ಬೆಂಗಳೂರು: ರಾಜ್ಯದಲ್ಲಿ ಮಳೆಯ ಅಬ್ಬರ (Rain News) ಸ್ವಲ್ಪ ಕಡಿಮೆಯಾದರೂ ಹಾನಿ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಸೋಮವಾರವೂ ವಿವಿಧೆಡೆ ರಸ್ತೆಗಳು ಕುಸಿದಿದ್ದರಿಂದ ಸಂಚಾರಕ್ಕೆ ಅಡಚಣೆಯಾಯಿತು. ಇನ್ನು ಕೆಲವೆಡೆ ಗಾಳಿ, ಮಳೆಯಿಂದ ಮನೆಗಳು ಕುಸಿದು ಜನಜೀವನ ಅಸ್ತವ್ಯಸ್ತವಾಗಿದೆ. ಹಾಗೆಯೇ ಆಕಸ್ಮಿಕವಾಗಿ ನದಿಗೆ ಬಿದ್ದು ಕೊಚ್ಚಿಹೋದವರ ಮೃತದೇಹಗಳು ಪತ್ತೆಯಾಗಿವೆ. ರಾಜ್ಯದ
ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಉರುಳಿದ ತಡೆಗೋಡೆ
ಚಿಕ್ಕಮಗಳೂರು: ಭಾರಿ ಮಳೆಯಿಂದ ಚಿಕ್ಕಮಗಳೂರು ತಾಲೂಕಿನ ಅರೇನೂರು ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಮರ ಧರೆಗುರುಳಿದೆ. ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ರಸ್ತೆ ಮೇಲೆ ಮರ ಬಿದ್ದಿದ್ದರಿಂದ ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ವಾಹನ ಸಂಚಾರಕ್ಕೆ ತೊಂದರೆಯಾಯಿತು. ಮಳೆಯ ನಡುವೆ ಸ್ಥಳೀಯರು ಮರ ತೆರವು ಕಾರ್ಯಾಚರಣೆ ನಡೆಸಿ ಸಂಚಾರಕ್ಕೆ ಅನುವು ಮಾಡಿದರು. ಇನ್ನು ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಬಳಿ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ತಡೆಗೋಡೆ ಕುಸಿದಿದೆ.
ಪ್ರವಾಹದಲ್ಲಿ ಕೊಚ್ಚಿಹೋದ ವ್ಯಕ್ತಿಗಾಗಿ ಮುಂದುವರಿದ ಹುಡುಕಾಟ
ರಾಯಚೂರು: ತುಂಗಭದ್ರಾ ನದಿ ಪ್ರವಾಹದಲ್ಲಿ ಕೊಚ್ಚಿಹೋದ ವ್ಯಕ್ತಿಗಾಗಿ ಎರಡನೇ ದಿನ ಸೋಮವಾರವೂ ಶೋಧನಾ ಕಾರ್ಯ ಮುಂದುವರಿಯಿತು. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮುಕ್ಕುಂದಾ ಗ್ರಾಮದ ನಿಂಗಪ್ಪ ಪೂಜಾರಿ (55) ಎಂಬುವವರು ಮಡಿ ಸ್ನಾನಕ್ಕೆ ಮಾಡಲು ಹೋಗಿ ಭಾನುವಾರ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಹೀಗಾಗಿ ಎನ್‌ಡಿಆರ್‌ಎಫ್ ತಂಡ ಶೋಧಕಾರ್ಯ ನಡೆಸುತ್ತಿದ್ದು, ಸಿಂಧನೂರು ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕಾಲು ಜಾರಿ ತುಂಗೆಗೆ ಬಿದ್ದ ವ್ಯಕ್ತಿ ಮೃತದೇಹ ಪತ್ತೆ
ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಮಾಳೂರು ಸಮೀಪ ಶವ ಪತ್ತೆಯಾಗಿದೆ. ಮಾಳೂರು ಗ್ರಾಮದ ಅನ್ಸರ್ (48) ಮೃತರು. ಮೂರು ದಿನದ ಹಿಂದೆ ಇವರು ಕಾಲು ಜಾರಿ ತುಂಗಾ ನದಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.
