ಚಿಕ್ಕಮಗಳೂರು: ಇಲ್ಲಿನ ಕುಂಭದ್ರೋಣ ಪರ್ವತದಲ್ಲಿರುವ ದತ್ತ ಪೀಠದಲ್ಲಿ ಈಗಾಗಲೇ ದತ್ತಜಯಂತಿ (Datta jayanti) ಸಂಭ್ರಮ ಆರಂಭಗೊಂಡಿದ್ದು, ಇಂದು ದತ್ತ ಮಾಲಾಧಾರಿಗಳ ಮೆರವಣಿಗೆ ಮತ್ತು ನಾಳೆ ಪಾದುಕೆ ದರ್ಶನ ನಡೆಯಲಿದೆ. ಇದರ ಭಾಗವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ. ರವಿ ಅವರು ದತ್ತ ಮಾಲೆ ಧರಿಸಿದ್ದಾರೆ. ಅವರು ಬುಧವಾರ ಬೆಳಗ್ಗೆ ಚಿಕ್ಕಮಗಳೂರು ನಗರದಲ್ಲಿ ಮನೆ ಮನೆಗೆ ತೆರಳಿ ಭಿಕ್ಷಾಟನೆ ಮೂಲಕ ಪಡಿ ಸಂಗ್ರಹಿಸಿದರು.
ಚಿಕ್ಕಮಗಳೂರು ನಗರದ ಶಾಸಕರಾಗಿರುವ ಸಿ.ಟಿ. ರವಿ ಅವರು ದತ್ತ ಪೀಠ ಹೋರಾಟದ ಮುಂಚೂಣಿಯಲ್ಲಿದ್ದವರು. ಪ್ರತಿ ವರ್ಷವೂ ದತ್ತ ಮಾಲಾ ಧಾರಣೆ ಮಾಡಿ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ಬಾರಿಯೂ ಅವರು ಮಾಲೆ ಧರಿಸಿದ್ದು, ಪಡಿ ಸಂಗ್ರಹ ಕಾರ್ಯದಲ್ಲಿ ತೊಡಗಿದರು.
ನಗರದ ನಾರಾಯಣಪುರ, ರಾಘವೇಂದ್ರ ಮಠದ ರಸ್ತೆ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಭಿಕ್ಷಾಟನೆ ನಡೆಸಿದ ಅವರಿಗೆ ಸ್ಥಳೀಯರು ತೆಂಗಿನಕಾಯಿ, ಬಾಳೆಹಣ್ಣು, ಅಕ್ಕಿ, ವಿಳ್ಯೆದೆಲೆ ಅಡಿಕೆ -ಬೆಲ್ಲ ಮತ್ತಿತರ ವಸ್ತುಗಳನ್ನು ನೀಡಿದರು.
ಹೀಗೆ ಸಂಗ್ರಹಿಸಿದ ವಸ್ತುಗಳನ್ನು ಇನಾಂ ದತ್ತಾತ್ರೇಯ ಪೀಠದಲ್ಲಿ ಗುರುವಾರ ನಡೆಯಲಿರುವ ದತ್ತ ಜಯಂತಿಯ ಸಂದರ್ಭದಲ್ಲಿ ಇರುಮುಡಿ ರೂಪದಲ್ಲಿ ದತ್ತಾತ್ರೇಯ ಸ್ವಾಮಿಗೆ ಅರ್ಪಣೆ ಮಾಡಲಾಗುತ್ತದೆ.
ಬುಧವಾರ ಶೋಭಾ ಯಾತ್ರೆ, ಬಿಗಿ ಭದ್ರತೆ
ದತ್ತ ಜಯಂತಿ ಸಂಭ್ರಮ ಮಂಗಳವಾರವೇ ಆರಂಭಗೊಂಡಿದೆ. ಡಿಸೆಂಬರ್ ೬ರಂದು ಅನಸೂಯಾ ಜಯಂತಿ ಅಂಗವಾಗಿ ಸಾವಿರಾರು ಮಹಿಳೆಯರು ಸಂಕೀರ್ತನಾ ಯಾತ್ರೆಯಲ್ಲಿ ಪಾಲ್ಗೊಂಡರು. ಡಿಸೆಂಬರ್ ಏಳರಂದು ನಗರದಲ್ಲಿ 60 ಸಾವಿರ ಭಕ್ತರಿಂದ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಇದಕ್ಕಾಗಿ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ೪೫೦೦ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಡಿಸೆಂಬರ್ ೮ರಂದು ದತ್ತ ಜಯಂತಿ ಆಚರಣೆ ನಡೆಯಲಿದೆ.
ಇದನ್ನೂ ಓದಿ | Datta Jayanti | ದತ್ತಪೀಠಕ್ಕೆ ಹೋಗುವ ಮಾರ್ಗದಲ್ಲಿ ಮೊಳೆಗಳ ರಾಶಿ; ವಿಧ್ವಂಸಕ ಕೃತ್ಯಕ್ಕೆ ಸಂಚು ಎಂದ ಸಿ.ಟಿ. ರವಿ