ದಾವಣಗೆರೆ: ಇಲ್ಲಿನ ಜಗಳೂರು ಠಾಣೆ (Jagalur Police) ಮುಂಭಾಗ ಪೊಲೀಸರು ಮಹಿಳೆಯರು, ಮಕ್ಕಳ ಮೇಲೆ ಮನಬಂದಂತೆ ಲಾಠಿ ಪ್ರಯೋಗ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸುಖಾಸುಮ್ಮನೆ ಮನೆಯ ಮಕ್ಕಳನ್ನು ಠಾಣೆಗೆ ಕರೆದುಕೊಂಡು ಬಂದಿದ್ದು, ಕೇಳಲು ಬಂದವರಿಗೆ ಲಾಠಿಯಿಂದ ಹೊಡೆದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಜಗಳೂರಿನಲ್ಲಿ ಐದು ವರ್ಷಕ್ಕೊಮ್ಮೆ ದೊಡ್ಡ ಮಾರಮ್ಮನ ಜಾತ್ರೆ ನಡೆಯುತ್ತದೆ. ಈ ಜಾತ್ರೆ ಆಚರಣೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದಿದೆ. ಗಲಾಟೆ ವೇಳೆ ಕೆಲವು ಕಿಡಿಗೇಡಿಗಳು ಬುಧವಾರ (ಏ.26) ರಾತ್ರಿ ವಾಹನಗಳ ಗ್ಲಾಸ್ ಪುಡಿ ಪುಡಿ ಮಾಡಿ ಹಾನಿ ಮಾಡಿದ್ದಾರೆ. ಈ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಗ್ರಾಮದ ಹತ್ತಕ್ಕೂ ಹೆಚ್ಚು ಯುವಕರನ್ನು ಠಾಣೆಗೆ ಕರೆ ತಂದಿದ್ದಾರೆ.
ಇದರಿಂದ ಸಿಟ್ಟಿಗೆದ್ದ ಪೋಷಕರು, ಅನಗತ್ಯವಾಗಿ ನಮ್ಮ ಮಕ್ಕಳನ್ನು ಕರೆತರಲಾಗಿದೆ ಎಂದು ಠಾಣೆ ಮುಂದೆ ಜಮಾಯಿಸಿದ್ದಾರೆ. ಈ ವೇಳೆ ಠಾಣೆ ಮುಂಭಾಗ ನಿಂತಿದ್ದವರಿಗೆ ಪೊಲೀಸರು ಲಾಠಿ ಬೀಸಿದ್ದಾರೆ. ಮಹಿಳೆಯರು, ಮಕ್ಕಳು ಎನ್ನದೆ ಲಾಠಿ ಪ್ರಯೋಗ ಮಾಡಿದ್ದರಿಂದ ಹಲವರು ಗಾಯಗೊಂಡಿದ್ದಾಗಿ ಆರೋಪಿಸಿದ್ದಾರೆ. ಜಗಳೂರು ಪೊಲೀಸರ ವರ್ತನೆಗೆ ಕಿಡಿಕಾರಿದ್ದು, ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಬರುವಂತೆ ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ: Illicit Relationship: ಪತಿ, ಮಕ್ಕಳಿದ್ದರೂ ಸಣ್ಣ ವಯಸ್ಸಿನ ಯುವಕನ ಮೋಹಿಸಿದಳು; ಅನೈತಿಕ ಸಂಬಂಧಕ್ಕೆ ಬಲಿಯಾದಳು
ಆದರೆ, ಸ್ಥಳೀಯರ ಈ ಎಲ್ಲ ಆರೋಪವನ್ನು ಜಗಳೂರು ಪೊಲೀಸರು ತಳ್ಳಿ ಹಾಕಿದ್ದಾರೆ. ವಶಕ್ಕೆ ಪಡೆದ ಯುವಕರನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಠಾಣೆಗೆ ನುಗ್ಗಲು ಯತ್ನಿಸಿದಾಗ ಅವರನ್ನು ಲಾಠಿಯಿಂದ ಚದುರಿಸಲಾಯಿತು ಅಷ್ಟೇ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.