರೆ. ಜಿಲ್ಲಾಧಿಕಾರಿ ಜತೆ ಸಭೆ ನಡೆದರೂ ವಿದ್ಯಾರ್ಥಿನಿಯರು ಬಗ್ಗಲಿಲ್ಲ.
12 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದರು. ಎಲ್ಲರನ್ನೂ ಪ್ರಾಂಶುಪಾಲೆ ಅನುಸೂಯ ರೈ ತಡೆದರು. ಹೈಕೋರ್ಟ್ ಆದೇಶ ಹಾಗೂ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ತರಗತಿಗೆ ಪ್ರವೇಶ ನೀಡಲು ಅವಕಾಶ ಇಲ್ಲ ಎಂದು ತಿಳಿಸಿದರು. ನಂತರ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡುವುದಾಗಿ ತೆರಳಿದರು.
ಇದನ್ನೂ ಓದಿ | ಮತ್ತೆ ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು
ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಯೂನಿವರ್ಸಿಟಿ ಕಾಲೇಜಿನ ಪ್ರಾಂಶುಪಾಲರೂ ಇಲ್ಲಿಗೆ ಆಗಮಿಸಿದರು. ಕೆಲ ಹೊತ್ತು ವಿದ್ಯಾರ್ಥಿನಿಯರ ಸಮಸ್ಯೆಯನ್ನು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಆಲಿಸಿದರು ಹಾಗೂ ಮಾತುಕತೆ ನಡೆಸಿದರು.
ಚರ್ಚೆಯ ನಂತರ ಮಾತನಾಡಿದ ಜಿಲ್ಲಾಧಿಕಾರಿ, ವಿದ್ಯಾರ್ಥಿನಿಯರು ಹಿಜಾಬ್ ಧರಿಸಲೇಬೇಕು. ಸಿಡಿಸಿ ಸಭೆಯಲ್ಲಿ ಈ ಕುರಿತು ನಿರ್ಣಯ ಆಗಿದೆ. ಸಿಡಿಸಿ ನಿರ್ಣಯವನ್ನು ನಾನು ಬದಲಾಯಿಸುವಂತಿಲ್ಲ. ನೀವು ಹಿಜಾಬ್ ಧರಿಸಿ ತರಗತಿಗೆ ಹಾಜರಾಗಿ. ಹಿಜಾಬ್ ವಿಚಾರದಲ್ಲಿ ಶಿಕ್ಷಣ ಹಾಳಾಗದಿರಲಿ. ಎಲ್ಲರೂ ತರಗತಿಗೆ ಹಾಜರಾಗುವಂತೆ ಸಲಹೆ ನೀಡಿದರು. ಆದರೆ ತಾವು ಹಿಜಾಬ್ ಧರಿಸಿಯೇ ತರಗತಿಗೆ ಹಾಜರಾಗುತ್ತೇವೆ ಎನ್ನುತ್ತ ವಿದ್ಯಾರ್ಥಿನಿಯರು ಡಿಸಿ ಕಚೇರಿಯಿಂದ ಹೊರನಡೆದರು.
ಇದನ್ನೂ ಓದಿ| ಹಿಜಾಬ್ ವಿವಾದ: ಮಂಗಳೂರು ವಿವಿ ಉಪಕುಲಪತಿ ನೇತೃತ್ವದಲ್ಲಿ ಸಭೆ