ಬೆಂಗಳೂರು: ದಸರಾ ರಜೆಯನ್ನು (Dasara Holiday) ಪುನರ್ ಪರಿಶೀಲಿಸಿ ವಿಸ್ತರಿಸುವಂತೆ ಶಾಲಾ ಶಿಕ್ಷಣ ಇಲಾಖೆಗೆ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘವು ಮನವಿ ಮಾಡಿದೆ. ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ಬಂದ ನಂತರ ಶಾಲಾ ಮಧ್ಯಂತರ ರಜೆಯನ್ನು ನೀಡಲಾಗುತ್ತಿತ್ತು.
ಅಂದರೆ ಅಕ್ಟೋಬರ್ 3 ರಿಂದ ಅಕ್ಟೋಬರ್ 31 ದಸರಾ ರಜೆ ನೀಡಲಾಗುತ್ತಿತ್ತು. ಈ ಮೂಲಕ ನಾಡಿನ ಪರಂಪರೆ, ಆಚರಣೆಗಳನ್ನು ಮಕ್ಕಳು ಅರಿಯಲು ಹಾಗೂ ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಪ್ರೇರಣೆ ನೀಡಲಾಗುತ್ತಿತ್ತು. ಹೀಗಾಗಿ ಇದನ್ನು ದಸರಾ ರಜೆ ಎಂದು ಕರೆಯುತ್ತಿದ್ದರು.
ಆದರೆ ಇತ್ತೀಚಿನ ದಿನಗಳಲ್ಲಿ 29 ದಿನದ ರಜೆಯನ್ನು 14-15 ದಿನಗಳಿಗೆ ಕಡಿತ ಮಾಡಿದ್ದು ಸರಿಯಲ್ಲ. ಹೀಗಾಗಿ ಮಧ್ಯಂತರ ರಜೆಯನ್ನು ಪುನರ್ ಪರಿಶೀಲಿಸಿ ರಜೆ ನೀಡಬೇಕೆಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಪ್ರಸ್ತುತ ಶಾಲಾ ದಿನಗಳ ಸಂಖ್ಯೆ 260ಕ್ಕೂ ಹೆಚ್ಚಳವಾಗಿದೆ. ಈ ಹಿಂದೆ 230 ಶಾಲಾ ದಿನಗಳಿದ್ದವು.
ಶಾಲಾ ಶಿಕ್ಷಣ ಇಲಾಖೆಯು ರಜಾ ಸಹಿತ ಇಲಾಖೆಯಾಗಿದ್ದು ಶಿಕ್ಷಕರಿಗೆ 10 ಗಳಿಕೆ ರಜೆಗಳನ್ನು ಮಾತ್ರ ನೀಡಲಾಗುತ್ತಿದೆ. ಆದರೆ ರಜಾ ರಹಿತ ಇಲಾಖೆಯವರಿಗೆ 30 ಗಳಿಕೆ ರಜೆಗಳನ್ನು ನೀಡಲಾಗುತ್ತಿದೆ. ಅಲ್ಲದೆ ಪೌಢಶಾಲಾ ಶಿಕ್ಷಕರು ಏಪ್ರೀಲ್-ಮೇ ತಿಂಗಳಲ್ಲಿ 10ನೇ ತರಗತಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೆಲಸಗಳಲ್ಲಿ ನಿರತರಾಗಿರುತ್ತಾರೆ. ಹೀಗಾಗಿ ದಸರಾ ರಜೆಗಳನ್ನು ಕಡಿತಗೊಳಿಸಿರುವ ಕ್ರಮ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಅವೈಜ್ಞಾನಿಕವಾಗಿದೆ. ಮಧ್ಯಂತರ ರಜೆಯನ್ನು ಪುನರ್ ಪರಿಶೀಲಿಸಿ ಅ.31ರವರೆಗೆ ವಿಸ್ತರಿಸುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Mysore Dasara : ಅಂತಿಮ ಘಟ್ಟದತ್ತ ಮೈಸೂರು ದಸರಾ; ಅ. 23 – 24ರ ಅರಮನೆ ಕಾರ್ಯಕ್ರಮಗಳಿವು
ಸಚಿವರಿಗೆ ರಜೆ ವಿಸ್ತರಿಸುವಂತೆ ಬಸವರಾಜ ಹೊರಟ್ಟಿ ಸಲಹೆ
ಶಾಲೆಯ ರಜಾ ದಿನಗಳನ್ನು ವಿಸ್ತರಣೆ ಮಾಡುವಂತೆ ಶಿಕ್ಷಣ ಸಚಿವರಿಗೆ ಫೋನ್ ಮೂಲಕವೇ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸಲಹೆ ನೀಡಿದರು. ಮಕ್ಕಳ ಹಿತದೃಷ್ಟಿಯಿಂದ ನವೆಂಬರ್ 1 ರವರೆಗೂ ರಜೆ ವಿಸ್ತರಣೆ ಮಾಡಿ ಎಂದ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಸಲಹೆ ನೀಡಿದರು.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಶಿಕ್ಷಣ ವ್ಯವಸ್ಥೆ ಇವತ್ತು ಸರಿಯಾದ ವ್ಯವಸ್ಥೆಯಲ್ಲಿ ಇಲ್ಲ. ಮೊದಲು ರಜಾ ದಿನಗಳು ನಿಗಧಿ ಆಗಿ ಇರುತ್ತಿದ್ದವು. ಜ್ಞಾನ ಇಲ್ಲದ ಅಧಿಕಾರಿಗಳು ತಮಗೆ ಹೇಗೆಬೇಕೋ ಹಾಗೆ ರಜಾ ದಿನಗಳನ್ನು ನಿಗದಿ ಮಾಡಿದ್ದಾರೆ, ಇದು ಸರಿಯಲ್ಲ ಎಂದು ಕಿಡಿಕಾರಿದರು. ನಾನು ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ಈ ಹಿಂದೆ ಇದ್ದ ಪದ್ದತಿಯನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಆಗ್ರಹಿಸುತ್ತೇನೆ ಎಂದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