ನೀರುಪಾಲಾಗಿದ್ದ ಯುವಕನ ಮೃತದೇಹ ಪತ್ತೆ
ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ನೀರಸಾಗರ ಜಲಾಶಯದ ಬಳಿ ಭಾನುವಾರ ಸೆಲ್ಫಿ ತೆಗೆದುಕೊಳ್ಳಲು ಹೋಗಿ ನೀರುಪಾಲಾಗಿದ್ದ ಯುವಕನ ಮೃತದೇಹ ಪತ್ತೆಯಾಗಿದೆ. ಕಲಘಟಗಿ ತಾಲೂಕಿನ ಬೇಗೂರು ಗ್ರಾಮದ ನಿವಾಸಿ ಕಿರಣ ರಜಪೂತ (22) ಗೆಳೆಯರೊಡನೆ ಪ್ರವಾಸಕ್ಕೆಂದು ಹೋಗಿದ್ದಾಗ ಕೆರೆ ಕೋಡಿಬಿದ್ದ ಜಾಗದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ನೀರಲ್ಲಿ ಕೊಚ್ಚಿಹೋಗಿದ್ದ. ಕಲಘಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಲೆಗಳಿಗೆ ರಜೆ ಘೋಷಣೆ
ಚಿತ್ರದುರ್ಗ: ಧಾರಾಕಾರ ಮಳೆಯಾಗುತ್ತಿರುವುದರಿಂದ ಸೋಮವಾರ ಒಂದು ದಿನದ ಮಟ್ಟಿಗೆ ಹೊಸದುರ್ಗ ತಾಲೂಕಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಡಿಸಿ ಕವಿತಾ ಮನ್ನಿಕೇರಿ ಸೋಮವಾರ ರಜೆ ಘೋಷಿಸಿದ್ದರು. ನಿರಂತರ ಮಳೆ ಹಿನ್ನೆಲೆಯಲ್ಲಿ ತುರ್ತು ರಜೆ ಘೋಷಿಸುವಂತೆ ಸ್ಥಳೀಯರು ಮನವಿ ಮಾಡಿದ್ದರು. ಹೀಗಾಗಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಿಸಿತ್ತು.
ಇದನ್ನೂ ಓದಿ | Rain News | ಕೇಂದ್ರಕ್ಕೆ ಕಾಯದೇ ಮಳೆ ಹಾನಿ ಪರಿಹಾರ ಕೊಡುತ್ತೇವೆ; ಸಚಿವ ಆರ್.ಅಶೋಕ್
ಕೊಡಗು ಜಿಲ್ಲೆಯಲ್ಲಿ ಮನೆ ಕುಸಿತ
ಕೊಡಗು: ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಗಾಳಿ, ಮಳೆಗೆ ವಿವಿಧೆಡೆ ಮನೆಗಳು ಕುಸಿದು ಬಿದ್ದಿವೆ. ಮೂಡಲಕೊಪ್ಪಲು ಗ್ರಾಮದ ಚಂದ್ರಪ್ಪ ಅವರ ಮನೆ ಕುಸಿದಿದ್ದು, ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
175 ಮನೆಗಳಿಗೆ ಹಾನಿ
