ಚಿಕ್ಕಮಗಳೂರು: ಇಲ್ಲಿನ ಬಾಬಾ ಬುಡನ್ಗಿರಿಯ ಶ್ರೀಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಇನಾಂ ದತ್ತಪೀಠದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಸೋಮವಾರ (ಡಿ. ೫) ದತ್ತಾತ್ರೇಯನಿಗೆ ಅರ್ಚಕರಿಂದ ಪೂಜೆ ನೆರವೇರಿದೆ.
ಡಿಸೆಂಬರ್ ೬ರಿಂದ ೮ರವರೆಗೆ ನಡೆಯಲಿರುವ ದತ್ತ ಜಯಂತಿಗೆ ಅರ್ಚಕರ ನೇಮಕ ಆಗಿರುವ ಹಿನ್ನೆಲೆಯಲ್ಲಿ ಸೋಮವಾರ ದತ್ತಪೀಠಕ್ಕೆ ಭೇಟಿ ನೀಡಿರುವ ಅರ್ಚಕರು, ಇದೇ ವೇಳೆ ಪೂಜೆಯನ್ನು ನೆರವೇರಿಸಿದ್ದಾರೆ.
ದತ್ತ ಪೀಠದಲ್ಲಿ ಸೋಮವಾರ ಸಂಜೆ ಅರ್ಚಕರಿಂದ ಪೂಜೆ ಪುನಸ್ಕಾರಗಳು ನೆರವೇರಿದೆ. ವಿಶ್ವ ಹಿಂದು ಪರಿಷತ್ತು, ಭಜರಂಗದಳ ನೇತೃತ್ವದಲ್ಲಿ ವಿಶೇಷ ಪೂಜಾ ಕಾರ್ಯಗಳು ನೆರವೇರಿದೆ. ಎರಡು ದಿನದ ಹಿಂದೆ ಇಬ್ಬರು ಅರ್ಚಕರನ್ನು ಸರ್ಕಾರ ನೇಮಕ ಮಾಡಿತ್ತು.
ಇದನ್ನೂ ಓದಿ | SSLC Exam 2023 | ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ; ಮಾ. 31 ರಿಂದಲೇ ಎಕ್ಸಾಮ್ ಶುರು
ಮಾತು ಉಳಿಸಿಕೊಂಡಿರುವ ಬಿಜೆಪಿ
ದತ್ತಪೀಠದಲ್ಲಿ ಡಿಸೆಂಬರ್ ೬ರಿಂದ ೮ರವರೆಗೆ ನಡೆಯಲಿರುವ ದತ್ತ ಜಯಂತಿ ಹಿನ್ನೆಲೆಯಲ್ಲಿ ದತ್ತಪೀಠಕ್ಕೆ ಅರ್ಚಕರನ್ನು ನೇಮಿಸಿ ಡಿಸೆಂಬರ್ ೩ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈ ಮೂಲಕ 2018ರ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಮಾತನ್ನು ಬಿಜೆಪಿ ಸರ್ಕಾರ ಉಳಿಸಿಕೊಂಡಿದೆ. ಸರ್ಕಾರ ರಚಿಸಿದ ನಿರ್ವಹಣಾ ಮಂಡಳಿಯ ಶಿಫಾರಸಿನ ಮೇರೆಗೆ ಇಬ್ಬರು ಅರ್ಚಕರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಶೃಂಗೇರಿ ಮೂಲದ ಶ್ರೀಕಾಂತ್, ಚಿಕ್ಕಬಳ್ಳಾಪುರದ ಸಂದೀಪ್ ಅವರು ನೇಮಕಗೊಂಡ ಅರ್ಚಕರಾಗಿದ್ದಾರೆ.
