Site icon Vistara News

ದತ್ತ ಪೀಠ ವಿವಾದ : ಪ್ರತ್ಯೇಕವಾಗಿ ಮುಜಾವರ್‌, ಅರ್ಚಕರ ನೇಮಕ ಮಾಡಿದ ಆದೇಶ ಎತ್ತಿಹಿಡಿದ ಹೈಕೋರ್ಟ್‌

Datta peeta

#image_title

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್‌ಗಿರಿಯ ದತ್ತಾತ್ರೇಯ ಪೀಠದಲ್ಲಿ (ದತ್ತ ಪೀಠ ವಿವಾದ) ಮುಸ್ಲಿಂ ಮುಜಾವರ್‌ಗಳಿಗೆ ಮಾತ್ರ ಪೂಜೆ ಅವಕಾಶ ನೀಡಬೇಕು ಎಂಬ ಬೇಡಿಕೆಯನ್ನು ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠ ತಳ್ಳಿಹಾಕಿದೆ. ಪೂಜಾ ವಿಧಿ ವಿಧಾನ ನೆರವೇರಿಸಲು ಮುಜಾವರ್‌ ಒಬ್ಬರನ್ನೇ ನೇಮಕ ಮಾಡಿ ಹಿಂದಿನ ರಾಜ್ಯ ಸರ್ಕಾರ ನೇಮಕ ಮಾಡಿದ್ದ ಆದೇಶವನ್ನು ವಜಾ ಮಾಡಿದ್ದ ಏಕಸದಸ್ಯ ಪೀಠದ ಆದೇಶವನ್ನು ಪೀಠ ಎತ್ತಿ ಹಿಡಿದಿದೆ.

ದತ್ತಪೀಠದಲ್ಲಿ ಪೂಜೆ ನೆರವೇರಿಸಲು ಮುಜಾವರ್ ಅವರನ್ನು ನೇಮಕ ಮಾಡಿ 2018ರ ಮಾರ್ಚ್‌ 19ರಂದು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಶ್ರೀಗುರು ದತ್ತಾತ್ರೇಯ ಪೀಠ ದೇವಸ್ಥಾನ ಸಂವರ್ಧನಾ ಸಮಿತಿ 2018ರ ಏಪ್ರಿಲ್‌ನಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ್ದ ನ್ಯಾ. ಪಿ ಎಸ್‌ ದಿನೇಶ್‌ ಕುಮಾರ್‌ ಅವರ ನೇತೃತ್ವದ ಏಕ ಸದಸ್ಯ ಪೀಠವು 2021ರ ಸೆಪ್ಟೆಂಬರ್‌ 28ರಂದು ಸರ್ಕಾರದ ಆದೇಶ ರದ್ದುಪಡಿಸಿ, ಪ್ರಕರಣವನ್ನು ಹಿಂದಿರುಗಿಸಿತ್ತು. ಹಾಗೆಯೇ, ಪ್ರಕರಣದ ಕುರಿತು ರಚಿಸಲಾಗಿದ್ದ ಉನ್ನತ ಮಟ್ಟದ ಸಮಿತಿ ನೀಡಿರುವ ವರದಿ ಗಣನೆಗೆ ತೆಗೆದುಕೊಳ್ಳದೇ ಪ್ರಕರಣವನ್ನು ಹೊಸದಾಗಿ ಪರಿಗಣಿಸಬೇಕು ನಿರ್ದೇಶಿಸಿತ್ತು. ಈ ತೀರ್ಪು ಪ್ರಶ್ನಿಸಿ ಗೌಸ್ ಮೊಹಿಯುದ್ದೀನ್ ಮೇಲ್ಮನವಿ ಸಲ್ಲಿಸಿದ್ದರು.

ಇದೀಗ ಕೋರ್ಟ್‌ ನ್ಯಾಯಮೂರ್ತಿ ದಿನೇಶ್‌ ಕುಮಾರ್‌ ಅವರ ಪೀಠದ ಆದೇಶವನ್ನು ಎತ್ತಿಹಿಡಿದಿದೆ.. ಆ ಮೂಲಕ 2022ರಲ್ಲಿ ನ್ಯಾಯಾಲಯದ ನಿರ್ದೇಶನದಂತೆ ಹೊಸದಾಗಿ ಎರಡೂ ಧರ್ಮದ ಸಂಪ್ರದಾಯಗಳ ಪ್ರಕಾರ ಮುಜಾವರ್ ಹಾಗೂ ಅರ್ಚಕರಿಂದ ಪೂಜಾವಿಧಿಗೆ ಅವಕಾಶ ನೀಡಿ ಹೊರಡಿಸಿದ್ದ ಆದೇಶ ಮುಂದುವರಿಕೆಗೆ ಗೀನ್‌ ಸಿಗ್ನಲ್‌ ನೀಡಿದಂತಾಗಿದೆ.

ಏಕಸದಸ್ಯಪೀಠ ತೆಗೆದುಕೊಂಡಿದ್ದ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ. ಹಿಂದೂ ಮತ್ತು ಮುಸ್ಲಿಂ ಸಮುದಾಯದ ಸದಸ್ಯರ ನಡುವೆ ಯಾವುದೇ ವಿವಾದ ಇಲ್ಲದ ಕಾರಣಗಳು ಐದು ದಶಕಗಳ ಹಿಂದೆ ಹುಟ್ಟಿದ ವಿವಾದಕ್ಕೆ ಅಂತ್ಯ ಹಾಡುವುದೇ ಒಳ್ಳೆಯದು ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ : ದತ್ತಪೀಠ ವಿವಾದ | ಒಬ್ಬ ಮುಸ್ಲಿಂ ಸೇರಿದಂತೆ 8 ಸದಸ್ಯರ ಆಡಳಿತ ಮಂಡಳಿ ರಚನೆ, ಅರ್ಚಕರ ನೇಮಕಕ್ಕೂ ಅಧಿಕಾರ

Exit mobile version