ಬೆಳಗಾವಿ : ಗ್ರಾಮೀಣ ಭಾಗದಲ್ಲಿ ಗ್ರಾಮೀಣ ಕ್ರೀಡೆಗಳಿಗೆ ತನ್ನದೇ ಆದ ವೈಶಿಷ್ಠ್ಯತೆ ಇದೆ. ಆದರೆ ಕೆಲವು ಗ್ರಾಮಗಳಲ್ಲಿ ಪ್ರಾಣಕ್ಕೆ ಕುತ್ತು ತರುವ ರೀತಿಯಲ್ಲಿ ಯಾವುದೇ ಮುಂಜಾಗ್ರತಾ ಕ್ರಮ ವಹಿಸದೆ, ಸಂಬಂಧಪಟ್ಟ ಇಲಾಖೆಯಿಂದ ಅನುಮತಿಯನ್ನೂ ಪಡೆಯದೆಯೇ ಪಂದ್ಯ ಆಯೋಜನೆ ಮಾಡಲಾಗುತ್ತದೆ. ಇದೀಗ ಅಂತಹ ಅಪಾಯಕಾರಿ ಟ್ರ್ಯಾಕ್ಟರ್ ಸ್ಪರ್ಧೆ ಆಯೋಜನೆ ಮಾಡಿದವರ ವಿರುದ್ಧ ಪೊಲೀಸರಿಂದ ಸ್ವಯಂಪ್ರೇರಿತ ದೂರು ದಾಖಲಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಮಕೇರಿ ಗ್ರಾಮದಲ್ಲಿ ಬೀರಲಿಂಗೇಶ್ವರ ಜಾತ್ರೆ ಅಂಗವಾಗಿ ಗುರುವಾರ ಟ್ರ್ಯಾಕ್ಟರ್‌ಗಳ ಹಗ್ಗ ಜಗ್ಗಾಟ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಜೀವದ ಹಂಗು ತೊರೆದು ಪಕ್ಕದಲ್ಲಿಯೇ ನಿಂತ ನೂರಾರು ಜನರ ಮುಂದೆಯೇ ಮನಸೋ ಇಚ್ಛೆ ಟ್ರ್ಯಾಕ್ಟರ್ ಡ್ರೈವ್ ಮಾಡಲಾಗಿತ್ತು. ಅಪಾಯಕಾರಿ ಸ್ಪರ್ಧೆಯ ದೃಶ್ಯಗಳನ್ನು ನೋಡಿದರೆ ಎಂತಹವರಿಗೂ ಜೀವ ಝಲ್ ಎನ್ನುವಂತಿತ್ತು. ಯಾವುದೇ ಮುನ್ನೆಚ್ಚರಿಕೆ ಕ್ರಮ ವಹಿಸದೆ ಆಟ ಆಯೋಜನೆ ಮಾಡಲಾಗಿತ್ತು. ಜೀವ ಪಣಕ್ಕಿಟ್ಟು ಜನರು ಹುಚ್ಚಾಟ ಮೆರೆದಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಸ್ಪರ್ಧೆಯ ವಿಡಿಯೋಗಳು ಸಾಮಾಜಿಕ ಜಾಲತಾಣ ಹಾಗೂ ಸುದ್ದಿಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆಯೇ ಬೆಳಗಾವಿ ಪೊಲೀಸರು ಎಚ್ಚೆತ್ತಿದ್ದಾರೆ. ಕಾರ್ಯಕ್ರಮ ಆಯೋಜನೆ ಮಾಡಿದ ಜಾತ್ರಾ ಕಮಿಟಿಯ ಸ್ಪರ್ಧೆ ಆಯೋಜಕರು ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಟ್ರ್ಯಾಕ್ಟರ್ ಚಾಲಕರ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಕಾರ್ಯಕ್ರಮ ಆಯೋಜಕರು ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಟ್ರ್ಯಾಕ್ಟರ್ ಚಾಲಕರ ಮೇಲೆ ಐಗಳಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 279, 287, ಹಾಗೂ 336 ನೇ ಪ್ರಕಾರ ಕೇಸ್ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ | ಪತಿಗೆ ಮೊಬೈಲ್ ಕೊಡಲು ಹೋದ ಮಹಿಳೆ ಟ್ರ್ಯಾಕ್ಟರ್ ಗೆ ಸಿಲುಕಿ ದಾರುಣ ಸಾವು