ಉಡುಪಿ: ಕರಾವಳಿಯ ಹೆಮ್ಮೆಯ ಜಾನಪದ ಕಲೆ ಯಕ್ಷಗಾನಕ್ಕೆ ಶತಶತಮಾನಗಳ ಇತಿಹಾಸವಿದೆ. ಇದನ್ನು ಆರಾಧನಾ ಕಲೆಯೆಂದೇ ಕರೆಯಲಾಗುತ್ತದೆ. ಈ ಯಕ್ಷಗಾನ ಕಲಾವಿದರು ಮನೆ ಮನೆಗೆ ಹೋಗಿ ಯಕ್ಷಗಾನ ಪ್ರದರ್ಶನ ಮಾಡುತ್ತಾ ಕಲೆಯನ್ನು ಪ್ರಸಾರ ಮಾಡು ಜತೆಗೆ ಜೀವನೋಪಾಯವನ್ನೂ ಕಂಡುಕೊಂಡಿದ್ದಾರೆ.
ವರ್ಷದ ಮಳೆಗಾಲವನ್ನು ಹೊರತುಪಡಿಸಿ ನವೆಂಬರ್‌ನಿಂದ ಮೇ ವರೆಗೂ ಉಡುಪಿ ಜಿಲ್ಲೆಗಳಲ್ಲಿ ಸುಮಾರು 40ಕ್ಕೂ ಹೆಚ್ಚು ಮೇಳಗಳು ತಿರುಗಾಟ ನಡೆಸುತ್ತವೆ. ಸುಮಾರು 600 ಕಲಾವಿದರು ಈ ಕಲೆಯನ್ನು ನಂಬಿ ಜೀವನ ನಡೆಸುತ್ತಾರೆ.
ಆದರೆ ಮಳೆಗಾಲದಲ್ಲಿ ಕಲಾವಿದರ ಜೀವನ ನಿರ್ವಹಣೆ ಕಷ್ಟವೇ ಸರಿ. ಈ ಕಾರಣದಿಂದ ಮಳೆಗಾಲದಲ್ಲಿ ಚಿಕ್ಕ ಮೇಳಗಳು ತಿರುಗಾಟ ನಡೆಸುತ್ತಿವೆ.
4 ಅಥವಾ 5 ಜನ ಕಲಾವಿದರು ಮನೆಮನೆಗೆ ತೆರಳಿ ಅಲ್ಪ ಅವಧಿಯ ಯಕ್ಷಗಾನ ಸೇವೆ ಸಲ್ಲಿಸುತ್ತಿದ್ದಾರೆ. ಈ ಮೂಲಕ ಮನೆ ಮಕ್ಕಳಿಗೆ ಯಕ್ಷಗಾನದ ಅರಿವು ಮೂಡಿಸುವ ಕಾರ್ಯವೂ ನಡೆಯುತ್ತಿದೆ. ಇದನ್ನು ಗೆಜ್ಜೆ ಸೇವೆ ಎಂದೂ ಕರೆಯಲಾಗುತ್ತದೆ. ಒಂದು ಊರಿನ ಹಲವು ಮನೆಗಳಿಗೆ ತೆರಳಿ ಚಿಕ್ಕ ಮೇಳ ಬರುವ ಸಮಯವನ್ನು ಮೊದಲೇ ತಿಳಿಸಲಾಗುತ್ತದೆ.
ದಿನದಲ್ಲಿ ಸಂಜೆ 7ರಿಂದ ರಾತ್ರಿ 10ರ ತನಕ ಚಿಕ್ಕ ಮೇಳಗಳು ತಿರುಗಾಟ ನಡೆಸುತ್ತವೆ. ಮನೆಗೆ ಬಂದ ಕಲಾ ತಂಡವನ್ನು ಮನೆಯವರು ಸ್ವಾಗತಿಸುತ್ತಾರೆ. ಹೂ ಹಣ್ಣು ಅಕ್ಕಿ ತೆಂಗಿನಕಾಯಿ ಮತ್ತು ದೀಪ ಇಟ್ಟು ಪ್ರಾರ್ಥನೆ ಸಲ್ಲಿಸಿ, ಯಾವುದಾದರೂ ಒಂದು ಪ್ರಸಂಗದ ಚಿಕ್ಕ ಬಾಗವನ್ನು ಮನೆಯಲ್ಲಿ ಪ್ರದರ್ಶಿಸುತ್ತಾರೆ. ಒಂದು ಸ್ತ್ರೀ ವೇಷ ಇನ್ನೊಂದು ಪುರುಷ ವೇಷ ಧಾರಿ ಮತ್ತು ಹಿಮ್ಮೇಳದ ಇಬ್ಬರು ಕಲಾವಿದರು ತಂಡದಲ್ಲಿರುತ್ತಾರೆ.
ಪ್ರತಿ ಮನೆಯಲ್ಲೂ ಕಲಾವಿದರಿಗೆ ಕಾಣಿಕೆ ನೀಡಲಾಗುತ್ತದೆ. ಈ ಮೂಲಕ ಮಳೆಗಾಲದಲ್ಲಿ ಯಕ್ಷ ಸೇವೆಯ ಜೊತೆ ತನ್ನ ಬದುಕಿನ ನಿರ್ವಹಣೆಯನ್ನು ಕಲಾವಿದರು ಕಂಡುಕೊಳ್ಳುತ್ತಿದ್ದಾರೆ ಎಂದು ಯಕ್ಷಗಾನ ಕಲಾವಿದ ಮಂಜುನಾಥ್ ಶೆಟ್ಟಿ ಹೇಳಿದ್ದಾರೆ.
ಇದನ್ನೂ ಓದಿ: ಯಕ್ಷಗಾನದಲ್ಲಿ ವಿನೂತನ ಪ್ರಯೋಗ: ಮಕ್ಕಳಿಗೆ ಯಕ್ಷಗಾನದ ಮೂಲಕ ಗಣಿತ ಕಲಿಕೆ