ದಾವಣಗೆರೆ: ನಿರಂತರ ಮಳೆಗೆ ಜಿಲ್ಲೆಯಲ್ಲಿ ಜು.1ರಿಂದ ಜುಲೈ 18ರವೆರೆಗೆ 175 ಮನೆಗಳು ಕುಸಿದಿದ್ದು, ಮೂರು ಸೇತುವೆಗಳಿಗೆ ಹಾನಿಯಾಗಿದೆ. ಸೋಮವಾರ ಚನ್ನಗಿರಿ ತಾಲೂಕಿನ ಗೆದ್ಲಟ್ಟಿ ಗ್ರಾಮದ ನಲ್ಲೂರ ಹಾಲೇಶ ಎಂಬುವವರ ಮನೆ ಸಂಪೂರ್ಣ ಕುಸಿದಿದೆ. ಮಳೆ ನಿಂತ ಬಳಿವೂ ಮನೆಗಳು ಬೀಳುವ ಆತಂಕದಲ್ಲಿ ಇಲ್ಲಿನ ಜನರಿದ್ದಾರೆ. ಹೀಗಾಗಿ ವಿವಿಧ ಇಲಾಖೆಗಳ ಆಶ್ರಯದಲ್ಲಿ ಜಂಟಿ ಸಮೀಕ್ಷೆಗೆ ಜಿಲ್ಲಾಡಳಿತ ಮುಂದಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ 775 ಮನೆಗಳ ಹಾನಿ
ಬೆಳಗಾವಿ: ಜಿಲ್ಲೆಯಲ್ಲಿ ವರುಣನ ಅಬ್ಬರಕ್ಕೆ ಜೂನ್ 1 ರಿಂದ ಜುಲೈ 18 ರವರೆಗೆ 775 ಮನೆಗಳಿಗೆ ಹಾನಿಯಾಗಿದೆ. ಮಳೆಗೆ ಜಿಲ್ಲೆಯಲ್ಲಿ ಮೂರು ಮನೆಗಳು ಸಂಪೂರ್ಣ ನೆಲಸಮವಾಗಿದ್ದು, 108 ಮನೆಗಳಿಗೆ ತೀವ್ರ ಹಾನಿ, 667 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಸವದತ್ತಿ- 191, ಬೈಲಹೊಂಗಲ- 112, ಕಿತ್ತೂರು- 99, ರಾಮದುರ್ಗ- 92, ಚಿಕ್ಕೋಡಿ- 89, ಬೆಳಗಾವಿ ತಾಲೂಕಿನಲಿ 42 ಮನೆಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಮಾಹಿತಿ ನೀಡಿದ್ದಾರೆ. ಹಾಗೆಯೇ ಮಳೆಯಿಂದ ಕುಸಿದ ಮನೆಗಳ ಸಮಗ್ರ ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ದೇವಸ್ಥಾನಕ್ಕೆ ಜಲಕಂಟಕ
ಯಾದಗಿರಿ: ಕೃಷ್ಣಾ ನದಿ ತೀರದಲ್ಲಿರುವ ಛಾಯಾ ಭಗವತಿ ದೇವಸ್ಥಾನಕ್ಕೆ ಜಲಕಂಟಕ ಎದುರಾಗಿದೆ. ನಾರಾಯಣಪುರದ ಬಸವಸಾಗರ ಜಲಾಶಯದಿಂದ ಭಾರಿ ಪ್ರಮಾಣದ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ನದಿ ತೀರದಲ್ಲಿರುವ ದೇವಸ್ಥಾನ ಜಲಾವೃತವಾಗಿದೆ. ಮುಂಜಾಗ್ರತೆ ಭಾಗವಾಗಿ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಆದರೂ ಜನರು ದೇವರ ದರ್ಶನ ಪಡೆಯಲು ಬರುತ್ತಿದ್ದಾರೆ..
