ಬೆಂಗಳೂರು: ಒಎಂಆರ್ ಶೀಟ್ ತಿದ್ದಿದ್ದರಿಂದ ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧನವಾಗಿದ್ದ ಅಭ್ಯರ್ಥಿ ದರ್ಶನ್ ಗೌಡ ವಿರುದ್ಧ ಆರೋಪಕ್ಕೆ ಮತ್ತಷ್ಟು ಪುರಾವೆ ದೊರೆತಿವೆ. ಪರೀಕ್ಷೆಯಲ್ಲಿ ಅಡ್ಡದಾರಿ ಮೂಲಕ ಡಬಲ್ ಸ್ಟಾರ್ ಹುದ್ದೆ ಗಿಟ್ಟಿಸಿಕೊಂಡಿರುವುದು ದೃಢವಾಗಿದೆ.
ಎಫ್ಎಸ್ಎಲ್ ವರದಿಯಲ್ಲಿ ಸತ್ಯ ಬಹಿರಂಗವಾಗಿದೆ. ಆರೋಪಿ ದರ್ಶನ್ ಗೌಡ ಪರೀಕ್ಷೆ ಬರೆಯುವ ದಿನ ಸಂಪೂರ್ಣ ಗೊತ್ತಿದ್ದ ಕೆಲವು ಉತ್ತರಗಳನ್ನು ಮಾತ್ರ ಒಎಂಆರ್ ಶೀಟ್‌ನಲ್ಲಿ ಬರೆದಿದ್ದ. ಉಳಿದ ಪ್ರಶ್ನೆಗಳ ಆಯ್ಕೆಗಳನ್ನು ಖಾಲಿ ಬಿಟ್ಟು ಉತ್ತರ ಪತ್ರಿಕೆ ಕೊಟ್ಟು ಹೋಗಿದ್ದ. ಬಳಿಕ ನೇಮಕಾತಿ ವಿಭಾಗದಲ್ಲಿ ಕೆಲಸ ಮಾಡುವರ ಜತೆಗೆ ಡೀಲ್ ನಡೆಸಿದ್ದು, ಒಎಂಆರ್ ಶೀಟ್ ನಂಬರ್ ತಿಳಿಸಿದ್ದಾನೆ. ಹೀಗಾಗಿ ನೇಮಕಾತಿ ವಿಭಾಗದಲ್ಲೆ ಉತ್ತರ ಪತ್ರಿಕೆ ತಿದ್ದಲಾಗಿದೆ.
ಈ ಡೀಲ್‌ನಲ್ಲಿ ಒಬ್ಬ ಮಧ್ಯವರ್ತಿ ಸಹ ಭಾಗಿಯಾಗಿದ್ದ ಎನ್ನಲಾಗಿದೆ. ಆರೋಪಿ ಅಭ್ಯರ್ಥಿ ಸುಮಾರು 80 ಲಕ್ಷ ರೂಪಾಯಿ ನೀಡಿದ್ದು, ಹಣ ಪಡೆದ ಆತನ ಒಎಂಆರ್ ಅನ್ನು ನೇಮಕಾತಿ ವಿಭಾಗದಲ್ಲಿ ತಿದ್ದಲಾಗಿತ್ತು. ಬಳಿಕ ಕೀ ಆನ್ಸರ್ ನೋಡಿ ಮತ್ತೆ ಕಾರ್ಬನ್ ಕಾಪಿ ತಿದ್ದಿದ್ದಾನೆ. ಮುಂದೊಂದು ದಿನ ಸಂಕಷ್ಟ ಎದುರಾಗಬಹುದು ಎಂಬುವುದು ತಿಳಿದಿದ್ದರಿಂದ ಕಲಬುರಗಿಯಲ್ಲಿ ಪಿಎಸ್ಐ ಅಕ್ರಮ ಕೇಸ್ ದಾಖಲಾದಾಗ ಅಲರ್ಟ್ ಅಗಿದ್ದಾನೆ. ಕಾರ್ಬನ್ ಕಾಪಿಗೆ ಕೀ ಆನ್ಸರ್‌ನಲ್ಲಿ ಎಷ್ಟು ಉತ್ತರಗಳು ಸರಿ ಇದ್ದವೋ ಅಷ್ಟೂ ಉತ್ತರ ತುಂಬಿದ್ದ.
ಮೇಲ್ನೋಟಕ್ಕೆ ನೋಡಿದಾಗ ಒಎಂಆರ್ ಶೀಟ್ ಹಾಗೂ ಕಾರ್ಬನ್ ಕಾಪಿಗೆ ವ್ಯತ್ಯಾಸ ಕಂಡಿಲ್ಲ. ಎಫ್ಎಸ್ಎಲ್ ವರದಿಯಲ್ಲಿ ಸತ್ಯ ಬಯಲಾಗಿರುವುದರಿಂದ ಸಿಐಡಿ ಪೊಲೀಸರು ಕೇಸ್ ದಾಖಲು ಮಾಡಿಕೊಂಡಿದ್ದಾರೆ.
ಈ ಮೊದಲು ದರ್ಶನ್ ಗೌಡನನ್ನು ವಶಕ್ಕೆ ಪಡೆದಾಗ ಸಚಿವ ಅಶ್ವತ್ಥ್ ನಾರಾಯಣ ಅವರ ಹೆಸರು ಹೇಳಿದ್ದರಿಂದ ಸಿಐಡಿ ಪೊಲೀಸರು ಬಿಟ್ಟು ಕಳುಹಿಸಿದ್ದರು. ಆದರೆ ವಿರೋಧ ಪಕ್ಷಗಳು ಸಚಿವರ ಒತ್ತಡದಿಂದ ಆರೋಪಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿದ್ದರಿಂದ ಸಿಐಡಿ ಪೊಲೀಸರು ಬಳಿಕ ದರ್ಶನ್‌ಗೌಡನನ್ನು ವಶಕ್ಕೆ ಪಡೆದಿದ್ದರು. ಒಎಂಆರ್ ಶೀಟ್ ತಿದ್ದುವ ಮೂಲಕ ದರ್ಶನ್ ಗೌಡ ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ 4ನೇ ರ‍್ಯಾಂಕ್ ಪಡೆದಿದ್ದ.
ಇದನ್ನೂ ಓದಿ | ಉಗ್ರ ಸಂಘಟನೆ ಸೇರುತ್ತೇವೆ: ಪಿಎಸ್‌ಐ ಅಭ್ಯರ್ಥಿಗಳಿಂದ ಪ್ರಧಾನಿಗೆ ರಕ್ತಪತ್ರ!