ವಿಜಯನಗರ: ಜಿಲ್ಲೆಯಲ್ಲಿ ಮೂರ್ನಾಲ್ಕು ದಿನಗಳಿಂದ ಸುರಿಯತ್ತಿರುವ ನಿರಂತರ ಮಳೆ (Rain News) ಅಪಾರ ಹಾನಿಯನ್ನುಂಟುಮಾಡಿದೆ. ವಿವಿಧೆಡೆ ಮನೆಗಳಿಗೆ ನೀರು ನುಗ್ಗಿದ್ದು ಜನರು ಪರದಾಡಿದ್ದು, ಜಮೀನುಗಳು ಜಲಾವೃತವಾಗಿದ್ದರಿಂದ ಅಪಾರ ಪ್ರಮಾಣದ ವಿವಿಧ ಬೆಳೆಗಳು ನಷ್ಟವಾಗಿವೆ. ಬಿರುಗಾಳಿ ಸಹಿತ ಮಳೆಗೆ ಕೆಲವೆಡೆ ಮನೆಗಳಿಗೆ ಹಾನಿಯಾಗಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಸೆಪ್ಟೆಂಬರ್ 1ರಿಂದ 9ರವರೆಗೆ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಹೊಸಪೇಟೆ ತಾಲೂಕಿನಲ್ಲಿ ಒಟ್ಟು 16 ಮನೆಗಳು, ಹೂವಿನ ಹಡಗಲಿಯಲ್ಲಿ 130 ಮನೆಗಳು, ಕೊಟ್ಟೂರಲ್ಲಿ 14 ಮನೆಗಳು, ಹರಪನಹಳ್ಳಿ ತಾಲೂಕಿನಲ್ಲಿ ಒಟ್ಟು 35 ಮನೆಗಳಿಗೆ ಭಾಗಶಃ ಹಾನಿಯಾಗಿದ್ದರೆ, ಹೂವಿನಹಡಗಲಿಯಲ್ಲಿ 1 ಮನೆಗೆ ಸಂಪೂರ್ಣ ಹಾನಿಯಾಗಿದೆ. ಜಿಲ್ಲೆಯಲ್ಲಿ 900 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದ್ದರೆ, 25 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಇದನ್ನೂ ಓದಿ | Bengaluru Rain | ಬೋಟ್‌ನಲ್ಲಿ ತೆರಳಿ ಮಳೆ ಹಾನಿ ವೀಕ್ಷಿಸಿದ ಸಿದ್ದರಾಮಯ್ಯ: ಗೋಳು ತೋಡಿಕೊಂಡ ಜನರು
ಕೊಳೆತು ಹೋದ ಈರುಳ್ಳಿ ಬೆಳೆ
ಭಾರಿ ಮಳೆ ಹಿನ್ನೆಲೆಯಲ್ಲಿ ಹೂವಿನಹಡಗಲಿ ತಾಲೂಕಿನ ಉತ್ತಂಗಿಯಲ್ಲಿ ಈರುಳ್ಳಿ ಬೆಳೆ ಕೊಳೆತು ಹೋಗುತ್ತಿದೆ.
ಲಾಭದ ನಿರೀಕ್ಷೆಯಿಂದ ತಾಲೂಕಿನ ಬಹುತೇಕ ರೈತರು ಈರುಳ್ಳಿ ಬೆಳೆದಿದ್ದರು. ಆದರೆ ವರುಣನ ಆರ್ಭಟಕ್ಕೆ ಈರುಳ್ಳಿ ಬೆಳೆ ಮಣ್ಣುಪಾಲಾಗಿದೆ. ಹಗರಿಬೊಮ್ಮನಹಳ್ಳಿ, ಹೊಸಪೇಟೆ ತಾಲೂಕಿನಲ್ಲಿ ಹತ್ತಿ, ಈರುಳ್ಳಿ, ಬಾಳೆ ಸೇರಿ ವಿವಿಧ ಬೆಳೆಗಳು ಜಲಾವೃತವಾಗಿವೆ. ಇದರಿಂದ ಜಿಲ್ಲೆಯ ಐದು ತಾಲೂಕುಗಳ ರೈತರು ಕಂಗಾಲಾಗಿದ್ದಾರೆ.
ತುಂಗಭದ್ರಾ ಜಲಾಶಯ ಭರ್ತಿ
ನಿರಂತರ ಮಳೆಯಿಂದ ಜಿಲ್ಲೆಯ ಹೊಸಪೇಟೆಯ ಬಳಿಯ ಕಲ್ಯಾಣ-ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಡ್ರೋನ್‌ನಲ್ಲಿ ಸೆರೆಯಾಗಿರುವ ತುಂಗಭದ್ರಾ ಜಲಾಶಯದ ಮನಮೋಹಕ ದೃಶ್ಯಗಳು ಗಮನ ಸೆಳೆಯುತ್ತಿವೆ.
ಇದನ್ನೂ ಓದಿ | Rain News | ವೇದಾವತಿ ನದಿ ಪ್ರವಾಹದ ವೇಳೆ ಶನಿ ದೇವಸ್ಥಾನದಲ್ಲಿ ಸಿಲುಕಿದ್ದ ಅರ್ಚಕರು ಸೇರಿ ಏಳು ಜನರ ರಕ್ಷಣೆ