ಗ್ರಾಮಗಳ ಸಂಪರ್ಕ ಕಡಿತ
ಚಿಕ್ಕಮಗಳೂರು: ಧಾರಾಕಾರ ಮಳೆಯಿಂದ ಜಿಲ್ಲೆಯಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಮಳೆಯಿಂದ ಜಲಾವೃತವಾಗಿ ತ್ಯಾಗದಬಾಗಿ ತಾಂಡ್ಯ-ಸಿದ್ದಾಪುರ ನಡುವಿನ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ಕಳೆದ ಮೂರು ದಿನಗಳಿಂದ ಕಡಿತಗೊಂಡಿರುವ ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು, ಶಾಲಾ-ಕಾಲೇಜುಗಳಿಗೆ ಹೋಗಲಾರದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಹಲವೆಡೆ ಗುಡ್ಡ ಕುಸಿತ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ-ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಹಲವೆಡೆ ಗುಡ್ಡ ಕುಸಿತವಾಗಿದೆ. ಬಂಟ್ವಾಳದ ಹಳೇಗೇಟು, ವಗ್ಗ ಬಳಿ ಗುಡ್ಡ ಕುಸಿತವಾಗಿದ್ದರಿಂದ ರಸ್ತೆಗೆ ಬಂಡೆ ಮತ್ತು ಮರಗಳು ಬಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ಹೀಗಾಗಿ ಬ್ಯಾರಿಕೇಡ್ ಹಾಕಿ ಅರ್ಧ ರಸ್ತೆಯಲ್ಲಿ ಸಂಚಾರ ಮಾಡಲು ಅನುವು ಮಾಡಿಕೊಟ್ಟಿದ್ದಾರೆ.
ಶಿರಾಡಿ ಘಾಟ್ ಬಂದ್ ಆಗಿರುವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲೇ ಹೆಚ್ಚು ವಾಹನಗಳು ಸಂಚರಿಸುತ್ತಿವೆ. ಅದೇ ರೀತಿ ಸುಳ್ಯ ತಾಲೂಕಿನ ಗೂನಡ್ಕ ಬಳಿ ಮಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಗುಡ್ಡ ಕುಸಿತವಾಗಿದೆ. ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ದೊಡ್ಡ ಮರಗಳು ಇರುವ ಗುಡ್ಡ ಇನ್ನಷ್ಟು ಕುಸಿಯುವ ಆತಂಕ ಎದುರಾಗಿದೆ. ಚಾರ್ಮಾಡಿ ಘಾಟ್‌ನ ಎರಡನೇ ತಿರುವಿನಲ್ಲಿ ರಸ್ತೆಯಲ್ಲಿ ಸಣ್ಣ ಬಿರುಕು ಮೂಡಿದೆ. ಭಾರಿ ಪ್ರಪಾತದ ಮೇಲ್ಭಾಗದಲ್ಲಿರುವ ಕಿರು ಸೇತುವೆಯ ಬಳಿ ರಸ್ತೆಯ ಕಿರು ಸೇತುವೆ ಬಳಿ ರಸ್ತೆ ಕುಸಿದಿದ್ದು, ಸದ್ಯ ಬ್ಯಾರಿಕೇಡ್ ಇಟ್ಟು ಕುಸಿದ ಜಾಗದಲ್ಲಿ ವಾಹನ ಸಂಚರಿಸದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಸಕಲೇಶಪುರ ತಾಲೂಕಿನಲ್ಲಿ ಶಾಲೆ ಗೋಡೆ ಕುಸಿತ
ಹಾಸನ: ಭಾರಿ ಮಳೆಯಿಂದ ಜಿಲ್ಲೆ ಸಕಲೇಶಪುರ ತಾಲೂಕಿನ ಚಿನ್ನಹಳ್ಳಿ ಗ್ರಾಮದಲ್ಲಿ ಬೆಳಗ್ಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿ ಗೋಡೆ ಕುಸಿದಿದೆ. ಮುಂಜಾನೆ ಮಕ್ಕಳು ಶಾಲೆಗೆ ಬರುವ ಮೊದಲೇ ಗೋಡೆ ಕುಸಿದಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಒಂದು ವಾರದ ರಜೆ ಬಳಿಕ ತಾಲೂಕಿನಲ್ಲಿ ಶಾಲೆಗಳು ಸೋಮವಾರ ಆರಂಭವಾಗಿದ್ದವು. ಶೀಘ್ರವಾಗಿ ಶಾಲಾ ಕೊಠಡಿ ದುರಸ್ತಿ ಮಾಡುವಂತೆ ಪಾಲಕರು ಮನವಿ ಮಾಡಿದ್ದಾರೆ. ಇನ್ನು ಮಳೆಗೆ ಸಕಲೇಶಪುರ ತಾಲೂಕಿನ ಹಾಲೇಬೇಲೂರು ಗ್ರಾಮದಲ್ಲಿ ಕೆರೆ ಏರಿ ಕುಸಿದಿದೆ. ತಾತ್ಕಾಲಿಕವಾಗಿ ಪ್ಲಾಸ್ಟಿಕ್ ಟಾರ್ಪಲ್ ಮುಚ್ಚಿ ಏರಿ ಕುಸಿಯದಂತೆ ಜನರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.