ದತ್ತ ಜಯಂತಿಗೆ ಅನುಮತಿ ಕೊಟ್ಟಿತ್ತು ಹೈಕೋರ್ಟ್
ರಾಜ್ಯ ಸರ್ಕಾರ ದತ್ತ ಪೀಠ ಪೂಜೆಗೆ ಅರ್ಚಕರನ್ನು ನೇಮಿಸಲು ನಿರ್ವಹಣಾ ಸಮಿತಿ ರಚಿಸಿ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಅರ್ಚಕರ ನೇಮಕ ಪ್ರಶ್ನಿಸಿ ಗೌಸ್ ಮೌಸಿನ್ ಶಾ ಖಾದ್ರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ದತ್ತ ಜಯಂತಿ ಆಚರಣೆಗೆ ಅವಕಾಶವನ್ನು ನೀಡಿತ್ತು. ಹೀಗಾಗಿ ಈ ಬಾರಿ ಯಾವುದೇ ಗೊಂದಲವಿಲ್ಲದೆ ದತ್ತಜಯಂತಿ ನಡೆಸಲು ಅವಕಾಶ ದೊರೆತಂತಾಗಿದೆ.
ದತ್ತ ಪೀಠ ವಿವಾದವೇನು?
ಬಾಬಾಬುಡನ್ ಗಿರಿ ಅಥವಾ ಶ್ರೀಗುರುದತ್ತಾತ್ರೇಯ ಪೀಠ ಮುಸ್ಲಿಮರಿಗೆ ಸೇರಿದ್ದೇ, ಹಿಂದುಗಳಿಗೆ ಸೇರಿದ್ದೇ ಎನ್ನುವುದು ಹಿಂದಿನಿಂದಲೂ ವಿವಾದಕ್ಕೆ ಕಾರಣವಾಗಿದೆ. ಸರ್ಕಾರಿ ದಾಖಲೆಗಳಲ್ಲಿ ಶ್ರೀ ಗುರು ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಎಂದು ಹೇಳಲಾಗಿದೆ. ಈ ಸ್ಥಳವನ್ನು ಬಾಬಾ ಬುಡನ್ ಗಿರಿ ಎಂದು ಕೆಲವರು ಕರೆದರೆ, ಇನ್ನು ಕೆಲವರು ಇನಾಂ ದತ್ತಾತ್ರೇಯ ಪೀಠ ಎನ್ನುತ್ತಾರೆ. ಒಂದು ಕಾಲದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ತಾಣವಾಗಿ ಇದು ಗುರುತಿಸಲ್ಪಟ್ಟಿತ್ತು. ಆದರೆ, ಬಳಿಕ ವಿವಾದ ಹುಟ್ಟಿಕೊಂಡಿತು.
ದತ್ತಪೀಠಕ್ಕೆ ಹಿಂದೂ ಮತ್ತು ಮುಸ್ಲಿಮರು ನೂರಾರು ವರ್ಷಗಳಿಂದ ನಡೆದುಕೊಳ್ಳುತ್ತಿದ್ದರು. ಆದರೆ, ಬಿಜೆಪಿ 1998ರಲ್ಲಿ ದತ್ತ ಮಾಲಾ ಅಭಿಯಾನ ಆರಂಭಿಸಿದ ನಂತರ ಕ್ಷೇತ್ರವು ದೇಶವ್ಯಾಪಿ ಗಮನ ಸೆಳೆಯಿತು. ಸಂಘ ಪರಿವಾರದ ಪ್ರಯತ್ನಗಳಿಗೆ ಪ್ರತಿಯಾಗಿ ಕೋಮು ಸೌಹಾರ್ದ ವೇದಿಕೆಯೂ ಚಿಕ್ಕಮಗಳೂರಿನಲ್ಲಿ ಸಮಾವೇಶಗಳನ್ನು ಆಯೋಜಿಸುವ ಮೂಲಕ ಗಮನ ಸೆಳೆಯುತ್ತಿತ್ತು. ಕ್ಷೇತ್ರದಲ್ಲಿದ್ದ ಮುಜಾವವರು ಎರಡೂ ಪದ್ಧತಿಗಳ ಪ್ರಕಾರ ಪೂಜೆ ಮಾಡಿಕೊಡುತ್ತಿದ್ದಾರೆ.
ಇದನ್ನೂ ಓದಿ | Bus Tyre Blast | ಬಸ್ ಟಯರ್ ಬ್ಲಾಸ್ಟ್; ಬಸ್ ಒಳಗಿದ್ದ ಪ್ರಯಾಣಿಕನ ಕಾಲು ಕಟ್!