ಮಂಗಳೂರು: ಕೇರಳಕ್ಕೆ ಪ್ರವಾಸಕ್ಕೆ (Kerala Tour) ತೆರಳಿದ್ದ ದಕ್ಷಿಣ ಕನ್ನಡದ ಪುತ್ತೂರಿನ ಯುವಕನೊಬ್ಬ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾನೆ (Youngster drowned). ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ (Uppinangadi near Mangalore) ಹಿರೇಬಂಡಾಡಿ ನಿವಾಸಿ ಮಹಮ್ಮದ್ ಅಝೀಮ್ (21) ಮೃತ ಯುವಕ.
ಹಿರೇಬಂಡಾಡಿ ನಿವಾಸಿ ಮಹಮ್ಮದ್ ಅಝೀಮ್ (21) ಮತ್ತು ಇತರ ನಾಲ್ವರು ಮಂದಿ ಸೇರಿ ಕೇರಳಕ್ಕೆ ಪ್ರವಾಸಕ್ಕೆ ತೆರಳಿದ್ದರು. ಕೇರಳದಲ್ಲಿ ಸುತ್ತಾಡುತ್ತಾ ಅವರು ಕಣ್ಣೂರಿನ ಕಡಂಬೆರಿ ತಲುಪಿದ್ದರು.
ಅಲ್ಲಿ ಕಡಂಬೆರಿಯಲ್ಲಿ ನೀರಿನಲ್ಲಿ ಈಜಲೆಂದು ತೆರಳಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಐವರಲ್ಲಿ ಇಬ್ಬರು ನೀರಿಗೆ ಇಳಿದಿದ್ದು, ನೀರಿನ ಆಳ ತಿಳಿಯದೆ ಈಜಲೂ ಆಗದೆ ಅಪಾಯಕ್ಕೆ ಸಿಲುಕಿದರು. ಇಬ್ಬರಿಗೂ ಉಸಿರುಗಟ್ಟಲು ಆರಂಭವಾದಾಗ ಸ್ಥಳೀಯರು ಒಬ್ಬನನ್ನು ಮೇಲೆತ್ತಿ ಹಾಕಿದರು. ಆತ ಬಚಾವಾಗಿದ್ದಾನೆ. ಅಜೀಮ್ ಮೃತಪಟ್ಟಿದ್ದಾನೆ. ಇದೀಗ ಮೃತದೇಹವನ್ನು ತರಲು ಮನೆಯವರು ಮತ್ತು ಸ್ನೇಹಿತರು ತೆರಳಿದ್ದಾರೆ.
ಗಣಪತಿ ವಿಸರ್ಜನೆ ಮಾಡುವಾಗ ನೀರಲ್ಲಿ ಮುಳುಗಿ ಬಾಲಕ ಸಾವು
ಚಿಕ್ಕಬಳ್ಳಾಪುರ : ಇಲ್ಲಿನ ಚಿಕ್ಕಕಾಡಿಗೇನಹಳ್ಳಿ ಗ್ರಾಮದಲ್ಲಿರುವ ಶ್ರೀರಾಮಕುಂಟೆ ಹಳ್ಳದಲ್ಲಿ (Drowned) ಗಣಪತಿ ವಿಸರ್ಜನೆ (Ganesha chathurthi) ಮಾಡಲು ಹೋಗಿ ಬಾಲಕ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಕಡಶೀಗೇನಹಳ್ಳಿ ಗ್ರಾಮದ ನಿಶಾಲ್ ತೇಜ್ (12) ಮೃತ ಬಾಲಕ.
ಸೆ.29ರಂದು ಸ್ನೇಹಿತರೊಂದಿಗೆ ನಿಶಾಲ್ ತೇಜ್ ಗಣಪತಿ ವಿಸರ್ಜನೆಗೆ ತೆರಳಿದ್ದ. ಈ ವೇಳೆ ಗಣೇಶ ವಿಸರ್ಜನೆ ಮಾಡುವ ಉತ್ಸಾಹದಲ್ಲಿ ಹಳ್ಳದ ಆಳ ಅರಿಯದೇ ನೀರಿಗೆ ಇಳಿದಿದ್ದಾನೆ. ಆದರೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಮೃತಪಟ್ಟಿದ್ದಾನೆ. ಆತನ ಮೃತದೇಹವು ಕೂಗಳತೆ ದೂರದಲ್ಲಿ ಪತ್ತೆಯಾಗಿದೆ.
ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ನಂದಿಗಿರಿಧಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: Sullia Murder : ಕೆವಿಜಿ ಪ್ರಿನ್ಸಿಪಾಲ್ ರಾಮಕೃಷ್ಣ ಕೊಲೆ ಕೇಸ್; ರೇಣುಕಾಪ್ರಸಾದ್ ಸೇರಿ 6 ಮಂದಿಗೆ ಮತ್ತೆ ಸಂಕಷ್ಟ
ಆಟವಾಡುವಾಗ ಕಾಲು ಜಾರಿ ನಾಲೆಗೆ ಬಿದ್ದ ಬಾಲಕಿ ದಾರುಣ ಸಾವು
ಹಾಸನ: ಇಲ್ಲಿನ ಅರಕಲಗೂಡು ತಾಲ್ಲೂಕಿನ ಮಧುರನಹಳ್ಳಿ ಗ್ರಾಮದಲ್ಲಿ ಸ್ನೇಹಿತರೊಂದಿಗೆ ಆಟವಾಡುವಾಗ ಬಾಲಕಿ ಕಾಲು ಜಾರಿ ನಾಲೆ ಬಿದ್ದು (Drowned In Canal) ಮೃತಪಟ್ಟಿರುವ ಘಟನೆ ನಡೆದಿದೆ. ಸುಪ್ರೀತಾ (5) ಮೃತ ದುರ್ದೈವಿ.
ಗ್ರಾಮದ ರೇವಣ್ಣ-ಭಾಗ್ಯ ದಂಪತಿ ಪುತ್ರಿ ಸುಪ್ರೀತಾ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇತ್ತು. ಹೀಗಾಗಿ ಗ್ರಾಮದ ಸಮೀಪವಿರುವ ನಾಲೆಯ ಬಳಿ ಸ್ನೇಹಿತರೊಂದಿಗೆ ಸುಪ್ರೀತಾ ಆಟವಾಡುತ್ತಿದ್ದಳು. ಈ ವೇಳೆ ಅಚಾನಕ್ ಆಗಿ ಕಾಲುಜಾರಿ ನಾಲೆಗೆ ಬಿದ್ದಿದ್ದಾಳೆ. ನಾಲೆಯಲ್ಲಿ ಹರಿಯುತ್ತಿದ್ದ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾಳೆ.
ಹಾರಂಗಿ ಬಲದಂಡೆ ನಾಲೆಯಲ್ಲಿ ಮುಳುಗಿರುವ ಬಾಲಕಿ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಈಗಾಗಲೇ ಅಗ್ನಿಶಾಮಕ ದಳದ ಸಿಬ್ಬಂದಿ 6 ಕಿ.ಮೀವರೆಗೂ ಶೋಧಕಾರ್ಯ ನಡೆಸಿದ್ದಾರೆ. ಆದರೆ ಮೃತದೇಹವು ಪತ್ತೆಯಾಗಿಲ್ಲ. ಹಳ್ಳಿ ಮೈಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.