421 ಮನೆಗಳಿಗೆ ಹಾನಿ: ಹಾಸನ ಜಿಲ್ಲೆಯಲ್ಲಿ ಜೂ.1 ರಿಂದ ಜುಲೈ 18ರವರೆಗೆ 421 ಮನೆಗಳಿಗೆ ಹಾನಿಯಾಗಿದೆ. 28 ಮನೆಗಳು ಸಂಪೂರ್ಣ ಕುಸಿದಿದ್ದು, 218 ಮನೆಗಳಿಗೆ ಭಾಗಶಃ ಹಾನಿ, 175 ಮನೆಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ. ಈ ಕುಟುಂಬಗಳಿಗೆ ಎನ್‌ಡಿಆರ್‌ಎಫ್ ನಿಧಿಯಿಂದ ಪರಿಹಾರ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಮಾಹಿತಿ ನೀಡಿದ್ದಾರೆ.
ಮಳೆಯಿಂದ ರಾಜ್ಯ ಹಾಗೂ ಜಿಲ್ಲಾ ಹೆದ್ದಾರಿಗಳಿಗೆ ಹಾಳಾಗಿದ್ದು, ಅವುಗಳ ದುರಸ್ತಿ ಕಾರ್ಯ ಮಾಡಲಾಗುತ್ತಿದೆ.
ಎನ್‌ಎಚ್ 75 ಶಿರಾಡಿಘಾಟ್ ರಸ್ತೆಯಲ್ಲಿ ಭೂಕುಸಿತವಾದ ಕಾರಣ ಎಲ್ಲ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿದೆ. ಲಘು ವಾಹನಗಳನ್ನು ಚಾರ್ಮಾಡಿಘಾಟ್, ಸಂಪಾಜೆ ಮೂಲಕ ತೆರಳಲು ಸೂಚಿಸಿದ್ದೇವೆ. ಮಳೆ ನಿರಂತರವಾಗಿ ಬರುತ್ತಿರುವುದರಿಂದ ದುರಸ್ತಿ ಕಾರ್ಯ ಕಷ್ಟವಾಗುತ್ತಿದೆ. ಮಳೆ ಕಡಿಮೆಯಾದರೆ ಇನ್ನೊಂದು ವಾರದಲ್ಲಿ ಶಿರಾಡಿ ಘಾಟ್‌ನಲ್ಲಿ ಸಂಚಾರ ಆರಂಭಿಸುತ್ತೇವೆ ಎಂದು ತಿಳಿಸಿದ್ದಾರೆ.
ಮಳೆಯಿಂದ ಜಿಲ್ಲೆಯಲ್ಲಿ 224 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಕಳೆದ ಎರಡು ದಿನಗಳಿಂದ ಕಾಫಿ ಬೆಳೆಗೆ ಹಾನಿಯಾಗುತ್ತಿದೆ, ಕಾಫಿ ಮಂಡಳಿ ಅಧಿಕಾರಿಗಳಿಗೆ ವರದಿ ಕೊಡಲು ಹೇಳಿದ್ದೇನೆ. ವರದಿ ಆಧರಿಸಿ ಅವರಿಗೂ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ಕುಸಿಯುವ ಹಂತದಲ್ಲಿ ಕೊಡಗು ಜಿಲ್ಲಾಡಳಿತ ಕಚೇರಿಯ ತಡೆಗೋಡೆ; ರಾಷ್ಟ್ರೀಯ ಹೆದ್ದಾರಿ 275 ಬಂದ್